ರಾಜಕೀಯ ಟೀಕೆ ಓಕೆ, ಆದರೆ ಅಸಭ್ಯ ಹೇಳಿಕೆ ಯಾಕೆ? ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನೆ
Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಹುಬ್ಬಳ್ಳಿಯಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನ ಆಯೋಜಿಸಿರುವುದಾಗಿ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ದೇಶದಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಕರೆ ನೀಡಲಾಗಿದೆ. ಅದರಂತೆ ಧಾರವಾಡದಲ್ಲಿ ಸಪ್ಟೆಂಬರ್ 17 ಮತ್ತು 18ರಂದು ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ.
ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಎಚ್ಚರಿಕೆಯಿಂದ ಮಾತನಾಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡ್ತಿದ್ದ ಅವರು, ರಾಜಕೀಯದಲ್ಲಿ ಯಾರೇ ಆಗಲಿ ಅಸಭ್ಯ ವರ್ತನೆ ತೋರಬಾರದು ಎಂದರು.
ಸಿ.ಟಿ ರವಿಯವರಿಗೆ ಲೂಟಿ ರವಿ ಅಂತಾ ಸಿದ್ದರಾಮಯ್ಯ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂದು ಪ್ರಶ್ನಿಸಿರುವ ಪ್ರಲ್ಹಾದ್ ಜೋಶಿ, ಸಿ.ಟಿ ರವಿ ಅವರು ಕೂಡ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ತಿಳಿ ಹೇಳಿದ್ದಾರೆ. ಸಿ.ಟಿ ರವಿ ಹಾಗು ಸಿದ್ದರಾಮಯ್ಯ ಅವರ ನಡುವಿನ ಟಾಕ್ ವಾರ್ ನಲ್ಲಿ ಇಬ್ಬರದ್ದು ತಪ್ಪಿದೆ. ನಾನು ಸಂಸದನಾಗಿ ಆಯ್ಕೆ ಆದ ಮೇಲೆ ಮಾಜಿ ಪ್ರಧಾನಿ ದಿ. ವಾಜಪೇಯಿ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಈಗ ಪ್ರಧಾನಿ ಮೋದಿ ಅವರ ಕ್ಯಾಬಿನೆಟ್ ನಲ್ಲಿ ಕಾರ್ಯನಿರ್ವಹಿಸ್ತಿದ್ದೇನೆ. ರಾಜಕಾರಣಿಗಳಾಗಿ ದೊಡ್ಡ ಹುದ್ದೆಯಲ್ಲಿದ್ದರು, ಹೇಗೆ ಮಾತಾಡಬೇಕು ಎಂಬುದಕ್ಕೆ ಇಬ್ಬರು ಉತ್ತಮ ನಿದರ್ಶನ ಎಂದು ಜೋಶಿ ಇದೇ ವೇಳೆ ಅಭಿಪ್ರಾಯ ಪಟ್ಟರು.
ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಸೇವಾ ಪಾಕ್ಷಿಕ
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಹುಬ್ಬಳ್ಳಿಯಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನ ಆಯೋಜಿಸಿರುವುದಾಗಿ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ದೇಶದಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಕರೆ ನೀಡಲಾಗಿದೆ. ಅದರಂತೆ ಧಾರವಾಡದಲ್ಲಿ ಸಪ್ಟೆಂಬರ್ 17 ಮತ್ತು 18ರಂದು ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸೆಪ್ಟೆಂಬರ್ 18 ರಂದು ಜಿಲ್ಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಂದು ನುರಿತ ತಜ್ಞ ವೈದ್ಯರುಗಳಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ತಪಾಸಣೆ ಜರುಗಲಿದೆ. ಅಲ್ಲದೇ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಧಾರವಾಡ ಜಿಲ್ಲೆಯಲ್ಲಿ ಗಿನ್ನಿಸ್ ರೆಕಾರ್ಡ್ ನಿರ್ಮಾಣದ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಜೋಶಿ ಹೇಳಿದರು.
ಪ್ರಧಾನಿ ಶ್ರೀ @narendramodi ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಏರ್ಪಡಿಸಿರುವ ಸೇವಾ ಪಾಕ್ಷಿಕದ ಭಾಗವಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಉಚಿತ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಇತರ ಸೇವಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. #SevaPakhwada pic.twitter.com/KbrJK6BaxJ
— Pralhad Joshi (@JoshiPralhad) September 16, 2022
ಬಿಡಿಎ ಹಗರಣ ಆರೋಪದಿಂದ ಬಿಎಸ್ ವೈ ಶುದ್ಧ ಹಸ್ತರಾಗಿ ಬರುತ್ತಾರೆ
ಬಿ.ಡಿ.ಎಗೆ ಸಂಬಂಧ ಪಟ್ಟ ಪ್ರಕರಣದಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಆರೋಪಮುಕ್ತರಾಗಿ ಬರ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರು ಪ್ರಸ್ತುತ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿಲ್ಲ. ಭಾರತದ ಕಾನೂನಿನ ವ್ಯವಸ್ಥೆ ಅಡಿಯಲ್ಲಿ ತನಿಖೆ ನಡೆಯಲಿ. ನಮಗೆ ಕಾನೂನಿನ ಮೇಲೆ ವಿಶ್ವಾಸ ಇದೆ. ಆದರೆ ಯಡಿಯೂರಪ್ಪ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಏನೂ ಹೇಳಿಕೆ ಕೊಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
Published On - 7:14 pm, Fri, 16 September 22