Maharashtra Politics: ಏಕನಾಥ್ ಶಿಂಧೆಯಿಂದ ಇಂದು ವಿಶ್ವಾಸಮತ ಯಾಚನೆ; ನೂತನ ಸರ್ಕಾರಕ್ಕೆ ಸಿಗುತ್ತಾ ಬಹುಮತ?

ನಾಲ್ಕು ದಿನಗಳ ಹಿಂದೆ ರಚನೆಯಾದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ. ವಿಶ್ವಾಸಮತಯಾಚನೆ ಬಳಿಕ ಶಿಂಧೆ ಸರ್ಕಾರ ಉಳಿಯುತ್ತಾ? ಉರುಳುತ್ತಾ? ಎಂದು ಗೊತ್ತಾಗಲಿದೆ.

Maharashtra Politics: ಏಕನಾಥ್ ಶಿಂಧೆಯಿಂದ ಇಂದು ವಿಶ್ವಾಸಮತ ಯಾಚನೆ; ನೂತನ ಸರ್ಕಾರಕ್ಕೆ ಸಿಗುತ್ತಾ ಬಹುಮತ?
ಸಿಎಂ ಏಕನಾಥ್ ಶಿಂಧೆImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 04, 2022 | 8:28 AM

ಮುಂಬೈ: ಮಹಾರಾಷ್ಟ್ರದಲ್ಲಿ ಎರಡು ವಾರಗಳ ರಾಜಕೀಯ ಬಿಕ್ಕಟ್ಟಿನ (Maharashtra Political Crisis) ನಂತರ ಬಿಜೆಪಿಯ ನೆರವಿನೊಂದಿಗೆ ಸರ್ಕಾರ ರಚನೆಯಾಗಿದೆ. ನಾಲ್ಕು ದಿನಗಳ ಹಿಂದೆ ರಚನೆಯಾದ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ. ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನದ ನಂತರ ಜುಲೈ 2ರಂದು ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾದರು. ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿಯವರೆಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯಿತು ಎಂಬ ಮುಖ್ಯಾಂಶಗಳು ಇಲ್ಲಿವೆ.

  1. ಬಿಜೆಪಿಯ ರಾಹುಲ್ ನಾರ್ವೇಕರ್ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಹೊಸ ಮುಖ್ಯಮಂತ್ರಿ ಸೇರಿದಂತೆ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಶಿವಸೇನೆ ಸಲ್ಲಿಸಿರುವ ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು ಇದು ಮಹತ್ವದ ಕ್ರಮವಾಗಿದೆ.
  2. ರಾಹುಲ್ ನಾರ್ವೇಕರ್ ಕಳೆದ ರಾತ್ರಿ ಏಕನಾಥ್ ಶಿಂಧೆ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿ ಮರುಸ್ಥಾಪಿಸಿದ್ದಾರೆ ಮತ್ತು ಭರತ್ ಗೊಗವಾಲೆ ಅವರನ್ನು ಶಿವಸೇನೆಯ ಮುಖ್ಯ ಸಚೇತಕರಾಗಿ ನೇಮಕ ಮಾಡಿದ್ದಾರೆ.
  3. ಏಕನಾಥ್ ಶಿಂಧೆ ಪಾಳಯದ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ಬಣದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೆ, 16 ಶಾಸಕರ ಅನರ್ಹತೆಯ ಸಂದರ್ಭದಲ್ಲಿಯೂ ಹೊಸ ಸರ್ಕಾರಕ್ಕೆ ಸಂಖ್ಯಾಬಲದ ಲಾಭವಾಗಲಿದೆ.
  4. ಬಿಜೆಪಿಯು ಪ್ರಸ್ತುತ 106 ಶಾಸಕರನ್ನು ಹೊಂದಿದೆ. ಏಕನಾಥ್ ಶಿಂಧೆ 39 ಶಿವಸೇನಾ ಬಂಡಾಯ ಶಾಸಕರು ಸೇರಿದಂತೆ 50 ಮಂದಿಯ ಬೆಂಬಲವನ್ನು ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ. 16 ಶಾಸಕರ ಅನರ್ಹತೆಯಿಂದ ಬಹುಮತದ ಸಂಖ್ಯೆ 137ಕ್ಕೆ ಏರಲಿದೆ. ಒಟ್ಟು 140 ಬಲ ಸಿಕ್ಕರೆ ಸರ್ಕಾರ ಉಳಿಯಲು ಸಹಾಯಕವಾಗುತ್ತದೆ.
  5. ನಿನ್ನೆ 164 ಮತಗಳಿಂದ ಸ್ಪೀಕರ್ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ ರಾಜನ್ ಸಾಲ್ವಿ ಕೇವಲ 107 ಮತಗಳನ್ನು ಪಡೆದಿದ್ದಾರೆ.
  6. ಏಕನಾಥ್ ಶಿಂಧೆಯವರ ಬಂಡಾಯ ಜೂನ್ 20ರ ರಾತ್ರಿ ಭುಗಿಲೆದ್ದಿತು. ಇದರಿಂದ ಉದ್ಧವ್ ಠಾಕ್ರೆ ಬಣದ ಸಂಖ್ಯೆ ಕಡಿಮೆಯಾಯಿತು. ಪ್ರತಿದಿನ ಬಂಡಾಯ ಪಾಳಯಕ್ಕೆ ಹೊಸ ಮುಖಗಳು ಸೇರುತ್ತಲೇ ಇರುತ್ತವೆ.
  7. ರಾಜ್ಯಪಾಲರ ಆದೇಶದಂತೆ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು.
  8. ಅದಾದ ಬಳಿಕ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿದರು.
  9. ಅದೇ ದಿನ ಸಂಜೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಏಕನಾಥ್ ಶಿಂಧೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
  10. ಶನಿವಾರ ಸಂಜೆ ಏಕನಾಥ್ ಶಿಂಧೆ ಬೆಂಬಲಿಗರು ಮುಂಬೈಗೆ ಬಂದಿಳಿದರು. ಬಂಡಾಯ ಶಾಸಕರು ಕಳೆದ ಎರಡು ವಾರಗಳನ್ನು ಗೋವಾದಲ್ಲಿ ಕಳೆದಿದ್ದಾರೆ. ಆರಂಭದಲ್ಲಿ ಗುಜರಾತ್‌ನ ಸೂರತ್​ನಲ್ಲಿದ್ದ ಅವರು ನಂತರ ಅಸ್ಸಾಂನ ಗುವಾಹಟಿಗೆ ಹೋದರು. ಕೊನೆಗೆ ಗೋವಾದಲ್ಲಿ ಹೋಟೆಲ್​ನಲ್ಲಿದ್ದರು.

Published On - 8:27 am, Mon, 4 July 22