ಬೆಂಗಳೂರು, ಮಾರ್ಚ್ 27: ಲೋಕಸಭೆ ಚುನಾವಣೆಗೆ (Lok Sabha Elections) ಬಿಜೆಪಿ ಜೆಡಿಎಸ್ ಮೈತ್ರಿ (BJP JDA Alliance) ಅಭ್ಯರ್ಥಿಯಾಗಿ ಹೆಚ್ಡಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತವಾದ ಬೆನ್ನಲ್ಲೇ ಮಂಡ್ಯ (Mandya) ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡ್ಯ ಲೋಕಸಭಾ ಕ್ಷೇತ್ರ ಗೆಲ್ಲಲು ಸಂಧಾನ ಸೂತ್ರಕ್ಕೆ ಕುಮಾರಸ್ವಾಮಿ ಮೊರೆಹೋಗಿದ್ದಾರೆ. ವಿಶೇಷವೆಂದರೆ, ರಾಜಕೀಯವಾಗಿ ಮುನಿಸಿಕೊಂಡಿದ್ದ ಬಿಜೆಪಿ ನಾಯಕ ಕೆಸಿ ನಾರಾಯಣಗೌಡ ಹಾಗೂ ಕುಮಾರಸ್ವಾಮಿ ಇದೀಗ ಒಂದಾಗಿದ್ದಾರೆ. ಅಷ್ಟೇ ಏಕೆ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ನಿಮ್ಮಿಂದ, ನಿಮ್ಮ ಗೆಲುವಿಗೆ ಶ್ರಮಿಸುವೆ ಎಂದು ಕುಮಾರಸ್ವಾಮಿಗೆ ಮಾಜಿ ಸಚಿವ ಕೆಸಿ ನಾರಾಯಣಗೌಡ ಭರವಸೆ ನೀಡಿದ್ದಾರೆ!
ಕುಮಾರಸ್ವಾಮಿ ಮತ್ತು ನಾರಾಯಣಗೌಡ ನಡುವೆ ಸಂಧಾನ ಯಶಸ್ವಿಯಾಗಿದೆ. ಜೆಡಿಎಸ್ನ ಸಿಎಸ್ ಪುಟ್ಟರಾಜು, ಅಶ್ವಥ್ ನಾರಾಯಣ್ ಉಭಯ ನಾಯಕರ ನಡುವೆ ಸಂಧಾನ ಮಾಡಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ, ಮಂಡ್ಯದಲ್ಲಿ ಕಾಂಗ್ರೆಸ್ ಓಟಕ್ಕೆ ತಡೆಯೊಡ್ಡಲು ಬಿಜೆಪಿಯ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಇದರ ಮೊದಲ ಭಾಗವಾಗಿಯೇ ಮಾಜಿ ಸಚಿವ ನಾರಾಯಣಗೌಡ ಮನವೊಲಿಕೆ ಮಾಡಲಾಗಿದೆ.
ಎಲ್ಲರೂ ಒಟ್ಟಾಗಿ ನಿಮ್ಮನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ಕುಮಾರಸ್ವಾಮಿಗೆ ನಾರಾಯಣಗೌಡ ಭರವಸೆ ನೀಡಿದ್ದಾರೆ. ಮಂಡ್ಯದಲ್ಲಿ ಬೃಹತ್ ಜಂಟಿ ಸಮಾವೇಶ ಮಾಡುವ ಮೂಲಕ ಸಮನ್ವಯ ಸಂದೇಶ ನೀಡೋಣ ಎಂದು ಸಲಹೆಯನ್ನೂ ನೀಡಿದ್ದಾರೆ. ಇದೇ ವೇಳೆ, ನನ್ನ ಗೆಲುವಿಗಿಂತ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಹೀಗಾಗಿ ಮಂಡ್ಯ ಎನ್ಡಿಎ ಉಸ್ತುವಾರಿಯನ್ನು ಜೆಡಿಎಸ್ ನಾಯಕನ ಜೊತೆ ನೀವು ವಹಿಸಿಕೊಳ್ಳಿ ಎಂದು ಕುಮಾರಸ್ವಾಮಿ ನಾರಾಯಣಗೌಡರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಗೌಡ, ನೀವು ನನಗೆ ಮನವಿ ಮಾಡಬೇಡಿ. ನನ್ನ ರಾಜಕೀಯ ಆರಂಭವಾಗಿದ್ದೇ ನಿಮ್ಮಿಂದ. ನಿಮ್ಮ ಗೆಲುವಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಸ್ಪರ್ಧೆ ಹಿಂದೆ ಕುಮಾರಸ್ವಾಮಿಯ ಹಲವು ರಾಜಕೀಯ ಲೆಕ್ಕಾಚಾರ!
ಮುಂದೆ ಹಾಲಿ ಸಂಸದೆ ಸುಮಲತಾ ಜತೆಗೂ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಕುಮಾರಸ್ವಾಮಿ ಉದ್ದೇಶಿಸಿದ್ದಾರೆ. ಶೀಘ್ರದಲ್ಲೇ ಸಂಸದೆ ಸುಮಲತಾ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸಲಿದ್ದಾರೆ. ಈ ಮಧ್ಯೆ, ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವಿಗೆ ಪಣತೊಟ್ಟಿರುವ ಜೆಡಿಎಸ್ ಮುಖಂಡರು ಸುಮಲತಾ ಮಾತ್ರವಲ್ಲದೆ, ಸಂಘರ್ಷವಿರುವ ಎಲ್ಲಾ ಬಿಜೆಪಿ ಮುಖಂಡರ ಸಂಧಾನಕ್ಕೆ ಭಾರಿ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ವರ್ಷ ವಿಧಾನಸಭೆ ಚುನಾವಣೆ ನಾರಾಯಣಸ್ವಾಮಿ ಮತ್ತು ಕುಮಾರಸ್ವಾಮಿ ಮಧ್ಯೆ ತೀವ್ರ ವಾಕ್ಸಮರ ಏರ್ಪಟ್ಟಿದ್ದು ಕೂಡ ಗಮನಾರ್ಹ
ಇದನ್ನೂ ಓದಿ: ಟಿಕೆಟ್ ಕೊಡಿಸಿದ್ದು ನಾನು, ಕುತ್ತಿಗೆ ಕೊಯ್ದು ಹೋದವನು ನೀನು: ಸಚಿವ ನಾರಾಯಣಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