ಬೆಂಗಳೂರು ನ.18: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ವರ್ಗಾವಣೆಗೆ ಶಿಫಾರಸು ಮಾಡಿದರೆ ತಪ್ಪೇನು? ಹೆಚ್ಡಿ ದೇವೇಗೌಡರು (HD Devegowda) ಪ್ರಧಾನಿಯಾಗಿದ್ದಾಗ, ಹೆಚ್ಡಿ ಕುಮಾರಸ್ವಾಮಿ (HD Kumaraswamy) ಶಿಫಾರಸು ಮಾಡುತ್ತಿರಲಿಲ್ಲವೇ? ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ಶಿಫಾರಸು ಮಾಡುತ್ತಿರಲಿಲ್ಲವೇ? ಯತೀಂದ್ರ ಒಬ್ಬ ಮಾಜಿ ಶಾಸಕನಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರೆಂಟ್ ಕದ್ದ ವಿಚಾರವನ್ನು ಡೈವರ್ಟ್ ಮಾಡಲು ಆರೋಪ ಮಾಡುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಗಮನವನ್ನು ತಮ್ಮ ಶಾಸಕರ ಕಡೆ ಕೊಡಲಿ. ಕಡೇ ಪಕ್ಷ ಅವರ ಶಾಸಕರಾದರೂ ಜೆಡಿಎಸ್ನಲ್ಲಿ ಉಳಿದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ವಿಪಕ್ಷ ನಾಯಕರಾಗಿ ಆರ್ ಅಶೋಕ್ ನೇಮಕ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ಆರು ತಿಂಗಳ ಬಳಿಕ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದಾರೆ. ವರ್ಗಾವಣೆ ಅಂಗಡಿ ತೆಗೆದಿದ್ದಾರೆ ಎನ್ನುವುದನ್ನು ನಾವು ಚರ್ಚೆ ಮಾಡುತ್ತೇವೆ. ವಿಪಕ್ಷ ನಾಯಕ ಆಯ್ಕೆಯಿಂದ ಕಾಂಗ್ರೆಸ್ ಗೆ ಖುಷಿಯಾಗಿದೆ. ಬಿಜೆಪಿಯವರಿಗೆ ಖುಷಿಯಾಗಿಲ್ಲ. ಏಕೆಂದರೆ ಬಿಜೆಪಿ ವರ್ಸಸ್ ಬಿಜೆಪಿ ಇನ್ನೂ ಮುಗಿದಿಲ್ಲ. ಪಾರ್ಟ್ 1 ಬಿ.ಎಲ್. ಸಂತೋಷ ಅವರದ್ದು, ಪಾರ್ಟ್ 2 ಇವರದ್ದು ಎಂದರು.
ಮಂಡ್ಯ ಉಸ್ತುವಾರಿ ಆಗಿದ್ದಾಗ ಗೋ ಬ್ಯಾಕ್ ಅಶೋಕ್ ಎಂದು ಪೋಸ್ಟರ್ ಅಂಟಿಸಿದ್ದರು. ಬಿಜೆಪಿ ಕಚೇರಿಯಲ್ಲೂ ಗೋ ಬ್ಯಾಕ್ ಎಂದು ಪೋಸ್ಟರ್ ಅಂಟಿಸಿದರೇ ಅಚ್ಚರಿಯಿಲ್ಲ. ಒಬ್ಬ ಏಜೆಂಟ್ ಬಂದಿದ್ದರು ಎಂದು ಯತ್ನಾಳ ಹೇಳಿದ್ದಾರೆ. ಹಿಂದೆ ಸಿಎಂ ಖುರ್ಚಿ ಖರೀದಿ ಬಗ್ಗೆ ಯತ್ನಾಳ್ 2000 ಕೋಟಿ ರೂ. ನೀಡಬೇಕು ಎಂದು ಆರೋಪ ಮಾಡಿದ್ದರು. ಹಾಗಾದರೇ ವಿಪಕ್ಷ ನಾಯಕನ ಸ್ಥಾನ ಎಷ್ಟಕ್ಕೆ ಫಿಕ್ಸ್ ಆಗಿದೆ? ನಾನು ಮಾರಾಟಕ್ಕಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಶಾಸಕರು ಕೇಳಿದಕ್ಕೆ ಅಶೋಕ್ ಉತ್ತರ ಕೊಡಲಿ, ಕಾಂಗ್ರೆಸ್ನವರಿಗೆ ಉತ್ತರ ಕೊಡುವುದು ಬೇಡ. ಆರ್ ಅಶೋಕ ಬಿಜೆಪಿಯಲ್ಲಿ ಬೆಳೆಯಬೇಕು, ವಿಪಕ್ಷ ನಾಯಕರಾಗಿಯೇ ಉಳಿಯಬೇಕು ಎಂಬುದು ನಮ್ಮ ಆಸೆ. ಬಿಎಸ್ ಯಡಿಯೂರಪ್ಪ ಅವರ ಮೇಲುಗೈ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಾದರೇ ಬಿ.ಎಲ್. ಸಂತೋಷ ಅವರು ಏನು ಮಾಡಬೇಕು? ಎಲ್ಲದಕ್ಕೂ ಉತ್ತರ ಕೇಶವಕೃಪಾ, ಬಿಜೆಪಿ ಕಚೇರಿಯಲ್ಲಿದೆ ಎಂದು ಹೇಳಿದರು.
