‘ಕೈ’ಗನ್ನಡಿ! ಕೈ ಪಾಳಯದಲ್ಲಿ ಕುಟುಂಬ ರಾಜಕಾರಣ -ಪುತ್ರ ವ್ಯಾಮೋಹಿಗಳಿಗೆ ಮಣೆ ಹಾಕತ್ತಾ ಪ್ರಜಾಪ್ರಭುತ್ವವಾದಿ ಕಾಂಗ್ರೆಸ್?

ಕಾಂಗ್ರೆಸ್ ಪಾಳಯದಲ್ಲಿ ಕುಟುಂಬ ರಾಜಕಾರಣಕ್ಕೆ ನಾಯಕರು ಮುಂದಾಗಿದ್ದಾರೆ. ತಾವು, ತಮ್ಮ ಜೊತೆಗೆ ತಮ್ಮ ಮಕ್ಕಳಿಗೂ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದಾರೆ.

‘ಕೈ’ಗನ್ನಡಿ! ಕೈ ಪಾಳಯದಲ್ಲಿ ಕುಟುಂಬ ರಾಜಕಾರಣ -ಪುತ್ರ ವ್ಯಾಮೋಹಿಗಳಿಗೆ ಮಣೆ ಹಾಕತ್ತಾ ಪ್ರಜಾಪ್ರಭುತ್ವವಾದಿ ಕಾಂಗ್ರೆಸ್?
ಕೈ ಪಾಳಯದಲ್ಲಿ ಕುಟುಂಬ ರಾಜಕಾರಣ -ಪುತ್ರ ವ್ಯಾಮೋಹಿಗಳಿಗೆ ಮಣೆ ಹಾಕತ್ತಾ ಪ್ರಜಾಪ್ರಭುತ್ವವಾದಿ ಕಾಂಗ್ರೆಸ್?
Follow us
TV9 Web
| Updated By: ಆಯೇಷಾ ಬಾನು

Updated on: Nov 26, 2022 | 1:00 PM

ಬೆಂಗಳೂರು: ಪುತ್ರ ವ್ಯಾಮೋಹಕ್ಕೂ, ರಾಜಕೀಯಕ್ಕೂ ಬಿಟ್ಟೂ ಬಿಡಿಸಲಾರದ ಬೆಸುಗೆ ಇದ್ದೇ ಇದೆ. ಪುತ್ರ-ಪುತ್ರಿ ವ್ಯಾಮೋಹಿ ರಾಜಕಾರಣಿಗಳ ದೊಡ್ಡ ದಂಡೇ ಕರ್ನಾಟಕದ ರಾಜಕೀಯದಲ್ಲಿ ಕಬಂದ ಬಾಹು ಬೀರಿಕೊಂಡು ಆಳವಾಗಿ ಬೇರೂರಿದೆ. ಅದೆಷ್ಟೇ ಪ್ರಯತ್ನ ಪಟ್ಟರೂ, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಅದೆಷ್ಟೇ ಸೂತ್ರಗಳನ್ನು ಹೆಣೆದರೂ, ಕುಟುಂಬ ರಾಜಕಾರಣಕ್ಕೆ ನಮ್ಮ ಪಾರ್ಟಿ ಬೆಲೆ ನೀಡುವುದಿಲ್ಲ ಅಂತ ಉದ್ದುದ್ದ ಭಾಷಣ ಮಾಡಿದರೂ- ತಮ್ಮ ಪೀಳಿಗೆಗಳನ್ನು ರಾಜಕೀಯದಲ್ಲಿ ನೆಲೆ ನಿಲ್ಲಿಸುವ ರಾಜಕಾರಣಿಗಳು ಪಾಠ ಕಲಿಯುವುದು ಸಾಧ್ಯವೇ ಇಲ್ಲವೇನೋ.

