ಬೆಂಗಳೂರು, ಜ.12: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿಯ ಸತತ ಮೂರನೇ ಬಾರಿ ಅಧಿಕಾರದ ಗದ್ದಗೆ ಏರುವುದನ್ನು ಐಎನ್ಡಿಐಎ ಮೈತ್ರಿಕೂಟದ ಮೂಲಕ ತಡೆಯಲು ಮುಂದಾಗಿರುವ ಕಾಂಗ್ರೆಸ್, ದಕ್ಷಿಣ ಭಾರತದ ಮೇಲೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ಲಾನ್ ಮಾಡಿಕೊಂಡಿದೆ. ಆದರೆ, ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದರೆ ರಾಜ್ಯದ ಸಚಿವರನ್ನು ತಲೆದಂಡ ಮಾಡುವ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿದ್ದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ (Dr. G. Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬರಬಹುದು. ಅಭ್ಯರ್ಥಿಗಳ ಬಗ್ಗೆ ಅಥವಾ ಸಚಿವರ ಸ್ಪರ್ಧೆ ವಿಚಾರವಾಗಿ ಮಾತಾಡಿಲ್ಲ. ಜವಾಬ್ದಾರಿ ತೆಗೆದುಕೊಂಡು ಪ್ರಚಾರ ಮಾಡಿ ಅಂತ ಹೇಳಿದ್ದಾರೆ. ಸಚಿವರ ತಲೆದಂಡ ಅನ್ನೋದನ್ನೂ ಹೇಳಿದ್ದಾರೆ. ಗೆಲ್ಲುವ ಕ್ಷೇತ್ರದಲ್ಲಿ ಸೋತರೆ ಸರಿಯಾಗಿ ಕೆಲಸ ಮಾಡಿಲ್ಲ ಅಂತ ತಿಳಿದುಕೊಳ್ಳಬೇಕಾಗುತ್ತದೆ ಅಂತ ಹೇಳಿದ್ದಾರೆ. ನೀವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಾಂದರೆ ಕಷ್ಟ ಆಗುತ್ತೆ ಅಂತ ಹೇಳಿದ್ದಾರೆ ಎಂದರು.
ದೆಹಲಿಯಲ್ಲಿ ಸಂಯೋಜಕರ ಸಭೆಯಲ್ಲಿ ಭಾಗಿಯಾದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಮ್ಮನ್ನೆಲ್ಲ ಎಐಸಿಸಿ ಅಧ್ಯಕ್ಷಕರು ಲೋಕಸಭಾ ಚುನಾವಣೆ ತಯಾರಿಗೆ ಕರೆಸಿದ್ದರು. ಕರ್ನಾಟಕ ಮಾತ್ರ ಅಲ್ಲ ಎಲ್ಲಾ ರಾಜ್ಯದವರನ್ನು ಕರೆಸಿದ್ದರು. ದೇಶದಲ್ಲಿ ಒಟ್ಟು 5 ಕ್ಲಷ್ಟರ್ ಇದ್ದು ಕರ್ನಾಟಕ ಕ್ಲಸ್ಟರ್ ಒಂದರಲ್ಲಿದೆ ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್, ಜ.21 ಬೃಹತ್ ಸಮಾವೇಶ
ಸಭೆಯಲ್ಲಿ ಯಾವ ರೀತಿ ಬಿಎಲ್ಎ ಮಾಡಬೇಕು, ಪಂಚಾಯತಿ ಮಟ್ಟದಲ್ಲಿ ಹೇಗೆ ಸಮಿತಿ ಮಾಡಬೇಕು, ಅಭ್ಯರ್ಥಿಗಳ ಆಯ್ಕೆ ಆದ ಮೇಲೆ ಏನೆಲ್ಲಾ ಕ್ರಮ ತಗೆದುಕೊಳ್ಳಬೇಕು ಎಂಬ ಕುರಿತು ಚರ್ಚೆ ಆಗಿದೆ. ಹಿಂದೆ ವೀಕ್ಷಕರನ್ನು ನೇಮಿಸುತ್ತಿದ್ದರು, ಈಗ ಸಂಯೋಜಕರನ್ನು ನೇಮಿಸಿದ್ದಾರೆ. ವಾರ್ ರೂಮ್ ಅಂತ ಇರುವುದನ್ನು ಈಗ ಕನ್ವೆನ್ಷನ್ ಸೆಂಟರ್ಸ್ ಅಂತ ಮಾಡಿದ್ದಾರೆ. ಶಶಿಕಾಂತ್ ಸೆಂಥಿಲ್ ಅವರನ್ನು ಎಲ್ಲಾ ಕೋ ಆರ್ಡಿನೇಷನ್ಗೆ ಮುಖ್ಯಸ್ಥರನ್ನಾಗಿ ಮಾಡಿದ್ದಾರೆ ಎಂದರು.
