ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಡಿಕೆ ಶಿವಕುಮಾರ್ ಸಿಎಂ ಆಗಲಿಲ್ಲ; ಅಂದ್ರೆ ಮುಂದೆ ಅದಿನ್ನು ಮರೀಚಿಕೆಯೇ ಆಗಲಿದೆ – ಬಿಜೆಪಿ ಶಾಸಕ ಸುರೇಶ್ ಗೌಡ
DK Shivakumar: ಕಾಂಗ್ರೆಸ್ ಪಕ್ಷದ ನಿಯಮ ಏನಿತ್ತು ಅಂದ್ರೆ ಯಾರು ಕೆಪಿಸಿಸಿ ಅಧ್ಯಕ್ಷರಾಗ್ತಾರೋ, ಅವ್ರೇ ಮುಖ್ಯಮಂತ್ರಿ ಆಗ್ತಾರೆ ಅನ್ನೋದು. ಹೀಗಾಗಿ ಅವರಿಗೆ ಫಸ್ಟ್ ಟೈಮ್ ಸೂಪರ್ ಅವಕಾಶವಿತ್ತು. ಫಸ್ಟ್ ಟೈಮ್ ಆಗಿಲ್ಲ ಅಂದ್ರೆ ಮುಂದೆ ಅದು ಮರೀಚಿಕೆಯೇ ಎಂದು ಡಿಕೆ ಶಿವಕುಮಾರ್ ಬಗ್ಗೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರು ಮಧುಗಿರಿಯಲ್ಲಿ ಹೇಳಿದರು.
ತುಮಕೂರು, ನವೆಂಬರ್ 7: ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರು (Tumakur Rural BJP MLA Suresh Gowda) ಮಧುಗಿರಿಯಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಕೇಳಿಬರುತ್ತಿರುವ ವಿಚಾರ ಪ್ರಸ್ತಾಪಿಸಿ ಡಾ. ಜಿ. ಪರಮೇಶ್ವರ್ ಸಿಎಂ ಆದ್ರೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ಬಿಜೆಪಿ ಶಾಸಕ ಬ್ಯಾಟಿಂಗ್ ಮಾಡಿದ್ದಾರೆ. ಪರಮೇಶ್ವರ್ (G. Parameshwara) ಮುಖ್ಯಮಂತ್ರಿ ಆಗಲಿ ಎಂಬ ಬಯಕೆ ಹೊರಹಾಕಿದ ಸುರೇಶ್ ಗೌಡ ಅವರು ನಾನು ಗೋವಿಂದ ಕಾರಜೋಳ ಅವರನ್ನ ಕೂಡ ಮುಖ್ಯಮಂತ್ರಿ ಮಾಡಿ ಅಂತ ಹೇಳಿದ್ದೆ. ಯಡಿಯೂರಪ್ಪ ಅವರನ್ನ ಬದಲಾವಣೆ ಮಾಡಿದ ಸಂದರ್ಭದಲ್ಲಿ ಕಾರಜೋಳ ಅವರಿಗೆ ಕೊಡಿ ಅಂತಾನೇ ಹೇಳಿದ್ದೆ. ದಲಿತರಿಗೆ ಕೊಟ್ರೆ ರಾಜ್ಯದಲ್ಲಿ ಬಿಜೆಪಿಗೆ ಒಂದು ಶಕ್ತಿ ಬರುತ್ತೆ ಅಂತಾ ಹೇಳಿದ್ದೆ. ಈ ಸಂದರ್ಭದಲ್ಲಿ ಪರಮೇಶ್ವರ್ ಅವರ ಹೆಸರು ಕೂಡ ಹರಿದಾಡ್ತಿದೆ. ನಾನು ಹೇಳೋದು ಇಷ್ಟೇ, ಮುಂದಿನ ಮುಖ್ಯಮಂತ್ರಿ ಆಗುವ ಅವಕಾಶ ಏನಾದ್ರೂ ಇದ್ರೆ, ಸ್ವಾತಂತ್ರ ಬಂದು ಇಷ್ಟು ವರ್ಷ ಆದರೂ ತುಮಕೂರಿನಿಂದ ಯಾರೂ ಮುಖ್ಯಮಂತ್ರಿ ಆಗಿಲ್ಲ ಎಂದು ವಿಷಾದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ್ ಮನೆಗೆ ಹೋಗಿದ್ದನ್ನ ನೋಡಿದ್ರೆ, ಡಿಕೆಶಿಗೆ ಕೊಡಬಾರದು ಅಂತೇನಾದ್ರೂ ಷಡ್ಯಂತ್ರ ನಡೀತಿರಬಹುದು ಅಂತಾ ಕಾಣ್ಸುತ್ತೆ. ರಾಜ್ಯದಲ್ಲಿ ಒಕ್ಕಲಿಗರು ಸಾಕಷ್ಟು ಜನ ಮುಖ್ಯಮಂತ್ರಿ ಆಗಿದ್ದಾರೆ. ಎಸ್.