ಆಮಿಷ ತೋರಿಸಿ ಮತಾಂತರ, ದೇಶದ ವೋಟಿಂಗ್ ಸಮೀಕ್ಷೆಯಲ್ಲಿ ಬಹಿರಂಗ: ಈಶ್ವರಪ್ಪ

| Updated By: Rakesh Nayak Manchi

Updated on: Sep 16, 2022 | 11:45 AM

ಹಿಂದುಳಿದ, ದಲಿತ, ಬಡವರಿಗೆ ವಿವಿಧ ಆಮಿಷಗಳನ್ನು ತೋರಿಸಿ ಮತಾಂತರ ಮಾಡುತ್ತಿದ್ದಾರೆ. ದೇಶದ ವೋಟಿಂಗ್ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಆಮಿಷ ತೋರಿಸಿ ಮತಾಂತರ, ದೇಶದ ವೋಟಿಂಗ್ ಸಮೀಕ್ಷೆಯಲ್ಲಿ ಬಹಿರಂಗ: ಈಶ್ವರಪ್ಪ
ಆವಿಷಗಳನ್ನು ಹಾಕಿ ಮತಾಂತರ ಮಾಡಲಾಗುತ್ತದೆ ಎಂದ ಕೆ.ಎಸ್.ಈಶ್ವರಪ್ಪ
Follow us on

ಮೈಸೂರು: ಹಿಂದುಳಿದ, ದಲಿತ, ಬಡವರಿಗೆ ವಿವಿಧ ಆಮಿಷಗಳನ್ನು ತೋರಿಸಿ ಮತಾಂತರ ಮಾಡುತ್ತಿದ್ದಾರೆ. ದೇಶದ ವೋಟಿಂಗ್ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಹೇಳಿದ್ದಾರೆ. ಮತಾಂತರ ನಿಷೇಧ ವಿಧೇಯಕಕ್ಕೆ ಕಾಂಗ್ರೆಸ್ ವಿರೋಧ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಯಾರಾದರೆ ಸ್ವಯಂ ಪ್ರೇರಿತವಾಗಿ ಮತಾಂತರವಾದರೆ ತಪ್ಪೇನಿಲ್ಲ. ಸದನದಲ್ಲಿ ನಿನ್ನೆ ನಡೆದಿದ್ದು ಚಾರಿತ್ರಿಕ ಸನ್ನಿವೇಶ, ಕಾಂಗ್ರೆಸ್​ನ ಕೆಲ ನಾಯಕರು ಬಿಲ್ ಹರಿದು ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್​ನವರಿಂದ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಲಾಗಿದೆ. ಸೋನಿಯಾಗೆ ಸಂತೃಪ್ತಿ ಪಡಿಸಲು ಬಿಲ್ ಹರಿದು ಹಾಕಿದ್ದಾರೆ. ಈ ವಿಧೇಯಕ ಅಂಗೀಕಾರವಾಗಿರುವುದು ಇತಿಹಾಸ ಸೃಷ್ಟಿಸಿದಂತೆ. ಈ ಮೂಲಕ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ ಎಂದರು.

ಎಲ್ಲಿ ಮತಾಂತರ ನಡೆಯುತ್ತದೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅರ್ಚಕರ ಮನೆ ಹುಡುಗಿಯನ್ನು ಮುಸ್ಲಿಂ ಹುಡುಗ ಪ್ರೀತಿಸಿ ಮತಾಂತರವಾಗುತ್ತಾನೆ. ಡಿ.ಕೆ.ಶಿವಕುಮಾರ್ ಅವರು ಬಂದರೆ ಅವರನ್ನೆ ಕರೆದು ಕೊಂಡು ಹೋಗಿ ತೋರಿಸುತ್ತೇನೆ. ಮತಾಂತರ ಮಾಡಿಸಿದ ಅರ್ಚಕರ ಮನೆ ತೋರಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್​ ಪಕ್ಷದ ಭಾರತ ಜೋಡೋ ಯಾತ್ರೆ ಬಗ್ಗೆ ಹೇಳಿಕೆ ನೀಡಿದ ಈಶ್ವರಪ್ಪ, ಅಖಂಡ ಭಾರತವನ್ನು ತುಂಡು ಮಾಡಿದವರು ಕಾಂಗ್ರೆಸಿಗರು. ಪಾಕಿಸ್ತಾನ, ಹಿಂದೂಸ್ತಾನ ಒಡೆದವರು ಕಾಂಗ್ರೆಸಿಗರು, ಪಾಕಿಸ್ತಾನ ಹಿಂದೂಸ್ತಾನ ಬೇರೆ ಬೇರೆಯಾಗಿರಬಾರದು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಆತ್ಮಕ್ಮೆ ಶಾಂತಿ ಸಿಗಬೇಕಾದರೆ ಪಾಕಿಸ್ತಾನ ಮತ್ತು ಹಿಂದೂಸ್ತಾನ ಒಂದಾಗಬೇಕು. ಹಿಂದೆ ಮಾಡಿದ ತಪ್ಪಿಗೆ ಈಗ ಪ್ರಾಯಶ್ಚಿತ್ತವಾಗಿ ಕಾಂಗ್ರೆಸ್ ಭಾರತ ಜೋಡೋ ಯಾತ್ರೆ ಮಾಡುತ್ತಿದೆ ಎಂದು ಹೇಳಿದರು.

