370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ, ಸುಳ್ಳು ಭರವಸೆ ನೀಡಲಾರೆ: ಗುಲಾಂ ನಬಿ ಆಜಾದ್
370ನೇ ವಿಧಿ ಹೆಸರಿನಲ್ಲಿ ಜನರನ್ನು ಶೋಷಿಸಲು ನಾನು ಪಕ್ಷಗಳಿಗೆ ಅವಕಾಶ ನೀಡುವುದಿಲ್ಲಅದರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವುದಿಲ್ಲ. ಅದು ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದ ಆಜಾದ್
“ಸ್ವತಂತ್ರ ಸಿದ್ಧಾಂತ” ಹೊಂದಿರುವ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad), ಮೂರು ವರ್ಷಗಳ ಹಿಂದೆ ಕೇಂದ್ರವು ಹಿಂತೆಗೆದುಕೊಂಡ 370 ನೇ ವಿಧಿಯನ್ನು (Article 370) ಮರುಸ್ಥಾಪಿಸಲು ಸಾಧ್ಯವಿಲ್ಲ. ಹಾಗಾಗಿ ಈ ವಿಷಯ ಉಲ್ಲೇಖಿಸಿ ನಾನು ಸುಳ್ಳು ಭರವಸೆ ನೀಡಲಾರೆ ಎಂದಿದ್ದಾರೆ. 370 ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. 370 ಮರುಸ್ಥಾಪನೆಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. 370ನೇ ವಿಧಿ ಹೆಸರಿನಲ್ಲಿ ಜನರನ್ನು ಶೋಷಿಸಲು ನಾನು ಪಕ್ಷಗಳಿಗೆ ಅವಕಾಶ ನೀಡುವುದಿಲ್ಲ.ಅದರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವುದಿಲ್ಲ. ಅದು ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಆಜಾದ್ ಕಾಶ್ಮೀರದ ಬಾರಾಮುಲ್ಲಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಹೇಳಿದರು. 370 ನೇ ವಿಧಿಯು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ಒದಗಿಸಿತು. 2019 ರಲ್ಲಿ ಕೇಂದ್ರ ಸರ್ಕಾರವು ಈ ವಿಧಿಯನ್ನು ರದ್ದುಗೊಳಿಸಿ ರಾಜ್ಯವನ್ನು ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು.ವಾರಗಳ ಹಿಂದೆಯಷ್ಟೇ ಕಾಂಗ್ರೆಸ್ ಜೊತೆಗಿನ ತನ್ನ ಐದು ದಶಕಗಳ ಕಾಲದ ಒಡನಾಟವನ್ನು ತ್ಯಜಿಸಿದ ಆಜಾದ್, ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಮತ್ತು ಜನರ ಉದ್ಯೋಗ ಮತ್ತು ಭೂಮಿಯ ಹಕ್ಕುಗಳಿಗಾಗಿ ಹೋರಾಡುವುದಾಗಿ ಹೇಳಿದರು.
“ನನ್ನೊಂದಿಗೆ ನಿಂತಿರುವ ನನ್ನ ಸಹೋದ್ಯೋಗಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರೇ ನನ್ನ ಹೊಸ ಪಕ್ಷದ ಮೂಲ. ದೇವರ ದಯೆಯಿಂದ, ಮುಂದಿನ 10 ದಿನಗಳಲ್ಲಿ ಅದನ್ನು ಘೋಷಿಸಲಾಗುವುದು” ಎಂದು ಆಗಸ್ಟ್ 26ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಕಾಶ್ಮೀರ ಕಣಿವೆಯಲ್ಲಿ ತನ್ನ ಮೊದಲ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಆಜಾದ್ ಹೇಳಿದರು.
ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿರುವ ಡಾಕ್ ಬಂಗ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಆಜಾದ್, ತನ್ನ ಹೊಸ ಪಕ್ಷವು ಅದರ ಸಿದ್ಧಾಂತ ಮತ್ತು ಚಿಂತನೆಯಲ್ಲಿ ತನ್ನ ಹೆಸರಿನಂತೆ ‘ಆಜಾದ್’ (ಸ್ವತಂತ್ರ) ಎಂದು ಹೇಳಿದರು.
“ನನ್ನ ಪಕ್ಷ ಆಜಾದ್ ಆಗಿರುತ್ತದೆ. ನನ್ನ ಅನೇಕ ಸಹೋದ್ಯೋಗಿಗಳು ನಾವು ಪಕ್ಷಕ್ಕೆ ಆಜಾದ್ ಎಂದು ಹೆಸರಿಸಬೇಕೆಂದು ಹೇಳಿದರು. ಆದರೆ, ನಾನು ಎಂದಿಗೂ ಹೇಳಲಿಲ್ಲ. ಆದರೆ, ಅದು ಸ್ವತಂತ್ರವಾಗಿರುತ್ತದೆ, ಅದು ಬೇರೆಯವರೊಂದಿಗೆ ಸೇರುವುದಿಲ್ಲ ಅಥವಾ ವಿಲೀನಗೊಳ್ಳುವುದಿಲ್ಲ. ಅದು ನನ್ನ ಸಾವಿನ ನಂತರ ಸಂಭವಿಸಬಹುದು. ಆದರೆ ಅಲ್ಲಿಯವರೆಗೆ ಅಲ್ಲ,” ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸಲು ಮತ್ತು ಅದರ ಜನರ ಉದ್ಯೋಗ ಮತ್ತು ಭೂಮಿಯ ಹಕ್ಕುಗಳ ರಕ್ಷಣೆಗಾಗಿ ಹೋರಾಟಕ್ಕೆ ಒತ್ತು ನೀಡಲಾಗುವುದು ಎಂದು ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. “ನನ್ನ ಪಕ್ಷವು ಅಭಿವೃದ್ಧಿ ಆಧಾರಿತವಾಗಿರುತ್ತದೆ. ಅದರ ಕಾರ್ಯಸೂಚಿಯು ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವುದಾಗಿದೆ. ನನ್ನ ಪಕ್ಷ ರಾಷ್ಟ್ರೀಯ ಅಥವಾ ಪ್ರಾದೇಶಿಕ, ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಲ್ಲ ಎಂದ ಆಜಾದ್, ಪಕ್ಷಾತೀತವಾಗಿ ಅನೇಕರು ನನ್ನ ಸ್ನೇಹಿತರು ಎಂದು ಅವರು ಹೇಳಿದರು.
Published On - 8:47 pm, Sun, 11 September 22