ಎಂ.ಕೃಷ್ಣ, ಸದಾನಂದ ಗೌಡ, ಕುಮಾರಸ್ವಾಮಿ, ದೇವೇಗೌಡ ಅವರನ್ನ ಹಿಡಿದು ಬಹಳ ಜನ ಸಿಎಂ ಆಗಿದ್ದಾರೆ. ಹಿಂದುಳಿದವರು ಕೂಡ ಸಾಕಷ್ಟು ಜನ ಆಗಿದ್ದಾರೆ. ದೇವರಾಜ ಅರಸುರಿಂದ ಹಿಡಿದು, ಸಿದ್ದರಾಮಯ್ಯ ಅವರನ್ನ ಹಿಡಿದು ಸಾಕಷ್ಟು ಜನ ಆಗಿದ್ದಾರೆ. ಆದ್ರೆ ದಲಿತರಿನ್ನೂ ಆಗಿಲ್ಲ. ಹೀಗಾಗಿ ಪರಮೇಶ್ವರ್ ಅವ್ರು ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಮತ್ತು ತುಮಕೂರು ಜಿಲ್ಲೆಯ ಒಬ್ಬ ಸಜ್ಜನ ರಾಜಕಾರಣಿ. ಯಡಿಯೂರಪ್ಪ ಕೂಡ ಇವತ್ತು ಪರಮೇಶ್ವರ್ ತುಂಬಾ ಒಳ್ಳೆಯವರು ಅನ್ನೋ ಮಾತನ್ನಾಡಿದ್ರು. ಹೀಗಾಗಿ ನೂರಕ್ಕೆ ನೂರು ಪರಮೇಶ್ವರ್ ಸಿಎಂ ಆದ್ರೆ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಪರಮೇಶ್ವರ್ ಆಗಲಿ, ರಾಜಣ್ಣ ಆಗಲಿ, ನಮ್ಮ ಜಿಲ್ಲೆಯವರು ಯಾರೇ ಆದರೂ ನಾವೆಲ್ಲರೂ ಸಪೋರ್ಟ್ ಮಾಡ್ತೀವಿ ಎಂದು ತಮ್ಮ ವಾದ ಮಂಡಿಸಿದರು.
ಹಿಂದೆ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದ್ದ ವಿಚಾರವನ್ನು ಪ್ರಸ್ತಾಪಿಸಿದಾಗ ನಾನು ಆಗ ಬಹಳ ಸ್ಪಷ್ಟವಾಗಿ ಹೇಳಿದ್ದೆ. ಡಿಕೆಶಿಯವ್ರು ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಸುಮಾರು ಹಣವನ್ನು ಪಕ್ಷಕ್ಕಾಗಿ ಖರ್ಚು ಮಾಡಿದ್ದರು. ಛಲದಂಕ ಮಲ್ಲನಂತೆ ಪಕ್ಷಕ್ಕಾಗಿ ಹೋರಾಟ ಮಾಡಿದ್ರು ಅವರು. ಕಾಂಗ್ರೆಸ್ ಪಕ್ಷದ ನಿಯಮ ಏನಿತ್ತು ಅಂದ್ರೆ ಯಾರು ಕೆಪಿಸಿಸಿ ಅಧ್ಯಕ್ಷರಾಗ್ತಾರೋ, ಅವ್ರೇ ಮುಖ್ಯಮಂತ್ರಿ ಆಗ್ತಾರೆ ಅನ್ನೋದು. ಹೀಗಾಗಿ ಅವರಿಗೆ ಸಂಪೂರ್ಣ ಅವಕಾಶ ಇತ್ತು. ಆ ಸಂದರ್ಭದಲ್ಲಿ ನಮ್ಮ ನಿರ್ಮಲಾನಂದ ಸ್ವಾಮೀಜಿಗೆ, ನಮ್ಮೆಲ್ಲರ ಮುಖಂಡರಿಗೆ ನೀವೆಲ್ಲಾ ಹೋರಾಟ ಮಾಡಿ ಅವರನ್ನ ಮುಖ್ಯಮಂತ್ರಿ (CM of Karnataka) ಮಾಡಿಸಬೇಕಿತ್ತು ಅಂತಾ ಹೇಳಿದ್ದೆ. ಆಗ ಅವರಿಗೆ ಫಸ್ಟ್ ಟೈಮ್ ಸೂಪರ್ ಅವಕಾಶವಿತ್ತು. ಫಸ್ಟ್ ಟೈಮ್ ಆಗಿಲ್ಲ ಅಂದ್ರೆ ಮುಂದೆ ಅದು ಮರೀಚಿಕೆಯೇ ಎಂದು ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಹೇಳಿದರು.
