ಲೋಕಸಭೆ ಚುನಾವಣೆ: ಮೈತ್ರಿ ಅಭ್ಯರ್ಥಿಯಾಗಿ ಡಾ ಮಂಜುನಾಥ್ ಸ್ಪರ್ಧೆ ಬಹುತೇಕ ಖಚಿತ

| Updated By: ಗಣಪತಿ ಶರ್ಮ

Updated on: Mar 06, 2024 | 7:38 AM

ಡಾ ಸಿಎನ್ ಮಂಜುನಾಥ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಇದೀಗ ಅಧಿಕೃತವಾಗಿ ಅವರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿದೆ. ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿಯವರ ನಿವಾಸದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಂಜುನಾಥ್ ಸ್ಪರ್ಧೆ ಬಗ್ಗೆ ಪ್ರಸ್ತಾಪವಾಗಿದೆ. ಆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಲೋಕಸಭೆ ಚುನಾವಣೆ: ಮೈತ್ರಿ ಅಭ್ಯರ್ಥಿಯಾಗಿ ಡಾ ಮಂಜುನಾಥ್ ಸ್ಪರ್ಧೆ ಬಹುತೇಕ ಖಚಿತ
ಡಾ. ಸಿಎನ್ ಮಂಜುನಾಥ್
Follow us on

ಬೆಂಗಳೂರು, ಮಾರ್ಚ್​ 6: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ (Dr CN Manjunath) ಸ್ಪರ್ಧಿಸುವುದು ಬಹುತೇಕ ಫಿಕ್ಸ್ ಆಗಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ (ಸದ್ಯ ಕಾಂಗ್ರೆಸ್​ನ ಡಿಕೆ ಸುರೇಶ್​​ ಸಂಸದರಾಗಿರುವ ಕ್ಷೇತ್ರ) ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.

ಈ ವಿಚಾರವಾಗಿ ಮಂಗಳವಾರ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಸಭೆಯಲ್ಲಿಯೂ ಚರ್ಚೆಯಾಗಿದೆ. ಉಭಯ ಪಕ್ಷದ ನಾಯಕರು ಮಹತ್ವದ ಸಭೆ ನಡೆಸಿದ್ದು, ಸಮಾಲೋಚನೆ ಮಾಡಿದ್ದಾರೆ. ಸಭೆಯಲ್ಲಿ ಮಾಜಿ‌ ಸಚಿವರಾದ ಸಿಪಿ ಯೋಗೆಶ್ವರ್, ಮುನಿರತ್ನ, ಶಾಸಕ ಎಂ ಕೃಷ್ಣಪ್ಪ, ನಿಖಿಲ್ ಕುಮಾರಸ್ವಾಮಿ ಸೇರಿ ಉಭಯ ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ.

ಸಭೆಯ ಬಹುತೇಕ ಭಾಗ ಡಾ. ಮಂಜುನಾಥ್ ಸ್ಪರ್ಧೆ ಕುರಿತು ಗಂಭೀರ ಸಮಾಲೋಚನೆಗೇ ಮೀಸಲಾಯಿತು. ಸಭೆಯಲ್ಲಿ ಬಿಜೆಪಿ ನಾಯಕರೇ ಮಂಜುನಾಥ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆರ್​​ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಮೊದಲು ಮಂಜುನಾಥ್ ಹೆಸರು ಪ್ರಸ್ತಾಪಿಸಿದ್ದಾರೆ. ಅದಕ್ಕೆ, ಇತರ ಎಲ್ಲಾ ಬಿಜೆಪಿ, ಜೆಡಿಎಸ್ ನಾಯಕರು ದನಿಗೂಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗಿಶ್ವರ್ ಅವರಿಂದಲೂ ಡಾ. ಮಂಜುನಾಥ್ ಸ್ಪರ್ಧೆಗೆ ಒಲವು ವ್ಯಕ್ತವಾಗಿದೆ. ಈ ಮಧ್ಯೆ, ಕುಮಾರಸ್ವಾಮಿ ಅವರು ಪ್ರತಿ ಸದಸ್ಯರ ಸಲಹೆ ಕೇಳಿದ್ದಾರೆ.

ಬಳಿಕ ಮಾತನಾಡಿದ ಕುಮಾರಸ್ವಾಮಿ, ಈಗ ನಾವು ತೀರ್ಮಾನ ತೆಗೆದುಕೊಳ್ಳುವುದು ಬೇಡ. ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗೊಣ. ಯಾರೇ ಸ್ಪರ್ಧೆ ಮಾಡಿದರೂ ಎನ್‌ಡಿಎ ಅಭ್ಯರ್ಥಿ ಗೆಲ್ಲಲು ಕೆಲಸ ಮಾಡೋಣ. ನಮ್ಮ ಅಭ್ಯರ್ಥಿ ಗೆಲ್ಲಿಸಲು ಒಗ್ಗಟ್ಟಿನಿಂದ ಹೋರಾಟ ಮಾಡುವ ಎಂದಿದ್ದಾರೆ.

ಶತಾಯಗತಾಯ ಈ ಬಾರಿ ಸಂಸದ ಡಿಕೆ ಸುರೇಶ್ ಅವರನ್ನು ಸೋಲಿಸಬೇಕು ಎಂದು ಬಿಜೆಪಿ, ಜೆಡಿಎಸ್ ನಾಯಕರು ಪಣತೊಟ್ಟಿದ್ದಾರೆ.

ಇದನ್ನೂ ಓದಿ: ಅಳಿಯ ಡಾ ಮಂಜುನಾಥ್ ರಾಜಕೀಯ ಪ್ರವೇಶ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ದೇವೇಗೌಡ

ಡಾ. ಮಂಜುನಾಥ್ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಅಳಿಯನೂ ಹೌದು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಅಳಿಯ ರಾಜಕೀಯ ಪ್ರವೇಶಿಸುವುದು ಬೇಡ ಎಂಬರ್ಥದಲ್ಲಿ ಮಾತನಾಡಿದ್ದರು. ಮಂಜುನಾಥ್ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮಂಜುನಾಥ್ ರಾಜಕಾರಣ ಪ್ರವೇಶಿಸುವುದು ಬೇಡ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.

ಮತ್ತೊಂದೆಡೆ, ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರೇ ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