ಬೆಂಗಳೂರು, ಮಾರ್ಚ್ 09: ಲೋಕಸಭೆ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದು, ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಿಜೆಪಿ (BJP) ಹೈಕಮಾಂಡ್ ಮೈಸೂರಿನಲ್ಲಿ (Mysore) ಈ ಬಾರಿ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೂಲಕ ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಆಗಿರೋದನ್ನು ನಾನು ಹೇಳಲ್ಲ. ಆದರೆ, 28 ಕ್ಷೇತ್ರಗಳಿಗೆ ಉತ್ತಮ ಅಭ್ಯರ್ಥಿ ಕೊಡುತ್ತೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 3-4 ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳಲಿದೆ. 2 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಪರವಾಗಿದೆ ವಾತಾವರಣವಿದೆ. ನರೇಂದ್ರ ಮೋದಿಯವರ ಯೋಜನೆಗಳನ್ನು ಜನರು ಮೆಚ್ಚಿದ್ದಾರೆ. ನರೇಂದ್ರ ಮೋದಿ ನಾಯಕತ್ವ ಉತ್ತಮ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. 28 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿ ಆಯ್ಕೆ ಮುಂದುವರೆದಿದೆ ಎಂದರು.
ರಾಜ್ಯದ ಎಲ್ಲ ಅಭ್ಯರ್ಥಿ ಬಗ್ಗೆಯೂ ವರಿಷ್ಠರು ಅವಲೋಕಿಸಿದ್ದಾರೆ. 23-24-25 ಪ್ರಶ್ನೆ ಅಲ್ಲ, ಅತ್ಯುತ್ತಮ ಫಲಿತಾಂಶದ ಇತಿಹಾಸವನ್ನು ಬಿಜೆಪಿ ನಿರ್ಮಿಸಲಿದೆ. 3-4 ದಿನಗಳಲ್ಲಿ ಅಭ್ಯರ್ಥಿ ಅಯ್ಕೆ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ: ಕರ್ನಾಟಕದ ನಾಯಕರಿಗೆ ಮತ್ತೆ ಬಿಜೆಪಿ ಹೈಕಮಾಂಡ್ ಬುಲಾವ್
ಜಯದೇವ ಡಾ. ಮಂಜುನಾಥ್ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು ಮಂಜುನಾಥ್ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಮಾಧ್ಯಮದವರ ಬಾಯಲ್ಲೇ ಮೊದಲು ಕೇಳುತ್ತಿರುವುದು ಎಂದು ಜಾರಿಕೊಂಡರು.
ಸೋಮವಾರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಇದೆ. ಬರ ನಿರ್ವಹಣೆಗೆ ಪೂರ್ವ ತಯಾರಿ ಮಾಡಿಲ್ಲ. ಸುಮ್ಮನೇ ಕೇಂದ್ರ ಸರ್ಕಾರದತ್ತ ಆರೋಪ ಮಾಡುತ್ತಿದ್ದಾರೆ. ಆದೇಶಕ್ಕೂ ಮುನ್ನ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಈಗ ನೀರಿನ ಸಮಸ್ಯೆ ಸೃಷ್ಟಿಯಾಗಿದೆ, ಈಗ ಏನಂತಾರೆ ಡಿಕೆ ಶಿವಕುಮಾರ್? ಹೀಗಾಗಿ ಸರ್ಕಾರದ ವಿರುದ್ಧ ಸೋಮವಾರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ 52 ಎಲ್ಇಡಿ ವಾಹನಗಳು ತಲುಪುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಬರದಿಂದ ಜನರು ತತ್ತರಗೊಂಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಬರಗಾಲ ಇದೆ, ಆದರೆ ಅಲ್ಲಿನ ಸಿಎಂಗಳು ಕೇಂದ್ರದದ ಮೇಲೆ ಯಾವುದೇ ಆಪಾದನೆ ಮಾಡದೆ, ಬರ ನಿರ್ವಹಣೆ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಇಲ್ಲಿನ ಮುಖ್ಯಮಂತ್ರಿಗಳು ಮಾತ್ರ, ಮೋದಿಯವರನ್ನು ಟೀಕಿಸುತ್ತಾ ಬರ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Sat, 9 March 24