ಬಿಜೆಪಿ ಬರ ಅಧ್ಯಯನ ಪ್ರವಾಸದ ಬಳಿಕ ಕಾಂಗ್ರೆಸ್ ನಿಂದ ಬರ ಅಧ್ಯಯನ ಪ್ರವಾಸ ಶುರು ಮಾಡುವ ವಿಚಾರವಾಗಿ ಮಾತನಾಡಿದ ಸುರೇಶ್ ಗೌಡ ಕಾಂಗ್ರೆಸ್ ನವರು ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಇಲ್ಲ, ರಾಜ್ಯಾಧ್ಯಕ್ಷ ಇಲ್ಲ. ವಿರೋಧ ಪಕ್ಷ ಏನೂ ಕೆಲಸ ಮಾಡ್ತಿಲ್ಲ ಅಂತ ನಮ್ಮ ಮೇಲೆ ಗೂಬೆ ಕುರಿಸ್ತಿದ್ರು. ಇವರ ಕೈಯಲ್ಲಿ ಬರಗಾಲ ಎದುರಿಸೊಕೆ ಆಗ್ತಿಲ್ಲ. ವಿದ್ಯುತ್ ಕೊಡೋಕೆ ಆಗ್ತಿಲ್ಲ, ಅಕ್ಕಿ ಕೊಡೋಕೆ ಆಗ್ತಿಲ್ಲ. ಅವರು ಹೇಳಿರುವ ಐದು ಗ್ಯಾರಂಟಿಗಳನ್ನ ಸರಿಯಾಗಿ ಅನುಷ್ಠಾನ ಮಾಡೋಕೆ ಆಗ್ತಿಲ್ಲ. ರಾಜ್ಯದ ಜನಕ್ಕೆ 50 % ಗ್ಯಾರಂಟಿ ಯೋಜನೆ ತಲುಪಿಲ್ಲ. ಜನ ಹೇಳ್ತಿದ್ದಾರೆ ಹಣ ಬೇಡ ನಮಗೆ ಅಕ್ಕಿ ಕೊಡಿ ಅಂತ. ಮೋದಿ ಕೊಡುವ 5 ಕೆಜಿ ಅಕ್ಕಿಯಲ್ಲಿ 2 ಕೆಜಿ ಅಕ್ಕಿ ಕದಿತಿದಿರಿ ಅಂತ ಜನ ಹೇಳ್ತಿದ್ದಾರೆ. ಕುಡಿಯೋಕೆ ನೀರಿಲ್ಲ, ಜಾನುವಾರುಗಳಿಗೆ ಗೋಶಾಲೆ ಓಪನ್ ಮಾಡಿಲ್ಲ. ತೀವ್ರವಾದ ಬರವನ್ನ ತುಮಕೂರು ಜಿಲ್ಲೆ ಹಾಗೂ ರಾಜ್ಯ ಎದುರಿಸ್ತಿದೆ.
200 ತಾಲೂಕುಗಳು ಬರಪೀಡಿತ ತಾಲ್ಲೂಕು ಅಂತ ಘೋಷಣೆ ಮಾಡಿದೆ. ಒಬ್ಬ ಮಂತ್ರಿ ಕೂಡಾ ಇದುವರೆಗೂ ಒಂದು ತಾಲೂಕಿಗೆ ಭೇಟಿ ಮಾಡಿಲ್ಲ. ರೈತರ ಸಂಕಷ್ಟಗಳನ್ನ ಕೇಳಿಲ್ಲ. ಕೇವಲ ಆರು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಫೇಲ್ಯೂರ್ ಆಗಿದೆ. ತಮ್ಮನ್ನ ಸೇಫ್ ಮಾಡಿಕೊಳ್ಳಲು ಆಪರೇಷನ್ ಕಮಲ, ಮತ್ತೊಂದು ಮಗದೊಂದುಗಳನ್ನ ಹೇಳ್ಕೊಂಡು ಕಾಲಹರಣ ಮಾಡ್ತಿದ್ದಾರೆ. ಯಡಿಯೂರಪ್ಪ ಅವರು ಎರಡು ದಿನ ಬರ ಅಧ್ಯಯನ ಪ್ರವಾಸ ಮಾಡಿದ್ದಾರೆ. ಬರಪೀಡಿತ ಪ್ರದೇಶಕ್ಕೆ ಅನುದಾನವನ್ನ ಬಿಡುಗಡೆ ಮಾಡಿ ಅಂತ ತಕ್ಷಣ ಪ್ರಧಾನಿ ಅವರಿಗೆ ಪತ್ರ ಬರಿತೀವಿ. ಇದರ ಜೊತೆಗೆ ರಾಜ್ಯ ಸರ್ಕಾರಕ್ಕೂ ಆಗ್ರಹ ಮಾಡ್ತೀವಿ. ಗೋಶಾಲೆಗಳನ್ನ ತೆರೆಯಿರಿ, ರೈತರ ಕಷ್ಟ ಆಲಿಸಿ ಪರಿಹಾರ ಘೋಷಣೆ ಮಾಡಿ ಅಂತ ಎಂದು ಮಧುಗಿರಿಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಹೇಳಿದರು.
