ಸುರ್ಜೇವಾಲ ಹೇಳಿಕೆ ನಡುವೆಯೂ ಮೂರು ಡಿಸಿಎಂ ಆಯ್ಕೆ ಬಗ್ಗೆ ಮಾತು ಮುಂದುವರಿಸಿದ ಕೆಎನ್ ರಾಜಣ್ಣ

ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್​ನಲ್ಲಿ ಮೂರು ಡಿಸಿಎಂ ಹುದ್ದೆ ಕೂಗು ಭಾರೀ ಜೋರಾಗಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಿನ್ನೆಯಷ್ಟೇ ಇದಕ್ಕೆ ಫುಲ್​ಸ್ಟಾಪ್ ಇಟ್ಟಿದ್ದರು. ಆದರೆ ಇಂದು ಹೈಕಮಾಂಡ್ ಭೇಟಿಗೂ ಮುನ್ನ ಸಚಿವ ಕೆಎನ್ ರಾಜಣ್ಣ ಅವರು ಮತ್ತೆ ಹೆಚ್ಚುವರಿ ಡಿಸಿಎಂ ಆಯ್ಕೆ ಬಗ್ಗೆ ಮಾತನಾಡಿದ್ದಾರೆ.

ಸುರ್ಜೇವಾಲ ಹೇಳಿಕೆ ನಡುವೆಯೂ ಮೂರು ಡಿಸಿಎಂ ಆಯ್ಕೆ ಬಗ್ಗೆ ಮಾತು ಮುಂದುವರಿಸಿದ ಕೆಎನ್ ರಾಜಣ್ಣ
ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಮಾಡದರೆ ಉತ್ತಮ: ಮತ್ತೆ ಡಿಸಿಎಂ ಚರ್ಚೆ ಎತ್ತಿದ ಕೆಎನ್ ರಾಜಣ್ಣ
Follow us
| Updated By: Rakesh Nayak Manchi

Updated on:Jan 11, 2024 | 9:10 AM

ದೇವನಹಳ್ಳಿ, ಜ.11: ಕರ್ನಾಟಕದಲ್ಲಿ ಮೂರು ಡಿಸಿಎಂ (DCM) ಹುದ್ದೆ ಸೃಷ್ಟಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ನಿನ್ನೆಯಷ್ಟೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ (Randeep Singh Surjewala) ಹೇಳಿದ್ದರು. ಆ ಮೂಲಕ ಹೆಚ್ಚುವರಿ ಡಿಸಿಎಂ ಆಯ್ಕೆಗೆ ಫುಲ್​ಸ್ಟಾಪ್ ಇಟ್ಟಿದ್ದರು. ಆದರೆ, ಇಂದು ಹೈಕಮಾಂಡ್ ಭೇಟಿಗೂ ಮುನ್ನ ಸಚಿವ ಕೆಎನ್ ರಾಜಣ್ಣ (KN Rajanna) ಅವರು ಹೆಚ್ಚುವರಿ ಡಿಸಿಎಂ ಆಯ್ಕೆ ಬಗ್ಗೆ ಮತ್ತೆ ಮಾತೆತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಲೋಕಸಭಾ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಮಾಡಿದರೆ ಒಳ್ಳೆಯದಾಗುತ್ತದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್​ಗೆ ಸಲಹೆ ನೀಡಿದ್ದೇವೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧರಿರುವುದಾಗಿ ಹೇಳಿದರು.

ದೆಹಲಿಗೆ ಹೋಗುತ್ತಿರುವ ವಿಚಾರವಾಗಿ ಮಾತನಾಡಿದ ರಾಜಣ್ಣ, ವರಿಷ್ಠರು 28 ಕ್ಷೇತ್ರಗಳ ಉಸ್ತುವಾರಿ ಸಚಿವರ ಸಭೆ ಕರೆದಿದ್ದಾರೆ. 28 ಕ್ಷೇತ್ರಗಳ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರು.

ರಾಮಮಂದಿರ ಉದ್ಘಾಟನೆಗೆ ಕಾಂಗ್ರೇಸ್ ನಾಯಕರು ಹೋಗದಿರಲು ನಿರ್ಧರಿಸಿದ ವಿಚಾರವಾಗಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಮ್ಮ ನಾಯಕರು ಈಗಾಗಲೇ ಕಾರಣ ತಿಳಿಸಿದ್ದಾರೆ ಎಂದರು.

ಇದನ್ನೂ ಓದಿ: ಹೆಚ್ಚುವರಿ ಡಿಸಿಎಂಗಳ ಕೂಗು ಬಲವಾಗುತ್ತಿದೆಯಲ್ಲ ಅಂದಾಗ ಸುರ್ಜೇವಾಲಾರನ್ನೇ ಕೇಳಿ ಅಂತ ಸಿಡುಕಿದ ಶಿವಕುಮಾರ್!

