ಚಿಕ್ಕಮಗಳೂರು: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಕೇಳಿಬಂದಿದ್ದ ತೆರಿಗೆ ವಂಚನೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆಸ್ತಿ ಖರೀದಿ ವೇಳೆ ಅಕ್ರಮ ಎಸಗಿ ಸರ್ಕಾರಕ್ಕೆ ಶಾಸಕ ರಾಜೇಗೌಡ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರಿ, ವಕೀಲ ವಿಜಯಾನಂದ ಎನ್ನುವವರು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ವಿಜಯಾನಂದ ಪ್ರಕರಣ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಕಾಫಿಡೇ ಕಂಪನಿಯ ಮಾಲೀಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಕಾಫಿ ತೋಟವನ್ನು ಶಾಸಕ ರಾಜೇಗೌಡ ಅವರು ಖರೀದಿಸಿದ್ದರು. ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ದೂರಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಪನ ಪತ್ರದ (ಅಫಿಡವಿಟ್) ಮೂಲಕ ಸ್ಪಷ್ಟನೆ ನೀಡಿರುವ ವಕೀಲ ವಿಜಯಾನಂದ, ಜೀವರಾಜ್ ಅವರು ದೂರಿನ ಅರ್ಜಿಯ ವಿವರಣೆಯನ್ನು ನನಗೆ ನೀಡಿಲ್ಲ. ಅದರ ಪ್ರತಿಯನ್ನೂ ತೋರಿಸಿಲ್ಲ. ರಾಜೇಗೌಡ ಅವರ ಆಸ್ತಿ ಖರೀದಿ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಜೀವರಾಜ್ ಅವರ ಒಡ್ಡಿದ ಆಮಿಷಕ್ಕೆ ಬಲಿಯಾಗಿ ಸಹಿ ಮಾಡಿದ್ದೆ. ಇದೀಗ ನಾನು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರು ವಾಪಸ್ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪದ ದೂರು ಲೋಕಾಯುಕ್ತದಲ್ಲಿ ದಾಖಲಾಗಿದೆ ಎಂದು ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ‘ದೂರು ದಾಖಲು ಮಾಡಿದ್ದರೂ ಎಫ್ಐಆರ್ ಮಾಡಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದರು.
ಶಾಸಕರು ₹ 200 ಕೋಟಿ ಆಸ್ತಿ ಹೊಂದಿದ್ದು, ₹ 13 ಕೋಟಿ ಮುದ್ರಾಂಕ ಶುಲ್ಕ ಹಾಗೂ ₹ 60 ಕೋಟಿ ಆದಾಯ ತೆರಿಗೆ ಕಟ್ಟದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಈ ಸಂಬಂಧ ಕೊಪ್ಪ ತಾಲ್ಲೂಕಿನ ವಿಜಯಾನಂದ ಎನ್ನುವ ವಕೀಲರು ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ ಎಂದು ಜೀವರಾಜ್ ಹೇಳಿದ್ದರು.
ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಹೋಬಳಿ ಹಲಸೂರಿನಲ್ಲಿ 211 ಎಕರೆ ಜಾಮೀನನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ತಮ್ಮ ಪತ್ನಿ ಮತ್ತು ಮಗನ ಹೆಸರಿನಲ್ಲಿ ಖರೀದಿಸಿದ್ದಾರೆ. ಪ್ರಸ್ತುತ ಶಭಾನ್ ರಂಜಾನ್ ಟ್ರಸ್ಟ್‌ನಲ್ಲಿ ನಾಲ್ವರು ಪಾಲುದಾರರಿದ್ದು, ಇಬ್ಬರು ನಿವೃತ್ತಿ ಹೊಂದುತ್ತಿದ್ದಂತೆ ಶಾಸಕರ ಪತ್ನಿ ಪಾಲುದಾರರಾಗುತ್ತಾರೆ. ಕೆಲವು ದಿನಗಳ ಬಳಿಕ ಮತ್ತಿಬ್ಬರು ನಿವೃತ್ತಿ ಹೊಂದಿದ್ದು, ಶಾಸಕರ ಮಗ ರಾಜ್‍ದೇವ್ ಟ್ರಸ್ಟ್ ಪ್ರವೇಶಿಸಲಿದ್ದಾರೆ. ಈ ಮೂಲಕ ಶಾಸಕರ ಪತ್ನಿ ಮತ್ತು ಮಗ ಅರ್ಧದಷ್ಟು ಪಾಲುದಾರಿಕೆ ಪಡೆಯಲಿದ್ದಾರೆ ಎಂದು ದೂರಿದ್ದರು.
ಶೃಂಗೇರಿ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜೇಗೌಡ ಮತ್ತು ಮಾಜಿ ಶಾಸಕ ಜೀವರಾಜ್ ಅವರು ಮುಂದಿನ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇಬ್ಬರೂ ಪರಸ್ಪರರ ವಿರುದ್ಧ ಅರೋಪ, ಪ್ರತ್ಯಾರೋಪ ಮಾಡಿಕೊಳ್ಳುವುದು ಸಾಮಾನ್ಯ ಎನಿಸಿದೆ.
Published On - 11:43 am, Sun, 27 November 22