ಮಹಾರಾಷ್ಟ್ರ ಪಂಚಾಯತ್ ಚುನಾವಣೆ ಫಲಿತಾಂಶ: ಮರಾಠಾ vs ಒಬಿಸಿ ಧ್ರುವೀಕರಣ ಸ್ಪಷ್ಟ ಎಂದ ವಿಶ್ಲೇಷಕರು

|

Updated on: Nov 07, 2023 | 4:56 PM

2359 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಸೋಮವಾರ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ಖುಷಿಗೆ ಕಾರಣವಾಗಿದೆ. ಬಿಜೆಪಿ 724 ಗ್ರಾಮ ಪಂಚಾಯತಿಗಳಲ್ಲಿ, ಎನ್‌ಸಿಪಿ 411 ರಲ್ಲಿ ಗೆದ್ದುಕೊಂಡಿವೆ.

ಮಹಾರಾಷ್ಟ್ರ ಪಂಚಾಯತ್ ಚುನಾವಣೆ ಫಲಿತಾಂಶ: ಮರಾಠಾ vs ಒಬಿಸಿ ಧ್ರುವೀಕರಣ ಸ್ಪಷ್ಟ ಎಂದ ವಿಶ್ಲೇಷಕರು
ಏಕನಾಥ್ ಶಿಂಧೆ & ದೇವೇಂದ್ರ ಫಡ್ನವೀಸ್
Follow us on

ಮುಂಬೈ, ನವೆಂಬರ್ 7: ಮಹಾರಾಷ್ಟ್ರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟ ಉತ್ತಮ ಫಲಿತಾಂಶ (Maharashtra panchayat poll results) ಕಂಡುಕೊಂಡಿರುವುದು ಜಾತಿ ಆಧಾರದಲ್ಲಿ ಧ್ರುವೀಕರಣದತ್ತ ಬೊಟ್ಟು ಮಾಡಿದೆ. ಮರಾಠಾ (Maratha) ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗಾರರನ್ನು ನಿಭಾಯಿಸುವಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂಬ ಭಾವನೆ ಮೂಡಿರುವಾಗಲೇ ಈ ಫಲಿತಾಂಶ ಹೊರಬಿದ್ದಿದೆ.

2359 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಸೋಮವಾರ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ಖುಷಿಗೆ ಕಾರಣವಾಗಿದೆ. ಬಿಜೆಪಿ 724 ಗ್ರಾಮ ಪಂಚಾಯತಿಗಳಲ್ಲಿ, ಎನ್‌ಸಿಪಿ 411 ರಲ್ಲಿ ಗೆದ್ದುಕೊಂಡಿವೆ. ಶಿವಸೇನೆ 263 ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದೆ. 222 ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಆದಾಗ್ಯೂ, ಮಹಾರಾಷ್ಟ್ರದ ಪ್ರತಿಪಕ್ಷಗಳ ಮೈತ್ರಿಕೂಟ ವಿಕಾಸ್ ಅಘಾಡಿ ಪ್ರಭಾವಶಾಲಿಯಾಗಿಲ್ಲ. ಮೈತ್ರಿಕೂಟದಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ವಿಜಯಶಾಲಿಯಾಗಿದ್ದು ಬಿಟ್ಟರೆ ಉಳಿದಂತೆ ಎನ್‌ಸಿಪಿ (ಶರದ್ ಪವಾರ್ ಬಣ) 187 ಗೆದ್ದರೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) 115 ಗ್ರಾಮ ಪಂಚಾಯಿತಿಗಳಲ್ಲಿ ಗೆದ್ದಿದೆ. ಇತರರು 349 ಗ್ರಾಮ ಪಂಚಾಯಿತಿಗಳನ್ನು ಗೆದ್ದಿದ್ದಾರೆ.