ಎಲ್ಲಾ ಊರುಗಳಲ್ಲೂ ಸಾವಿರಾರು ವರ್ಷಗಳ ಇತಿಹಾಸವಿರುವ ರಾಮನ ದೇವಸ್ಥಾನಗಳಿವೆ. ಈಗ ವಿಶೇಷ ಏನಪ್ಪ ಅಂದರೆ ರಾಮನ ಜನ್ಮಭೂಮಿಯಲ್ಲಿ ಮಂದಿರ ಆಗಿದೆ. ಈಗಾಗಲೆ ನಮ್ಮ ಹೈಕಮಾಂಡ್ ಕಾಂಗ್ರೇಸ್ ನಾಯಕರು ಭಾಗವಹಿಸಲ್ಲ ಅಂತ ಕಾರಣ ನೀಡಿದ್ದಾರೆ. ಶ್ರೀರಾಮನ ರಾಮಾಯಣ ಕತೃ ವಾಲ್ಮೀಕಿ. ವಾಲ್ಮೀಕಿಯ ದೇವಸ್ಥಾನ ಕಟ್ಟಬೇಕು ಅನ್ನೋದು ನಮ್ಮ ಎಲ್ಲಾ ಸಮುದಾಯದ ಆಗ್ರಹವಾಗಿದೆ. ನಾವು ಈ ಹಿಂದೆ ರಾಮಲಲ್ಲಾನನ್ನು ಟೆಂಟ್​ನಲ್ಲಿ ಕೂರಿಸಿದಾಗ ಹೋಗಿ ಬಂದಿದ್ದೆವು. ಮುಂದೆನೂ ಹೋಗುತ್ತೇವೆ. ಅದು ವೈಯುಕ್ತಿಕ ವಿಚಾರ. ಈಗ ಹೈಕಮಾಂಡ್ ತೀರ್ಮಾನ ಮಾಡಿದೆ ಎಂದರು.

ಅಯೋಧ್ಯೆಗೆ ಹೋಗಲೇಬೇಕಂತಿಲ್ಲ, ಇಲ್ಲಿಂದಲೇ ನಮಸ್ಕಾರ ಮಾಡಬಹುದು: ತಿಮ್ಮಾಪುರ

ಹಿಂದೂ ಧರ್ಮ ಅನ್ನೋದು ಯಾರೊಬ್ಬರ ಆಸ್ತಿಯಲ್ಲ ಎಂದು ಸಚಿವ ಆರ್​ಬಿ ತಿಮ್ಮಾಪುರ ಹೇಳಿದರು. ಅಯೋಧ್ಯೆ ವಿಚಾರವಾಗಿ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಮಾತನಾಡಿದ ಅವರು, ನಾವು ಆಂಜನೇಯ ದೇವಸ್ಥಾನದಿಂದ ಹೊರಗೆ ನಿಂತವರು. ದಲಿತರನ್ನು ದೇವಸ್ಥಾನದ ಒಳಗೆ ಕರೆಯುವುದಿಲ್ಲ. ಊರಿನ ಒಳಗಿನ ದೇವಸ್ಥಾನಕ್ಕೆ ದಲಿತರನ್ನು ಬಿಡುವುದಿಲ್ಲ. ರಾಮಮಂದಿರ ಎಷ್ಟರ ಮಟ್ಟಿಗೆ ದೇವರು ನಮಗೆ ಎಂದರು.

ಅಯೋಧ್ಯೆಗೆ ಹೋಗಲೇಬೇಕು ಅಂತೇನಿಲ್ಲ. ಇಲ್ಲಿಂದಲೇ ನಮಸ್ಕಾರ ಮಾಡಬಹುದು. ಹಿಂದೂ ಬಗ್ಗೆ ಮಾತಾಡುವವರು ಮೊದಲು ದಲಿತರ ಬಗ್ಗೆ ಮಾತಾಡಲಿ. ಹಿಂದೂ ಅಂದರೆ ದಲಿತರು ಇದ್ದಾರೋ ಇಲ್ಲವೋ‌ ಅಂತಾ ಹೇಳಲಿ. ಇದ್ದರೆ ದಲಿತರ ಸಂಸ್ಕೃತಿ ಸಂಸ್ಕಾರ ಅಳವಡಿಸಿಕೊಳ್ಳಲಿ ಎಂದು ಬಿಜೆಪಿಗೆ ಸವಾಲೆಸೆದರು.

ಹೆಚ್ಚುವರಿ ಡಿಸಿಎಂ‌ ಆಯ್ಕೆ ವಿಚಾರವಾಗಿ ಮಾತನಾಡಿದ ತಿಮ್ಮಾಪುರ, ಇದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಎಐಸಿಸಿ ಸಭೆಗೆ ಕರೆದಿದ್ದಾರೆ. ಅದಕ್ಕೆ ಹೋಗುತ್ತಿದ್ದೇನೆ ಎಂದು ತಿಮ್ಮಾಪುರ ಹೇಳಿದರು.

ನವದೆಹಲಿಗೆ ತೆರಳಿದ ಸಚಿವರು

ಎಐಸಿಸಿ ನಾಯಕರ ಸಭೆ ಹಿನ್ನೆಲೆ ಸಚಿವರಾದ ಡಾ.ಪರಮೇಶ್ವರ್​, ಸತೀಶ್ ಜಾರಕಿಹೊಳಿ, ರಾಜಣ್ಣ, ಎಂ.ಬಿ.ಪಾಟೀಲ್​, ಕೃಷ್ಣಭೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ಬೋಸರಾಜು, ಆರ್​.ಬಿ.ತಿಮ್ಮಾಪುರ, ಭೈರತಿ ಸುರೇಶ್​, ಹೆಚ್​.ಕೆ.ಪಾಟೀಲ್ ಅವರು ಕೆಂಪೇಗೌಡ ಏರ್​ಪೋರ್ಟ್​ನಿಂದ ನವದೆಹಲಿಗೆ ತೆರಳಿದರು. ಮಧ್ಯಾಹ್ನ 3 ಗಂಟೆಗೆ ಉಸ್ತುವಾರಿ ಸಚಿವರ ಜೊತೆ ಎಐಸಿಸಿ ನಾಯಕರ ಸಭೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಚಿವರಿಗೆ ಟಾಸ್ಕ್​ ನೀಡುವ ಸಾಧ್ಯತೆ ಇದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:07 am, Thu, 11 January 24

ತಾಜಾ ಸುದ್ದಿ