ವಿವೇಕಾನಂದ ವಿಚಾರಕ್ಕೂ ಯತೀಂದ್ರ ಹೇಳಿಕೆಗೂ ಸಂಬಂಧ ಇಲ್ಲ. ಹಾಗೇನಾದರೂ ಇದ್ದರೆ ಹೆಚ್.ಡಿ.ಕುಮಾರಸ್ವಾಮಿ ಹೇಳಬೇಕಿತ್ತಲ್ವಾ? ವರ್ಗಾವಣೆಗೆ ಪೊಲೀಸ್ ಬೋರ್ಡ್ ಮಾಡಿದ್ದೇನೆ. ವಿವೇಕಾನಂದ ಹೆಸರು ಬಂದಿದ್ದು ಕೇವಲ ಕಾಕತಾಳೀಯ ಅನ್ನಿಸುತ್ತೆ. ಯತೀಂದ್ರ ಆಗಲಿ ಬೇರೆಯವರಾಗಲಿ ಯಾವುದೇ ಒತ್ತಡ ಹೇರಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಸ್ಪಷ್ಟಪಡಿಸಿದರು.
ಆಶ್ರಯ ಸಮಿತಿ ಅಧ್ಯಕ್ಷರಾಗಿರುವ (ಸಾಂವಿಧಾನಿಕ ಹುದ್ದೆ) ಯತೀಂದ್ರ ಸಿದ್ದರಾಮಯ್ಯ ಅವರು ಗುರುವಾರ ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ, ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಅಪ್ಪ ಹೇಳಿ ಅಂತ ಮಾತನಾಡಿದ್ದರು. ತಂದೆಯೊಂದಿಗೆ ಮಾತನಾಡಿದ್ದ ಫೋನ್ ಕಾಲ್ ವಿಡಿಯೋ ವೈರಲ್ ಆಗಿತ್ತು.
ಈ ವಿಡಿಯೋದಲ್ಲಿ ಯತೀಂದ್ರ ಸಿದ್ದರಾಮಯ್ಯ ಯಾವುದೋ ಲಿಸ್ಟ್ ಬಗ್ಗೆ ಮಾತನಾಡುತ್ತ ವಿವೇಕಾನಂದ ಎಂಬ ಹೆಸರನ್ನು ಹೇಳಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ವಿವೇಕಾನಂದ ಎಂಬ ಹೆಸರಿನ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶದಲ್ಲಿ ವಿವೇಕಾನಂದ ಎಂಬ ಇನ್ಸಪೆಕ್ಟರ್ ಹೆಸರು ಇದೆ. ಹೀಗಾಗಿ ಸಿಎಂ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಇನ್ಸಪೆಕ್ಟರ್ ವಿವೇಕಾನಂದ ಅವರ ವರ್ಗಾವಣೆಗೆ ಶಿಫಾರಸು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಚಿವ ಪ್ರೀಯಾಂಕ್ ಖರ್ಗೆ ಅವರು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Sat, 18 November 23