ಮರಾಠರು vs ಒಬಿಸಿಗಳು

ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟವು ಸಮುದಾಯಕ್ಕೆ ಮೀಸಲಾತಿ ಪಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನು ವಿಳಂಬಗೊಳಿಸಿದ್ದಕ್ಕಾಗಿ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಮರಾಠ ಸಮುದಾಯ ಕೆಂಗಣ್ಣಿಗೆ ಗುರಿಯಾಗಿದೆ. ಹೋರಾಟಗಾರ ಮನೋಜ್ ಜಾರಂಗೆ-ಪಾಟೀಲ್ ಅವರು ಬೇಡಿಕೆಗಾಗಿ ಒತ್ತಾಯಿಸಿ ರಾಜ್ಯವ್ಯಾಪಿ ಆಂದೋಲನದ ಮೂಲಕ ಸರ್ಕಾರವನ್ನು ಮಂಡಿಯೂರಿಸಿದ್ದಾರೆ. ಅಂತಿಮವಾಗಿ, ಕುಣಬಿ (ಹಿಂದುಳಿದ ಜಾತಿ) ಪ್ರಮಾಣಪತ್ರವನ್ನು ನೀಡಬಹುದಾದ ಮರಾಠರನ್ನು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಮರಾಠಾ ಸಂಘಟನೆಗಳ ಆಕ್ರಮಣಕಾರಿ ನಿಲುವು ಒಬಿಸಿಗಳನ್ನು ಒಗ್ಗೂಡಿಸಿತು ಎಂದು ರಾಜಕೀಯ ವೀಕ್ಷಕರು ವಿಶ್ಲೇಷಿಸಿದ್ದಾರೆ. ಬಿಜೆಪಿ ಪ್ರಧಾನವಾಗಿ ಒಬಿಸಿ ಪಕ್ಷವಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದ ಪ್ರಕಾರ ಸಮುದಾಯದ ನಡುವೆ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಂತಿದೆ ಎಂದು ರಾಜಕೀಯ ವಿಶ್ಲೇಷಕ ರಾಜೇಂದ್ರ ಸಾಠೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮರಾಠಾ ಮೀಸಲಾತಿ: ಮನೋಜ್ ಉಪವಾಸ ಸತ್ಯಾಗ್ರಹ ಅಂತ್ಯಗೊಂಡ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸಿಎಂ ಶಿಂಧೆ, ಹಲವು ನಿರ್ಧಾರ ಪ್ರಕಟ

ಮಹಾರಾಷ್ಟ್ರದ 15 ಕೋಟಿ ಜನಸಂಖ್ಯೆಯಲ್ಲಿ ಒಬಿಸಿಗಳು ಶೇ 54ರಷ್ಟು ಪಾಲು ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಮರಾಠರು ಶೇ 35 ರಷ್ಟು ಸಂಖ್ಯೆಯಲ್ಲಿದ್ದಾರೆ. ಮರಾಠ ಮತಗಳಲ್ಲಿ ಸ್ಪಷ್ಟ ವಿಭಜನೆ ಮತ್ತು ಒಬಿಸಿ ಮತಗಳ ಕ್ರೋಢೀಕರಣವು ಮಹಾಯುತಿಯ ಪರವಾಗಿ ಕೆಲಸ ಮಾಡಿದೆ. 2018ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿಯ ಸಾಧನೆ ಆಕರ್ಷಕವಾಗಿತ್ತು. ಈ ಬಾರಿಯೂ ಮರಾಠಾ ಸಂಘಟನೆಗಳು ರಾಜ್ಯಾದ್ಯಂತ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು ಎಂದು ‘ನ್ಯೂಸ್​​ 9’ನಲ್ಲಿ ಕಿರಣ್ ತಾರೆ ವಿಶ್ಲೇಷಿಸಿದ್ದಾರೆ.

ಒಬಿಸಿ ಸಮುದಾಯದಲ್ಲಿ ಅಸಮಾಧಾನ

ಇನ್ನು ಮರಾಠರನ್ನು ಒಬಿಸಿಗೆ ಸೇರ್ಪಡೆಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಸಮ್ಮತಿ ಸೂಚಿಸಿರುವುದಕ್ಕೆ ಫೈರ್‌ಬ್ರಾಂಡ್ ಎನ್‌ಸಿಪಿ ನಾಯಕ ಛಗನ್ ಭುಜಬಲ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಒಬಿಸಿಗಳಿಗೆ ಶೇ 27ರಷ್ಟು ಮೀಸಲಾತಿ ಇದೆ. ಒಬಿಸಿಯಲ್ಲಿ 375 ಜಾತಿಗಳು ಮತ್ತು ಉಪ ಜಾತಿಗಳನ್ನು ಸೇರಿಸಲಾಗಿದೆ. ಮರಾಠರನ್ನೂ ಸೇರಿಸಿದರೆ 375 ಜಾತಿಗಳು ಸ್ವಲ್ಪ ಮಟ್ಟಿಗೆ ಬಾಧಿತವಾಗುತ್ತವೆ ಎನ್ನಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:56 pm, Tue, 7 November 23