ಈಗ ಕಾಂಗ್ರೆಸ್ ಪಕ್ಷವನ್ನೇ ತೆಗೆದುಕೊಳ್ಳಿ.. ರಾಜಸ್ಥಾನದ ಉದಯಪುರದಲ್ಲಿ ಚಿಂತನ್ ಮಂಥನ್ ನಡೆಸಿದ ಕೈ ನಾಯಕರು ಯುವಕರಿಗೆ ಆದ್ಯತೆ, ಒಂದು ಕುಟುಂಬಕ್ಕೆ ಒಂದೇ ಟಿಕೇಟ್ ಅಂತೆಲ್ಲ ಚರ್ಚೆ ಮಾಡಿದರು. ಆದರೆ ಅದ್ಯಾಕೋ ಏನೋ ಟಿಕೇಟ್ ಆಕಾಂಕ್ಷಿಗಳಿಗೆ ಮಾತ್ರ ಅದರ ಬಗ್ಗೆ ಆಸಕ್ತಿ ಉಳಿದಿಲ್ಲ. ಘಟಾನುಘಟಿ ರಾಜಕಾರಣಿಗಳು ತಾವು ಮಾತ್ರ ಟಿಕೇಟ್ ಕೇಳ್ತಿಲ್ಲ, ತಮ್ಮ ಮಕ್ಕಳಿಗೂ ಟಿಕೆಟ್ ಕೊಡಿ ಅಂತ ದುಂಬಾಲು ಬಿದ್ದಿದ್ದಾರೆ.

ಕಾಂಗ್ರೆಸ್ ನಲ್ಲೀಗ 2 ಲಕ್ಷ ಡಿ.ಡಿ ಕಟ್ಟಿ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾಯಿತು. ಹೀಗಿರುವಾಗಲೇ ಹೊಸದಾಗಿ ಕಾಂಗ್ರೆಸ್ ಟಿಕೆಟ್ ಕೇಳುತ್ತಿರುವ ಅಪ್ಪ ಮಕ್ಕಳ ಪಡೆಯೇ ದೊಡ್ಡದಾಗಿ ರೆಡಿಯಾಗಿದೆ. ಒಂದೇ ಕ್ಷೇತ್ರ ಅಥವಾ ಮತ್ತೊಂದು ಕ್ಷೇತ್ರ ಅಂತ ಟಿಕೆಟ್ ಕೇಳುತ್ತಿರುವ ಅಪ್ಪ ಮಕ್ಕಳ ಪುತ್ರ-ಪುತ್ರಿ ವ್ಯಾಮೋಹಿಗಳ ಸಂಖ್ಯೆ 10 ಕ್ಕೂ ಹೆಚ್ಚಾಗಿದೆ ಎನ್ನುವುದು ಕಾಂಗ್ರೆಸ್ ನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.

ಈಗಾಗಲೇ ಹಾಲಿ ಶಾಸಕರಾಗಿರುವ ಅಪ್ಪ ಮಕ್ಕಳ ಜೋಡಿ ಕಡಿಮೆಯೇನಿಲ್ಲ. ಹಾಲಿ ಶಾಸಕರಾಗಿರುವ ಅಪ್ಪ ಮಕ್ಕಳ ಜೊತೆಗೆ ಹೊಸದಾಗಿ ಲಿಸ್ಟ್ ಗೆ ಸೇರಿಕೊಳ್ಳಲು ನಂಗೂ ಇರಲಿ ನಮ್ಮಪ್ಪಂಗೂ ಇರಲಿ ಅಂತ ದುಂಬಾಲು ಬೀಳುತ್ತಿರುವವರು ಅದು ಹೇಗೆ ಪ್ರಜಾಪ್ರಭುತ್ವದ ರಕ್ಷಕರಾಗಬಹುದು? ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬೆಳಗಾಗಿ ಅರ್ಜಿ ಸಲ್ಲಿಸುವ ಅಪ್ಪ-ಮಕ್ಕಳ ಜೋಡಿ ಸಂಖ್ಯೆ 10ಕ್ಕೂ ಹೆಚ್ಚು ಏರಿಕೆಯಾಗಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಂದಲೇ ಕ್ಯೂ ಶುರುವಾಗಿ ಹತ್ತಾರು ಮಂದಿಗೆ ಬಂದು ನಿಂತಿದೆ. ಹಾಲಿ ಶಾಸಕರೂ ಆಗಿರುವ ಸಿದ್ದರಾಮಯ್ಯ ಪುತ್ರ ಯತೀಂದ್ರ ಈ ಬಾರಿಯೂ ಟಿಕೆಟ್ ಆಕಾಂಕ್ಷಿ. ತಮ್ಮ ತಂದೆ ವರುಣ ಕ್ಷೇತ್ರಕ್ಕೆ ಬಾರದೇ ಹೋದರೆ ವರುಣ ಅಖಾಡದಲ್ಲಿ ಯತೀಂದ್ರ ಸಿದ್ದರಾಮಯ್ಯ ಟಿಕೆಟ್ ಆಕಾಂಕ್ಷಿ. ತಾವು ರಾಜಕಾರಣ ಮಾಡಿದ್ದು ಸಾಲದು ಅಂತ ಹಾಲಿ ಶಾಸಕ ಪಿಟಿ ಪರಮೇಶ್ವರ ನಾಯಕ್‌ ಮತ್ತು ಅವರ ಪುತ್ರ ಭರತ್ ಶಿರಹಟ್ಟಿಯಿಂದ ಟಿಕೆಟ್ ಅರ್ಜಿ ಸಲ್ಲಿಸಿದ್ದಾರೆ. ಪಾವಗಡದ ಶಾಸಕ ವೆಂಕಟರಮಣಪ್ಪ ಹಾಗೂ ಪುತ್ರ ವೆಂಕಟೇಶ್ ಇಬ್ಬರೂ ಪಾವಗಡ ಕ್ಷೇತ್ರಕ್ಕೆ ಅರ್ಜಿ ಹಾಕಿದ್ದಾರೆ.‌