ಆರ್ಥಿಕ ಸಬಲರಿಗೆ ಮೀಸಲಾತಿ ಯಾಕೆ ಬೇಕು?

ಮೀಸಲಾತಿ ವಿಚಾರವಾಗಿ ಹೇಳಿಕೆ ನೀಡಿದ ಈಶ್ವರಪ್ಪ, ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಯಾಕೆ ಮೀಸಲಾತಿ ಬೇಕು? ಎಷ್ಟು ವರ್ಷಗಳಿಂದ ಖರ್ಗೆಯವರು ರಾಜಕೀಯದಲ್ಲಿ ಇದ್ದಾರೆ? ಖರ್ಗೆಯವರು ಮಂತ್ರಿಯಾಗಿ ಆರ್ಥಿಕವಾಗಿ ಸಬಲ ಹೊಂದಿದ್ದಾರೆ. ಆರ್ಥಿಕವಾಗಿ ಮೇಲೆ ಬಂದ ಮೇಲೂ ಯಾಕೆ ಮೀಸಲಾತಿ ಬೇಕು? ಇಂತಹವರಿಗೆ ಮೀಸಲಾತಿ ನಿಲ್ಲಿಸಬೇಕು. ಎಲ್ಲಾ ದಲಿತ ನಾಯಕರಿಂದ ಮೀಸಲಾತಿ ದುರುಪಯೋಗ ಆಗುತ್ತಿದೆ. ನಾನು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಬರುತ್ತಿದ್ದೇನೆ. ನಾನು ಯಾವ ಮೀಸಲಾತಿ ಬಳಸುತ್ತಿಲ್ಲ ಎಂದರು.

ಕೋಟಿ ಕೋಟಿ ಹಣ ಸಿಕ್ಕಿರುವುದನ್ನು ಜನ ನೋಡಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ವಿಚಾರ ಎಂಬ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕೋಟಿ ಕೋಟಿ ಹಣ ಸಿಕ್ಕಿರುವುದನ್ನು ಜನ ನೋಡಿದ್ದಾರೆ. ಕಳ್ಳತನ ಮಾಡಿದ ಕಳ್ಳ ಸಂದರ್ಭವನ್ನು ನೆನೆಸಿದಂತಾಗಿದೆ. ಡಿ.ಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದಿದ್ದಾರೆ, ಅವರು ಜಾಮೀನಿನ ಮೇಲೆ‌ ಹೊರಗಿದ್ದಾರೆ. ಈ ರೀತಿ ಹೇಳಿಕೆ ಶೋಭೆ ತರುವುದಿಲ್ಲ. ಅವರು ಮುಕ್ತವಾಗಿ ತನಿಖೆ ಎದುರಿಸಲಿ. ನಿರಪರಾಧಿಯಾಗಿ ಬರಲಿ‌ ಅಂತಾ ನಾನು ಕೂಡ ಹಾರೈಸುತ್ತೇನೆ. ಇದು ರಾಜಕೀಯದ ದೊಂಬರಾಟ ಎಂಬ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರು ಕ್ಷಮೆ ಯಾಚಿಸಬೇಕು ಎಂದರು.

Published On - 11:45 am, Fri, 16 September 22