ಕೆಎನ್​ ರಾಜಣ್ಣರನ್ನ ಸಂಪುಟದಿಂದ ಕೈ ಬಿಡುವಂತೆ ಆಗ್ರಹ, ಹೈಕಮಾಂಡ್​​ಗೆ ಕಾರ್ಯಕರ್ತರ ಪತ್ರ

ಸಹಕಾರ ಸಚಿವ ಕೆ.ಎನ್​.ರಾಜಣ್ಣ ಮತ್ತು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ವಿರುದ್ಧ ಎಐಸಿಸಿಗೆ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಸ್ವಪಕ್ಷದ ಕಾರ್ಯಕರ್ತರೇ ದೂರು ನೀಡಿದ್ದಾರೆ.

ಕೆಎನ್​ ರಾಜಣ್ಣರನ್ನ ಸಂಪುಟದಿಂದ ಕೈ ಬಿಡುವಂತೆ ಆಗ್ರಹ, ಹೈಕಮಾಂಡ್​​ಗೆ ಕಾರ್ಯಕರ್ತರ ಪತ್ರ
ಕಾರ್ಯಕರ್ತರ ಪತ್ರ, ಕೆಎನ್​ ರಾಜಣ್ಣ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on: Jan 12, 2024 | 1:02 PM

ಬೆಂಗಳೂರು, ಜನವರಿ 12: ಸಹಕಾರ ಸಚಿವ ಕೆ.ಎನ್​.ರಾಜಣ್ಣ (KN Rajanna) ಮತ್ತು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ (Satish Jarkiholi) ವಿರುದ್ಧ ಎಐಸಿಸಿಗೆ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಸ್ವಪಕ್ಷದ ಕಾರ್ಯಕರ್ತರೇ ದೂರು ನೀಡಿದ್ದಾರೆ. ಅಲ್ಲದೇ ಸಚಿವ ಕೆಎನ್​​ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಸಚಿವ ಕೆಎನ್​ ರಾಜಣ್ಣ ಅವರು ಪದೇ ಪದೇ ಎಐಸಿಸಿ ಅಧ್ಯಕ್ಷ, ಕೆಪಿಸಿಸಿ ಅಧ್ಯಕ್ಷರ ಆದೇಶದ ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಕೆಎನ್​ ರಾಜಣ್ಣ ಅನವಶ್ಯಕವಾಗಿ ಡಿಸಿಎಂ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕೆ.ಎನ್​.ರಾಜಣ್ಣ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಸಚಿವರ ಡಿನ್ನರ್ ಮೀಟಿಂಗ್​ ಬಗ್ಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಚಟುವಟಿಕೆಗಳನ್ನು ಸಹಿಸಬಾರದು. ಸಂಪುಟದಿಂದ ಸಚಿವ ಕೆ.ಎನ್.ರಾಜಣ್ಣರನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕೂಡ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದೆ ಎಂದು ಕಾಂಗ್ರೆಸ್​​ನ 10 ಕಾರ್ಯಕರ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾರ್ಯಕರ್ತರ ಪತ್ರದಲ್ಲಿ ಏನಿದೆ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದರು. ಕಾಂಗ್ರೆಸ್ ಸರಕಾರ ನೀಡಿದ ಐದು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀಡುತ್ತಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಸರ್ಕಾರ ನೀಡಿದ ಹಲವು ಯೋಜನೆಗಳು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪುತ್ತಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ತಲುಪಿಸಲು ಕೆಲವು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ಕೆ.ಎನ್. ರಾಜಣ್ಣ, ಸಹಕಾರ ಸಚಿವರು ಆಗಾಗ ಮೂವರು ಉಪಮುಖ್ಯಮಂತ್ರಿಗಳ ಅವಶ್ಯಕತೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ. ಅವರದೇ ಸಮುದಾಯದ ಅನೇಕ ಕಾಂಗ್ರೆಸ್ ಶಾಸಕರು ಇರುವುದರಿಂದ ಪಕ್ಷದ ಹಿತದೃಷ್ಟಿಯಿಂದ ಕ್ರಮ ಕೈಗೊಂಡು ಅವರನ್ನು ಬದಲಾಯಿಸುವುದು ಉತ್ತಮ.

ಕೆ.ಎನ್.ರಾಜಣ್ಣ ಅವರು ಸಚಿವರಾದ ನಂತರ ತಮಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ, ಮೂವರು ಉಪಮುಖ್ಯಮಂತ್ರಿಗಳು ಬೇಕು ಎಂಬ ಅವರ ಬೇಜವಾಬ್ದಾರಿ ಹೇಳಿಕೆಯು ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ, ಅವರ ಹಿಂದೆ ಯಾರಿದ್ದಾರೆಂದು ತಿಳಿಯಬೇಡಿ. ಸಚಿವರ ಔತಣಕೂಟಗಳ ಹೆಸರಿನಲ್ಲಿ ಪದೇ ಪದೇ ರಾಜಕೀಯ ಮಾಡುವುದು ಅತ್ಯಂತ ಕೆಟ್ಟ ಅಭ್ಯಾಸ, ಜನರಿಗೆ ತಪ್ಪು ಸಂದೇಶ ರವಾನೆ ಮಾಡುವ ಇಂತಹ ಚಟುವಟಿಕೆಗಳನ್ನು ಕಾಂಗ್ರೆಸ್ ಪಕ್ಷ ಸಹಿಸಬಾರದು.

ಇದನ್ನೂ ಓದಿ: ಸುರ್ಜೇವಾಲ ಹೇಳಿಕೆ ನಡುವೆಯೂ ಮೂರು ಡಿಸಿಎಂ ಆಯ್ಕೆ ಬಗ್ಗೆ ಮಾತು ಮುಂದುವರಿಸಿದ ಕೆಎನ್ ರಾಜಣ್ಣ

ಮುಖ್ಯಮಂತ್ರಿ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿಗಳ ರಚನೆ ಕುರಿತು ಯಾರೂ ಮಾತನಾಡಬಾರದು, ಈ ಬಗ್ಗೆ ಪ್ರಸ್ತಾಪಿಸುತ್ತಿರುವ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಪಕ್ಷದ ಮುಖಂಡರು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂಚನೆ ನೀಡಿದ್ದರೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೆಚ್ಚುವರಿ ಉಪಮುಖ್ಯಮಂತ್ರಿಗಳ ರಚನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅಂತಹ ವ್ಯಕ್ತಿಯನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಪಕ್ಷದ ಮುಖಂಡರು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದರಿಂದ ಕೆ.ಎನ್.ರಾಜಣ್ಣ ಅವರ ವರ್ತನೆ ಹದಗೆಡುತ್ತಿದೆ. ಪಕ್ಷದ ಸೂಚನೆ ಉಲ್ಲಂಘಿಸಿದವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಸತೀಶ್ ಜಾರಕಿಹೊಳಿ ಒಳ್ಳೆಯ ವ್ಯಕ್ತಿ, ಆದರೆ ಅವರ ಇತ್ತೀಚಿನ ಹೇಳಿಕೆಗಳು ಮತ್ತು ನಡವಳಿಕೆಯು ಪಕ್ಷಕ್ಕೆ ಹಿನ್ನಡೆ ಉಂಟುಮಾಡುತ್ತಿದೆ. ಪಕ್ಷ ಸಂಘಟನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 18ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ಕೆಲವು ಸಚಿವರ ಬೇಜವಾಬ್ದಾರಿ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತಿದ್ದು ಶಿಸ್ತು ಕ್ರಮ ಜರುಗಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದು ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ನಾಯಕರಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