24 ತಾಸಾದರೂ ಕಾಂಗ್ರೆಸ್ ಕಳಿಸಿದ ಮಸಾಲೆ ದೋಸೆ ಬಂದಿಲ್ಲ, ಇದರಲ್ಲೂ ಮೋಸ: ಕೈ ನಾಯಕರ ಕಾಲೆಳೆದ ತೇಜಸ್ವಿ ಸೂರ್ಯ

ಸಂಸದರ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು. ಇದಕ್ಕೆ ಟಕ್ಕರ್ ಕೊಟ್ಟ ಸಂಸದ ತೇಜಸ್ವಿ ಸೂರ್ಯ, 24 ಗಂಟೆಯಾದರೂ ಪಾರ್ಸೆಲ್ ಮನೆಗೆ ಬಂದಿಲ್ಲ, ಕಾಂಗ್ರೆಸ್ ಮೊಸ ಮಾಡಿದೆ ಎಂದು ಹೇಳಿದ್ದಾರೆ.

24 ತಾಸಾದರೂ ಕಾಂಗ್ರೆಸ್ ಕಳಿಸಿದ ಮಸಾಲೆ ದೋಸೆ ಬಂದಿಲ್ಲ, ಇದರಲ್ಲೂ ಮೋಸ: ಕೈ ನಾಯಕರ ಕಾಲೆಳೆದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ
Updated By: Rakesh Nayak Manchi

Updated on: Sep 12, 2022 | 12:55 PM

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಬಿಸಿಬಿಸಿ ಮಸಾಲೆ ದೋಸೆ ಚರ್ಚೆ ಮುಂದುವರೆದಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮಸಾಲ್ ದೋಸೆ ಪಾರ್ಸೆಲ್ ಕಳುಹಿಸಿದ್ದಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕರಿಗೆ ತೇಜಸ್ವಿ ಸೂರ್ಯ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಿದೆ ದೋಸೆ? 24 ಗಂಟೆಯಾದರೂ ನನ್ನ ಮನೆಗೆ ದೋಸೆ ಬಂದಿಲ್ಲ, ದೋಸೆ ವಿಚಾರದಲ್ಲೂ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಹೇಳುವ ಮೂಲಕ ಕೈ ನಾಯಕರ ಹಾಗೂ ಕಾರ್ಯಕರ್ತರ ಕಾಲೆಳೆದಿದ್ದಾರೆ.

ಕಾಂಗ್ರೆಸ್​ನ ಮಸಾಲೆ ದೋಸೆ ಪಾರ್ಸೆಲ್ ವಿಚಾರವಾಗಿ ಟ್ವೀಟ್ ಮಾಡಿದ ತೇಜಸ್ವಿ ಸೂರ್ಯ, “ಕಾಂಗ್ರೆಸ್ ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿತು ಮತ್ತು ಅವರು ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿದ್ದಾರೆ ಎಂದು ಘೋಷಿಸಿ 24 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ. ನಾನು ಅದನ್ನು ಇನ್ನೂ ಸ್ವೀಕರಿಸಿಲ್ಲ. ಇಲ್ಲೂ ಮೋಸ ಮಾಡಿದ್ದಾರೆ. ಅವರಿಗೆ ಸರಿಯಾಗಿ ದೋಸೆ ಕೊಡಲು ಸಾಧ್ಯವಿಲ್ಲ. ಹೀಗಿದ್ದರೂ ಅವರು ಉತ್ತಮ ಆಡಳಿತ ನೀಡುವ ಕನಸು ಕಾಣುತ್ತಾರೆ” ಎಂದು ಹೇಳಿದ್ದಾರೆ.

ತೇಜಸ್ವಿ ಸೂರ್ಯ ಅವರಿಗೆ ನಗರದ ಜನಪ್ರಿಯ ರೆಸ್ಟೋರೆಂಟ್‌ಗಳಿಂದ 10 ವಿವಿಧ ದೋಸೆಗಳನ್ನು ಕಳುಹಿಸಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಹೇಳಿದ್ದರು. ಅಲ್ಲದೆ, ಸಂಸದರು ರೆಸ್ಟೋರೆಂಟ್‌ಗಳ ಜನಪ್ರಿಯತೆಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ, ಜನರ ಬಗ್ಗೆ ಚಿಂತಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.

ಸೆಪ್ಟೆಂಬರ್ 5 ರಂದು ಬೆಂಗಳೂರಿನ ಜನರು ಈ ಹಿಂದೆ ನೋಡಿರದ ಭಾರೀ ಮಳೆಗೆ ದಂಗಾಗಿದ್ದರು. ಈ ಮಳೆಗೆ ಸಾಕಷ್ಟು ಭಾಗ ಜಲಾವೃತಗೊಂಡಿತ್ತು. ಕೆಲವು ಭಾಗಗಳು ತೀವ್ರ ಪ್ರವಾಹವನ್ನು ಎದುರಿಸುತ್ತಿರುವಾಗ ಸಂಸದರು ರೆಸ್ಟೋರೆಂಟ್​ಗೆ ಹೋಗಿ ಮಸಾಲೆ ದೋಸೆ ಸವಿದಿದ್ದಲ್ಲದೆ ಅದಕ್ಕೆ ಪ್ರಚಾರವನ್ನೂ ನೀಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ರಾಜಕೀಯವಾಗಿ ಮಸಾಲೆ ದೋಸೆ ಚರ್ಚೆಗೆ ಬಂತು.

ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಶೇರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ವಿಡಿಯೋ ಕ್ಲಿಪ್​ನಲ್ಲಿ, ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಒಂದನ್ನು ವೀಕ್ಷಿಸಿದ ನಂತರ ನಾನು ಪದ್ಮನಾಭನಗರದಲ್ಲಿ ಈ ‘ಬೆಣ್ಣೆ ಮಸಾಲೆ ದೋಸೆ’ಯನ್ನು ಸವಿಯಲು ಬಂದಿದ್ದೇನೆ. ನಾನು ಈ ದೋಸೆಯನ್ನು ಇಷ್ಟಪಡುತ್ತೇನೆ ಮತ್ತು ನಿಮಗೆ ಉಪ್ಮಾವನ್ನು ಸಹ ಸವಿಯಲು ಸಲಹೆ ನೀಡುತ್ತೇನೆ. ನೀವೆಲ್ಲರೂ ಕೂಡ ಇದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Mon, 12 September 22