ಇದನ್ನೂ ಓದಿ: Constitution Day 2022: ಸಂವಿಧಾನವೇ ಭಾರತದ ಶಕ್ತಿ; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

ಮಾಜಿ ಶಾಸಕ ದಿವಾಕರ ಬಾಬು ಹಾಗೂ ಅವರ ಪತ್ರ ಹನುಮ ಕಿಶೋರ್ ಇಬ್ಬರೂ ಬಳಾರಿ ಕ್ಷೇತ್ರಕ್ಕೆ, ಮಾಜಿ ಸಚಿವ ಡಾ.ಎಚ್‌. ಸಿ. ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರ ಹಾಗೂ ಅವರ ಪತ್ರ ಸುನೀಲ್ ಬೋಸ್ ಟಿ ನರಸೀಪುರ ಕ್ಷೇತ್ರ, ಮತ್ತೊಬ್ಬ ಮಾಜಿ ಸಚಿವ ಶಿವಾನಂದ ಪಾಟೀಲ ಅವರು ವಿಜಯಪುರ ನಗರ ಹಾಗೂ ಅವರ ಪುತ್ರಿ ಸಂಯುಕ್ತಾ ಪಾಟೀಲ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಟಿಕೇಟ್ ಕೊಡಿ ಅಂತಿದ್ದಾರೆ‌.

ಕಳೆದ ಬಾರಿ ಸಿದ್ದರಾಮಯ್ಯಗೆ ಕ್ಷೇತ್ರ ತ್ಯಾಗ ಮಾಡಿ ಕರ್ಣನಾಗಿದ್ದ ಬಿಬಿ ಚಿಮ್ಮನಕಟ್ಟಿ ಹಾಗೂ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಬಾದಾಮಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಗಳು. ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಹಾಗೂ ಅವರ ಪುತ್ರ ಅಲ್ಲಂ ಪ್ರಶಾಂತ್ ಅವರು ಬಳ್ಳಾರಿ ಕ್ಷೇತ್ರಕ್ಕೆ, ಬೆಂಗಳೂರಿನ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜ ನಗರ ಕ್ಷೇತ್ರಕ್ಕೆ ಕೃಷ್ಣಪ್ಪ ಪುತ್ರ ಪ್ರಿಯಾಕೃಷ್ಣ, ರಾಮಲಿಂಗಾರೆಡ್ಡಿ ಬಿಟಿಎಂ ಬಡಾವಣೆ ಹಾಗೂ ಪುತ್ರಿ ಸೌಮ್ಯಾರೆಡ್ಡಿ ಜಯನಗರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ‌‌.

ಮಾಜಿ ಸಚಿವ ಎಚ್ ಆಂಜನೇಯ ಶಾಸಕ (ಹೊಳಲ್ಕೆರೆ) ಮತ್ತು ಅವರ ಅಳಿಯ (ಅಕ್ಕನ ಮಗ) ಎಚ್‌.ಎಸ್.ಬಸವಂತಪ್ಪ ಅವರು ಮಾಯಕೊಂಡ ಕ್ಷೇತ್ರದ ಟಿಕೆಟ್‌ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಹಾಗೂ ಪುತ್ರ ಪ್ರಕಾಶ್ ಕೋಳಿವಾಡ ಇಬ್ಬರಲ್ಲಿ ಒಬ್ಬರಿಗಾದರೂ ಟಿಕೇಟ್‌ ಕೊಡಿ ಅಂತಿದ್ದಾರೆ.

