ಬೆಂಗಳೂರು, ಜ.13: ಪುತ್ರ ಕಾಂತೇಶ್ ಅವರಿಗೆ ಲೋಕಸಭೆ ಟಿಕೆಟ್ ನೀಡುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್ ಅವರಿಗೆ ಚುನಾವಣಾ ಅಖಾಡಕ್ಕೆ ಇಳಿಸಲು ಕಸರತ್ತು ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಈಶ್ವರಪ್ಪ ಅವರು ಮಾತುಕತೆ ನಡೆಸಿದ್ದರು. ಭೇಟಿ ಬಗ್ಗೆ ಇಂದು ಮಾತನಾಡಿದ ಈಶ್ವರಪ್ಪ, ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಫಲಪ್ರದ ಆಗಿದೆ. ರಾಜ್ಯದ ಕೆಲವು ವಿಚಾರಗಳನ್ನ ಅಮಿತ್ ಶಾ ಗಮನಕ್ಕೆ ತಂದಿದ್ದೇನೆ ಎಂದರು.
ಪುತ್ರ ಕಾಂತೇಶ್ಗೆ ಹಾವೇರಿ ಲೋಕಸಭೆ ಟಿಕೆಟ್ ಕೇಳಿದ್ದೇನೆ. ಪಾರ್ಲಿಮೆಂಟರಿ ಬೋರ್ಡ್, ಚುನಾವಣಾ ಸಮಿತಿ ಇದೆ. ಟಿಕೆಟ್ ಕೊಡುವುದು ಬಿಡುವುದು ಅವರ ತೀರ್ಮಾನ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಇನ್ನೊಂದು ವರ್ಷದಲ್ಲಿ ಮಥುರಾ, ಕಾಶಿ ದೇಗುಲದ ಪಕ್ಕದಲ್ಲಿರುವ ಮಸೀದಿ ಧ್ವಂಸವಾಗುತ್ತದೆ: ಕೆಎಸ್ ಈಶ್ವರಪ್ಪ
ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಆರೋಪಗಳ ಬಗ್ಗೆ ಮಾತನಾಡಿದ ಈಶ್ವರಪ್ಪ, ರಾಮನ ವಿಚಾರದಲ್ಲಿ ರಾಜಕಾರಣ ಮಾಡಿದರೆ ನಾವು ಸರ್ವನಾಶ ಆಗಿಹೋಗಲಿ. ನಾವು ರಾಮಮಂದಿರ ಕಟ್ಟುತ್ತಿದ್ದೇವೆ, ಅದಕ್ಕೆ ಕೋರ್ಟ್ ಸಹ ಸಹಕರಿಸಿದೆ. ಭಿನ್ನಾಭಿಪ್ರಾಯ ಇದ್ದವರೂ ಸಹಕಾರ ನೀಡಿದ್ದಾರೆ. ಎಲ್ಲಾ ಹಿಂದೂಗಳು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಹೋಗಬೇಕು ಎಂದರು.
ಅಯೋಧ್ಯೆಯಲ್ಲಿ ದಲಿತರನ್ನು ಅರ್ಚಕರನ್ನಾಗಿ ಮಾಡುತ್ತಾರಾ ಅಂತಾ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಅಯೋಧ್ಯೆ ರಾಮನ ದೇವಸ್ಥಾನಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದು ಒಬ್ಬ ದಲಿತ. ಆದರೆ ಅವರನ್ನು ನಾನು ದಲಿತ ಅಂತಾ ಹೇಳುವುದಿಲ್ಲ. ಅವರೊಬ್ಬರು ಹಿಂದೂ ಅಂತಲೇ ಹೇಳುತ್ತೇನೆ. ಸದ್ಯ 24 ಅರ್ಚಕರ ನೇಮಕ ಆಗಿದ್ದು, ಈ ಪೈಕಿ ಇಬ್ಬರು ದಲಿತರು. ನಾನು ಅವರನ್ನು ದಲಿತ ಅನ್ನಲ್ಲ, ಹಿಂದೂ ಎನ್ನುತ್ತೇನೆ ಎಂದರು.
ಸಿದ್ದರಾಮಯ್ಯ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡುವ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ರಾಮ ಮಂದಿರ ಬರೀ ಸಿದ್ದರಾಮಯ್ಯ ಭಾವನೆಗಳು ಅಲ್ಲ. ಇಡೀ ದೇಶದ ಹಿಂದೂಗಳ ಭಾವನೆಗಳು. ರಾಮ ನಮ್ಮ ದೇವರು. ಸಿದ್ದರಾಮಯ್ಯ ಸಹ ರಾಮನ ಭಕ್ತರೇ. ನಾನು ಟೀಕೆ ಮಾಡಲ್ಲ. ಸಿದ್ದರಾಮಯ್ಯ ರಾಮ ಮಂದಿರಕ್ಕೆ ಹೋಗುತ್ತಾರೆ ಅಂದರೆ ನಾನು ಸಂತೋಷದಿಂದ ಸ್ವಾಗತ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಹೇಳಿದ ರೀತಿಯಲ್ಲಿ ಇತರೆ ಕೈ ನಾಯಕರು ರಾಮ ಮಂದಿರಕ್ಕೆ ಹೋಗಲಿ. ನಾವೆಲ್ಲರೂ ಒಟ್ಟಾಗಿದ್ದೇವೆ ಅಂತಾ ತೋರಿಸಬೇಕು. ಮೋದಿ ಕಾಲದಲ್ಲಿ ರಾಮ ಮಂದಿರ ಆಗಬೇಕು ಅಂತ ಇತ್ತು. ಆದರೆ ಇದನ್ನು ಕಾಂಗ್ರೆಸ್ನವರು ಟೀಕೆ ಮಾಡುತ್ತಿದ್ದಾರೆ. ನಾನು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಅಂತಾನೂ ಹೇಳಲ್ಲ, ಡಬಲ್ ಸ್ಟ್ಯಾಂಡರ್ಡ್ ಅಂತಾನೂ ಹೇಳಲ್ಲನ ಎಂದರು.
ರಾಜ್ಯದಲ್ಲಿ ಮೂರು ಡಿಸಿಎಂ ಆಯ್ಕೆ ಚರ್ಚೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಮೂರು ಡಿಸಿಎಂ ಅಂತ ಹೇಳುತ್ತಿದ್ದಾರೆ. ನಮ್ಮ ಆಡಳಿತಾವಧಿಯಲ್ಲಿ ಆಡಳಿತಕ್ಕೆ ಅನುಕೂಲ ಆಗಲಿ ಅಂತ ಮಾಡಿದ್ದೆವು. ಆದರೆ ಪೈಪೋಟಿಗೆ ಡಿಸಿಎಂ ಮಾಡಿರಲಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಹುದ್ದೆಗಾಗಿ ಪೈಪೋಟಿ ನಡೆಯುತ್ತಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