ಅವಧಿಗೆ ಮೊದಲೇ ಕರ್ನಾಟಕದಲ್ಲಿ ಚುನಾವಣೆ ಬರುವ ಸಾಧ್ಯತೆ: ಮಧು ಬಂಗಾರಪ್ಪ ಹೇಳಿಕೆ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರಿಗೆ ಸಮಸ್ಯೆಯಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಜಾರಿ ಮಾಡಿದ ಕಾನೂನಿನಿಂದ ಸಮಸ್ಯೆ ಎಂದು ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಮಾಜಿ ಶಾಸಕ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗ: ಅವಧಿಗೆ ಮೊದಲೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ. ಈ ಕುರಿತು ಈಗಾಗಲೇ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಶನಿವಾರ ಹೇಳಿಕೆ ನೀಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಎಚ್ಚರಿಕೆಯಿಂದ ಮಾತಾಡಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರಿಗೆ ಸಮಸ್ಯೆಯಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಜಾರಿ ಮಾಡಿದ ಕಾನೂನಿನಿಂದ ಸಮಸ್ಯೆ ಎಂದು ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಮಾಜಿ ಶಾಸಕ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಬಗರ್‌ಹುಕುಂ ರೈತರಿಗೆ ಸಂಕಷ್ಟ ಎದುರಾಗಿದೆ. 11 ಸಾವಿರ ರೈತರು ಸಾಗುವಳಿ ಹಕ್ಕು ಪತ್ರಕ್ಕಾಗಿ ಪರದಾಡ್ತಿದ್ದಾರೆ. ರೈತರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಕೂಡಲೇ ಅರಣ್ಯ ಹಕ್ಕು ಕಾಯ್ದೆ ಬದಲಾವಣೆ ಮಾಡಬೇಕು. ಬಿ.ಎಸ್. ಯಡಿಯೂರಪ್ಪ ಕೂಡ 2012ರ ಅರಣ್ಯ ಹಕ್ಕು ಕಾನೂನು ವಿರುದ್ಧ ಧ್ವನಿ ಎತ್ತಿದ್ದಾರೆ. ಇದು ರೈತರಿಗೆ ಮಾರಕ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಸಿಎಂ ಆಗಿದ್ದಾಗ ಈ ಕಾನೂನು ಜಾರಿ ಮಾಡಲಾಗಿತ್ತು. ಈ ಬಗ್ಗೆ ಸಿಎಂ ಬೊಮ್ಮಾಯಿ ಜತೆ ಬಿಎಸ್‌ವೈ ಚರ್ಚಿಸಬೇಕು. ರೈತರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕಾಗಿದೆ. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮಧು ಬಂಗಾರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ.
ಶಿವಮೊಗ್ಗದ ಶಿಕಾರಿಪುರ, ಸೊರಬದಲ್ಲಿ ಏತ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಕಚವಿ ಮತ್ತು ಮೂಡಿ, ಮೂಗೂರು ಏತನೀರಾವರಿ ಯೋಜನೆ ಪೂರ್ಣಗೊಂಡಿದ್ದರೂ ರೈತರಿಗೆ ಇನ್ನೂ ನೀರು ಸಿಕ್ಕಿಲ್ಲ. ಯೋಜನೆ ಅಪೂರ್ಣವಾಗಿದ್ದರೂ ಪೂರ್ಣವಾಗಿದೆ ಎಂದು ರಾಜ್ಯ ಸರ್ಕಾರ ಕಾರ್ಯಕ್ರಮ ಮಾಡಿದೆ. ಇಂಧನ ಸಚಿವ ಸುನಿಲ್ ಕುಮಾರ್ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ವಿನಾಕಾರಣ ರೈತರಿಗೆ ಬಿಜೆಪಿ ಸರ್ಕಾರ ತೊಂದರೆ ನೀಡುತ್ತಿದೆ ಎಂದೂ ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ಹೋಗುತ್ತದೆ- ಗೋವಿಂದ ಕಾರಜೋಳ
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವುದು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರಮಾಧಿಕಾರವಾಗಿದೆ. ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗಾಳಿ ಸುದ್ದಿಯಾಗಿದೆ. ಬಸವರಾಜ ಬೊಮ್ಮಾಯಿಯೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಶನಿವಾರ ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಸ್ಪಷ್ಟನೆ ನೀಡಿದ್ದಾರೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಪರಿಣಾಮ ಬೀರಲ್ಲ ಎಂದು ವಿಪಕ್ಷ ನಾಯಕರು ಹೇಳಿಕೆ ನೀಡುತ್ತಿರುವ ಬಗ್ಗೆಯೂ ಇದೇ ವೇಳೆ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ವಿಪಕ್ಷ ನಾಯಕರು ಭ್ರಮೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕರ ಹೇಳಿಕೆ ಅಲ್ಲಗಳೆದಿದ್ದಾರೆ.
ಇದು ಕೇವಲ 5 ರಾಜ್ಯಗಳಿಗೆ ಮಾತ್ರ ನಡೆದ ಚುನಾವಣೆಯಲ್ಲ. ದೇಶದ ಸಮಗ್ರತೆ ದೃಷ್ಟಿಯಿಂದ ನೋಡಿದ್ರೆ ದೇಶದ ಚುನಾವಣೆ. ದೇಶಕ್ಕೆ ಒಂದು ಸಂದೇಶ ರವಾನಿಸಿರುವ ಚುನಾವಣೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ಹೋಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಸ್ಥಾನ ಕಳೆದುಕೊಳ್ಳುತ್ತದೆ ಎಂದು ಬೆಳಗಾವಿಯಲ್ಲಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚುನಾವಣೆ ಸೋಲಿನ ಆತ್ಮಾವಲೋಕನ; ಮಾ.13ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
ಇದನ್ನೂ ಓದಿ: ಗದಗ: ಬಗರ್ ಹುಕುಂ ಜಮೀನಿನಲ್ಲಿ ಅರಣ್ಯ ಇಲಾಖೆ ಟ್ರೆಂಚ್ ಹಾಕುವುದಕ್ಕೆ ವಿರೋಧ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು