Mallikarjun Kharge: ಕಾಂಗ್ರೆಸ್ ಪಾಲಿನ ನಾಟೌಟ್ ಬ್ಯಾಟ್ಸ್ಮನ್ ಮಲ್ಲಿಕಾರ್ಜುನ ಖರ್ಗೆ
Political Analysis: ಇಷ್ಚು ದಿನ ಮಲ್ಲಿಕಾರ್ಜುನ್ ಖರ್ಗೆ ಅವರು ಆಡಿದ ಆಟಕ್ಕೂ, ಇನ್ನುಮುಂದೆ ಆಡುವ ಆಟಕ್ಕೂ ಖಂಡಿತ ಸಾಕಷ್ಟು ವ್ಯತ್ಯಾಸವಿದೆ.
ಬೆಂಗಳೂರು: ಅತಿಯಾದ ನಿಷ್ಠೆಯು ರಾಜಕಾರಣದಲ್ಲಿ ಲಾಭ ನೀಡುವುದಿಲ್ಲ ಎಂಬ ಮಾತಿದೆ. ಆದರೆ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಲಕಾಲಕ್ಕೆ ಈ ವಾದ ತಪ್ಪು ಎನ್ನುವುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಇನ್ನೇನು ಖರ್ಗೆ ಅವರ ರಾಜಕೀಯ ಆಟ ಮುಗಿಯಿತು ಎನ್ನುವಾಗಲೇ, ಆಟದ ಶೈಲಿಯ ಜೊತೆಗೆ ಅಖಾಡವನ್ನೂ ಬದಲಿಸುತ್ತಾ ಎದುರಾಳಿಗಳ ಜೊತೆಗೆ ಸ್ವಪಕ್ಷೀಯರಿಗೂ ಖರ್ಗೆ ಶಾಕ್ ನೀಡಿದ್ದುಂಟು. ಇಷ್ಚು ದಿನ ಮಲ್ಲಿಕಾರ್ಜುನ್ ಖರ್ಗೆ ಅವರು ಆಡಿದ ಆಟಕ್ಕೂ, ಇನ್ನುಮುಂದೆ ಆಡುವ ಆಟಕ್ಕೂ ಖಂಡಿತ ಸಾಕಷ್ಟು ವ್ಯತ್ಯಾಸವಿದೆ. ಕರ್ನಾಟಕದ ಅದರಲ್ಲೂ ಹೈದರಾಬಾದ್ ಕರ್ನಾಟಕ ರಾಜಕಾರಣದ ಪರಮೋಚ್ಚ ನಾಯಕನಾಗಿ ರೂಪಗೊಂಡಿದ್ದ ಖರ್ಗೆ ಅವರು ಇನ್ನು ಮುಂದೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee – AICC) ಅಧ್ಯಕ್ಷರಾಗಿ ಹೊರಹೊಮ್ಮುವುದು ಬಹುತೇಕ ನಿಶ್ಚಿತವಾಗಿದೆ.
ರಾಜಕೀಯ ವಿಶ್ಲೇಷಣೆ: ಪ್ರಮೋದ್ ಶಾಸ್ತ್ರಿ
ನೆಹರು ನಂತರ ಕಾಂಗ್ರೆಸ್ನಲ್ಲಿ ಕೇವಲ ಗಾಂಧಿ ಮನೆತನಕ್ಕೆ ಮಾತ್ರ ಸೀಮಿತವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ಪಿ.ವಿ.ನರಸಿಂಹ ರಾಯರ ಕಾಲದಲ್ಲಿ ಆಚೀಚೆ ಸಾಗಿದ್ದುಂಟು. ಆದರೀಗ ದಶಕಗಳ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಹೊಸಿಲಿನಿಂದಾಚೆಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಈ ಪದವು ಕೊಂಕು ನುಡಿ ಎನ್ನಿಸಿದರೂ ವಾಸ್ತವಕ್ಕೆ ಹತ್ತಿರ ಎಂಬುದು ನನ್ನ ಅಭಿಮತ.
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ? ಗಾಂಧಿ ಕುಟುಂಬದ ಫತ್ವಾ ಮೀರಿ ಅವರೇನು ಮಾಡಬಲ್ಲರು? ಖರ್ಗೆ ಅವರಿಗೊಂದು ಚೌಕಟ್ಟು ತೊಡಿಸಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆರಂಭಿಸಲಾಗಿದೆ. ಅತ್ತ ದೂರದ ದೆಹಲಿ ಪಡಸಾಲೆ ಮಲ್ಲಿಕಾರ್ಜನ ಖರ್ಗೆ ಪಟ್ಟಾಭಿಷೇಕವನ್ನು ಅದೆಷ್ಟು ಗಂಭೀರವಾಗಿ ಸ್ವೀಕರಿಸಿದೆಯೋ ತಿಳಿಯದು. ಆದರೆ ರಾಜ್ಯ ಕಾಂಗ್ರೆಸ್ ನ ಅಂತಃಕರಣದಲ್ಲಿ ಒಂದು ಅಲೆ ಸೃಷ್ಟಿಯಾಗಿರುವುದು ಮಾತ್ರ ಸತ್ಯವಾಗಿದೆ.