ಕಿಯೋನಿಕ್ಸ್ ಎಂ.ಡಿ ಕಮಿಷನ್ ಗೆ ಬೇಡಿಕೆ ಇಟ್ಟ ಆರೋಪ ವಿಚಾರವನ್ನೂ ಪ್ರಸ್ತಾಪಿಸಿದ ಶಾಸಕ ಸುರೇಶ್ ಗೌಡ ನಾನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೆ ಹೇಳೊದು ಇಷ್ಟೇ. ಬಿಜೆಪಿ ಅಧಿಕಾರದಲ್ಲಿದ್ದಾಗ 40 % ಕಮಿಷನ್ ಇದೆ ಅಂತ ಆರೋಪ ಮಾಡಿದಿರಿ. ತನಿಖೆಗೆ ಆದೇಶ ಮಾಡ್ತೀವಿ ಅಂತ ಹೇಳ್ತಿದ್ದೀರಾ. ಕೊರೊನಾ ಸಂದರ್ಭದಲ್ಲಿ ಹಗರಣ ಆಗಿದೆ ಅಂತ ಅದಕ್ಕೂ ಕೂಡ ಒಂದು ಕಮಿಟಿ ಮಾಡಿ, ತನಿಖೆಗೆ ಆದೇಶ ಮಾಡಿದ್ದೀರಾ. ಅದರ ಜೊತೆಗೆ ಇದನ್ನೂ ಸೇರಿಸಿ ಬಿಡಿ ಸ್ವಾಮಿ. ಕೇವಲ ಸರ್ಕಾರ ಬಂದು ನಾಲ್ಕು ತಿಂಗಳಲ್ಲೇ ಸಾಕಷ್ಟು ಅವ್ಯವಹಾರಗಳು ಹರಿದಾಡ್ತಿದೆ.
ಬಿಜೆಪಿ 40 % ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಯ್ಯ ಹೇಳ್ತಾರೆ – ಒಬ್ಬ ಚೀಫ್ ಇಂಜಿನಿಯರ್ ನಮ್ಮನ್ನ ಸುಲಿಗೆ ಮಾಡ್ತಿದ್ದಾರೆ ಮೊದಲು ಅದನ್ನ ನಿಲ್ಸಿ. ಇಂತಹ ಅಧಿಕಾರಿಗಳಿಂದ ನಿಮ್ಮ ಸರ್ಕಾರಕ್ಕೆ ಮರ್ಯಾದೆ ಬರಲ್ಲ ಅಂತ. ನಾನು ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಆಗ್ರಹ ಮಾಡೋದು ಇಷ್ಟೇ. ತಕ್ಷಣ ಕಿಯೋನಿಕ್ಸ್ ಮೇಲೆ ಬಂದಿರುವ ಆರೋಪವನ್ನ ಸಿಓಡಿ ತನಿಖೆಗೆ ಕೊಡಿ. ಈಗಾಗಲೇ ನಿಮ್ಮ ಸರ್ಕಾರ ದಿವಾಳಿಯಾಗಿದೆ. ಪಾರ್ಲಿಮೆಂಟ್ ಚುನಾವಣೆಗೆ ಹಣ ಸಂಗ್ರಹ ಮಾಡೋಕೆ ನೀವೆ ಏಜೆಂಟ್ ಗಳನ್ನ ಆಯ್ಕೆ ಮಾಡಿದ್ದೀರಾ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಈ ಪ್ರಕರಣವನ್ನ ಕೂಡಲೇ ಸಿಓಡಿ ಇಲ್ಲ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