ಕರ್ನಾಟಕದಲ್ಲಿ ವಿದ್ಯುತ್​ ದರ ಏರಿಕೆ: ಇದಕ್ಕೆ ಕಾಂಗ್ರೆಸ್​ ಕಾರಣ ಎಂದ ಸಚಿವ ಸುನಿಲ್ ಕುಮಾರ್

ದಸರಾ ಸಂಭ್ರದಲ್ಲಿರುವ ಕರ್ನಾಟಕದ ಜನರಿಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಿದೆ. ಇನ್ನು ಈ ಬಗ್ಗೆ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಿಷ್ಟು...

ಕರ್ನಾಟಕದಲ್ಲಿ ವಿದ್ಯುತ್​ ದರ ಏರಿಕೆ: ಇದಕ್ಕೆ ಕಾಂಗ್ರೆಸ್​ ಕಾರಣ ಎಂದ ಸಚಿವ ಸುನಿಲ್ ಕುಮಾರ್
ಸಚಿವ ಸುನೀಲ್ ಕುಮಾರ್
Updated By: ರಮೇಶ್ ಬಿ. ಜವಳಗೇರಾ

Updated on: Oct 02, 2022 | 6:17 PM

ಉಡುಪಿ: ರಾಜ್ಯಾದ್ಯಂತ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 01ರಿಂದ ಪ್ರತಿ ಯುನಿಟ್‌ ವಿದ್ಯುತ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ದರ ಹೆಚ್ಚಳವಾಗಿದ್ದು, ಮುಂದಿನ ವಿದ್ಯುತ್‌ ಬಿಲ್‌ನಲ್ಲಿ ಪರಿಷ್ಕೃತ ದರದ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಆರು ತಿಂಗಳಲ್ಲಿ ಎರಡನೇ ಬಾರಿ ದರ ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಈ ಬಗ್ಗೆ ಇಂಧನ ಸಚಿವ ವಿ.ಸುನಿಲ್​ ಕುಮಾರ್​ ಸ್ಪಷ್ಟನೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್​ನತ್ತ ಬೊಟ್ಟು ಮಾಡಿದ್ದಾರೆ.

ಉಡುಪಿ ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್, 2014ರಲ್ಲಿ ರೂಪಿಸಿದ ನಿಯಮಾವಳಿಯೇ ಮುಂದುವರಿಯುತ್ತಿದೆ. ನಮ್ಮ ಸರ್ಕಾರ ಯಾವುದೇ ಹೊಸ ನಿಯಮಾವಳಿ ಮಾಡಿಲ್ಲ. ರಾಜ್ಯದ ಜನತೆಗೆ ಹೊರೆಯಾಗುತ್ತಿದೆ ಎಂದು ನನಗೂ ಅನ್ನಿಸಿದೆ. ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಸಾಧಕ-ಬಾಧಕಗಳ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ. ಅಗತ್ಯಬಿದ್ದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲು ಹಿಂಜರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರಾಜ್ಯದ ಜನತೆಗೆ ವಿದ್ಯುತ್​ ದರ ಏರಿಕೆ ಶಾಕ್! ಇಂದಿನಿಂದ ಪರಿಷ್ಕೃತ ವಿದ್ಯುತ್ ದರ ಜಾರಿ

ಹಿಂದಿನ ನಿಯಮಾವಳಿಯೇ ಮುಂದುವರಿಯುತ್ತಿದೆ. ನಮ್ಮ ಸರಕಾರ ಯಾವುದೇ ಹೊಸ ನಿಯಮಾವಳಿ ಮಾಡಿಲ್ಲ. ಈ ನಿಯಮಾವಳಿ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ದರ ಹೊಂದಾಣಿಕೆ ಮಾಡುವ ನಿಯಮದ ಬಗ್ಗೆ ಮರು ಚಿಂತನೆ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್​​ನಲ್ಲಿ ಈಗಾಗಲೇ ಎರಡ್ಮೂರು ಶಕ್ತಿಗಳು ಕೆಲಸ ಮಾಡ್ತಿವೆ. ಖರ್ಗೆ ಅಧ್ಯಕ್ಷರಾದರೆ ಗಾಂಧಿ ಕುಟುಂಬದ ಕೈಗೊಂಬೆಯಾಗಿ ಕೆಲಸ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಯುವಕರ ಪಾರ್ಟಿ ಯುವಕರನ್ನ ಆಕರ್ಷಿಸುತ್ತೇವೆ ಅಂತಾರೆ. ಖರ್ಗೆ ಅಂತ ಹಿರಿಯರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಕಾಂಗ್ರೆಸ್ ಯುವಕರಿಗೆ ಯಾವ ಆದ್ಯತೆ ನೀಡುತ್ತೆ ಕಾದು‌ನೋಡಬೇಕು ಎಂದು ಟಾಂಗ್ ಕೊಟ್ಟರು.

ಕರ್ನಾಟಕದಲ್ಲಿ ಕಾಂಗ್ರೆಸ್​​ನ​ ಮೂರನೇ ಬಣ ಉದಯವಾಗುತ್ತೆ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಖರ್ಗೆ ಗುಂಪು ಉದಯವಾಗಲಿದೆ ಎಂದರು.

Published On - 6:17 pm, Sun, 2 October 22