ಸಭೆಯಲ್ಲಿ ಏನು ಮಾಡಬೇಕು, ಏನು ನೀರಿಕ್ಷೆ ಮಾಡುತ್ತೇವೆ ಎಂಬುದನ್ನ ಹೇಳಿದ್ದಾರೆ. ಕಳೆದ ಬಾರಿ 1 ಕ್ಷೇತ್ರ ಗೆದ್ದಿದ್ದೇವೆ. ಹೆಚ್ಚು ಸ್ಥಾನ ಗೆಲ್ಲಬೇಕು. ಹಿಂದೆ 27 ಸ್ಥಾನ ಗೆದ್ದಿದ್ದೆವು. ಈ ಬಾರಿಯೂ ಅಷ್ಟನ್ನೂ ಗೆಲ್ಲಿ ಅಂತ ಹೇಳಿದ್ದಾರೆ. ಚುನಾವಣೆ ವಿಚಾರವಾಗಿ ಹೈಕಮಾಂಡ್ ಆಗಾಗ ಸೂಚನೆ ರವಾನಿಸಲಿದೆ ಎಂದರು.
ಸುಕ್ರಿಯಾ ಮೋದಿ ಬಾಯ್ ಜಾನ್ ಅಭಿಯಾನ ವಿಚಾರವಾಗಿ ಮಾತನಾಡಿದ ಅವರು, ಮತದಾರರ ಬಳಿ ಹೋಗುವುದಕ್ಕೆ ಆಕ್ಷೇಪಣೆ ಇಲ್ಲ. ಯಾರ ಬೇಕಾದರೂ ಹೋಗಿ ಮತ ಕೇಳಬಹುದು. ನಾವು ಒಂದು ವಿಧಾನ, ಬಿಜೆಪಿಯರದ್ದು ಒಂದು ವಿಧಾನ ಇರುತ್ತದೆ. ಮತದಾನ ತೀರ್ಮಾನ ಮಾಡುವುದನ್ನ ಊಹಿಸಲು ಸಾಧ್ಯವಿಲ್ಲ ಎಂದರು.
ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ಗೆ ಬಂದರೆ ಅಭ್ಯಂತರ ಇಲ್ಲ. ಆದರೆ ಟಿಕೆಟ್ ವಿಚಾರದಲ್ಲಿ ಕೆಲ ಮಾನದಂಡ ಅನ್ವಯವಾಗಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಒಬ್ಬ ಮುಖಂಡ ಬರುತ್ತಾರೆಂದರೆ ಅದನ್ನೇ ನಾವು ನಿರೀಕ್ಷೆ ಮಾಡುತ್ತೇವೆ. ಮುದ್ದಹನುಮೇಗೌಡ ನನ್ನನ್ನು ಮತ್ತು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿದ್ದರು ಎಂದರು.
ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣ ಬಗ್ಗೆ ಮಾತನಾಡಿದ ಪರಮೇಶ್ವರ್, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ರೇಪ್ ಬಗ್ಗೆ ಮೊದಲೇ ದೂರು ಕೊಟ್ಟಿಲ್ಲ. ನಿರ್ಲಕ್ಷ್ಯ ಮಾಡುವಂತದ್ದೇನಿಲ್ಲ. ಯಾವುದೇ ಪ್ರಕರಣ ಇರಲಿ, ಯಾರನ್ನೇ ರಕ್ಷಣೆ ಮಾಡುವಂತದ್ದಾಗಲಿ, ಹಗುರವಾಗಿ ತೆಗೆದುಕೊಳ್ಳುವಂತಹದ್ದೇನು ಇಲ್ಲ ಎಂದರು.
ಕೆಲವು ಆರೋಪಿಗಳನ್ನು ಕೂಡಲೇ ಬಂಧಿಸಿದ್ದಾರೆ. ದೂರು ಕೊಟ್ಟಿದ್ದು ಸುಳ್ಳಾ, ಇಲ್ಲವಾ ಅನ್ನೊದನ್ನ ನೋಡಿ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಪ್ರಕರಣದಲ್ಲಿ ನಿರ್ಲಕ್ಷ ಮಾಡಲ್ಲ. ಶಿರಿಸಿಯಿಂದ ಬಂದು ಅಲ್ಲಿ ರೂಮ್ ಮಾಡಿದ್ದರು. ಬೇರೆಯವರ ಜೊತೆ ಅನೈತಿಕವಾಗಿ ಇದ್ದರ ಅಂತ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡುವಾಗ ನಮಗೆ ರೇಪ್ ಮಾಡಿದ್ದಾರೆ ಅಂತ ಆಮೇಲೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಎಲ್ಲಾ ಮೆಡಿಕಲ್ ಟೆಸ್ಟ್ ನಡೆಯಲಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Fri, 12 January 24