ವಯೋಸಹಜ ಕಾರಣಗಳಿಂದ ಬಳಲುತ್ತಿದ್ದರೂ ಕಾಗೋಡು ತಿಮ್ಮಪ್ಪ ಸಾಗರದಿಂದ ಟಿಕೇಟ್ ಡಿಮ್ಯಾಂಡ್ ಇಟ್ಟಿದ್ದರೆ ಅದೇ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಪುತ್ರಿಯೂ ಟಿಕೇಟ್ ಗೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನ ಮೋಟಮ್ಮ ಕೂಡ 2 ಲಕ್ಷ ಡಿ.ಡಿ.ಯೊಂದಿಗೆ ಕಾಂಗ್ರೆಸ್ ಟಿಕೇಟ್ ಗಾಗಿ ಕ್ಯೂ ನಿಂತಾಗಿದೆ.

ಬಹುಶಃ ಕುಟುಂಬ ರಾಜಕಾರಣದ ವಿರುದ್ದವಾಗಿ ಮಾತನಾಡುವುದಕ್ಕೆ ಮೂರು ಪಕ್ಷಗಳಿಗೂ ನೈತಿಕತೆ ಇದೆಯಾ ಎಂಬುದು ಈಗ ಸಾರ್ವಜನಿಕ ಚರ್ಚೆಯಾಗಿದೆ.‌ ರಾಜಕೀಯ ಜಿದ್ದಾಜಿದ್ದಿ ಶುರುವಾದಾಗೆಲ್ಲ ನಿಮ್ಮದು ಕುಟುಂಬ ರಾಜಕಾರಣ ನಮ್ಮದಲ್ಲ ಅಂತ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಕೆಸರೆರಚಾಟ ನಡೆಸುತ್ತವೆ. ಆದರೆ ಟಿಕೇಟ್ ಬೇಕೆ ಬೇಕು ಅಂತ ಪಟ್ಟು ಹಿಡಿದವರ ಪಟ್ಟಿ ನೋಡಿದರೆ ಕಾಂಗ್ರೆಸ್ ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಎಷ್ಟರ ಮಟ್ಟಿಗೆ ಉಳಿದುಕೊಂಡಿದೆ ಎಂಬುದು ಪ್ರಶ್ನೆ.

ಕೆಲವು ಹಾಲಿ ಶಾಸಕರಿಗೆ ವಯಸ್ಸಿನ ಕಾರಣದಿಂದ ತಮ್ಮ ಕ್ಷೇತ್ರ ತಮ್ಮ ಕುಟುಂಬದ ಬಳಿಯೇ ಉಳಿಸಿಕೊಳ್ಳಬೇಕು ಎಂಬ ಅಸ್ತಿತ್ವದ ಪ್ರಶ್ನೆ. ಮತ್ತೆ ಕೆಲವು ಮಾಜಿ ಹಿರಿಯ ಶಾಸಕರಿಗೆ ತಮ್ಮ ಪ್ರಾಬಲ್ಯ ಕುಂದುತ್ತಿದೆ, ತಮ್ಮ ಮಕ್ಕಳಾದರೂ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲಿ ಎಂಬ ಪುತ್ರ ವ್ಯಾಮೋಹ. ಏಳೆಂಟು ಬಾರಿ ಗೆದ್ದಿರುವ ಆರ್ ವಿ ದೇಶಪಾಂಡೆಯಂತ ನಾಯಕರೇ ತಮ್ಮ ಮಕ್ಕಳ ಭವಿಷ್ಯ ರಾಜಕೀಯದಲ್ಲಿ ನೆಲೆಯಾಗಲಿ ಅಂತ ಅಧಿಕಾರಕ್ಕಾಗಿ ಬಯಕೆ ಮುಂದಿಡುವಾಗ ಉದಯರಪುರದಂತ ಹತ್ತು ಸಭೆಗಳು ನಡೆದರೂ, ಅದೇನೆ ಫಾರ್ಮೂಲಾ ಹೆಣೆದರೂ ಕುಟುಂಬ ರಾಜಕಾರಣಕ್ಕೆ ಕಡಿವಾಣ ಬೀಳುವುದಿಲ್ಲವೇನೋ!? (ವರದಿ: ಪ್ರಸನ್ನ ಗಾಂವ್ಕರ್, ಟಿವಿ 9, ಬೆಂಗಳೂರು)