1999ರ ಚುನಾವಣೆ ಫಲಿತಾಂಶದ ಬಳಿಕ ಮುಂದಿನ ಮುಖ್ಯಮಂತ್ರಿ ಗಾದಿಗೆ ಸ್ಪರ್ಧೆ ಶುರುವಾದಾಗ, ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ, ಅಂದಿನ ಕೆಪಿಸಿಸಿ ಉಸ್ತುವಾರಿ ಗುಲಾಂ ನಬಿ ಆಜಾದ್, ಜೊತೆಗೂಡಿ ಸದಾಶಿವ ನಗರದಲ್ಲಿರುವ ಖರ್ಗೆ ಅವರ ‘ರಾಧಾ ನಿವಾಸ’ದಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದರು. ಎಐಸಿಸಿ ಅಧ್ಯಕ್ಷರ ಪರಮೋಚ್ಚ ಆದೇಶವಿದೆ, ಖುದ್ದು ಮೇಡಂ ಹೇಳಿದ್ದಾರೆ, ಈ ಬಾರಿ ಸಹಕರಿಸಿ ಎಂದು ಹೇಳಿದಾಗ, ಮೇಡಂ ಮಾತಿಗೆ ಸಮ್ಮತಿಯ ಕಪ್ಪ ಕಾಣಿಕೆಯನ್ನ ಖರ್ಗೆ ಸಾಹೇಬರು ಒಪ್ಪಿಸಿದ್ದರು. ಅಲ್ಲಿಂದಾಚೆಗೆ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ.
ಮೇಡಂ ಹೆಸರಲ್ಲಿ ಮುಖ್ಯಮಂತ್ರಿಯಾದ ಎಸ್.ಎಂ.ಕೃಷ್ಣ ಅವರಾಗಲಿ, ಅಂದು ಖರ್ಗೆ ಅವರನ್ನು ಒಪ್ಪಿಸಿದ್ದ ಗುಲಾಂ ನಬಿ ಆಜಾದ್ ಅವರಾಗಲಿ ಇಂದು ಕಾಂಗ್ರೆಸ್ನಲ್ಲಿಲ್ಲ. ಆದರೆ ಅಂದು ಕಾಂಗ್ರೆಸ್ ಅಧ್ಯಕ್ಷ ಗಾದಿಯ ಆದೇಶಕ್ಕೆ ತಲೆಬಾಗಿದ್ದ ಖರ್ಗೆ, ಇಂದು ಅದೇ ಗಾದಿಯಲ್ಲಿ ಆಸೀನರಾಗಲು ಸಿದ್ದರಾಗುತ್ತಿರುವುದು ರಾಜಕಾರಣದ ಬಹುದೊಡ್ಡ ವಿಶೇಷಗಳಲ್ಲಿ ಒಂದು. ಅಂದು ಕಾಂಗ್ರೆಸ್ನ ಮುಖ ಎಂಬಂತೆ ಇದ್ದ ಎಸ್ಎಂ ಕೃಷ್ಣ, ಗುಲಾಂ ನಬಿ ಆಜಾದ್ ಔಟ್ ಆಗಿದ್ದಾರೆ. ಆದರೆ ಮಲ್ಲಿಕಾರ್ಜನ್ ಖರ್ಗೆ ಇನ್ನೂ ನಾಟೌಟ್. ಅಷ್ಟೇ ಅಲ್ಲ ಸ್ಟಿಲ್ ಬ್ಯಾಟಿಂಗ್.
2013ರಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೂಲ ಕಾಂಗ್ರೆಸ್ಸಿಗರಿಗೆ ಬೇಸರವಾಗಿದ್ದು ಸುಳ್ಳಲ್ಲ. ಕಾಂಗ್ರೆಸ್ ಮನೆಗೆ ಅಡಿಯಿಟ್ಟು ದಶಕ ಕಳೆಯುವ ಮೊದಲೇ ಸಿದ್ದರಾಮಯ್ಯ ಸಿಎಂ ಗಾದಿ ಮೇಲೆ ಕೂತಿದ್ದರು. ಅತ್ತ ದಶಕಗಳಿಂದ ತಾಳ್ಮೆ ಪ್ರದರ್ಶಿಸಿದ ಮಲ್ಲಿಕಾರ್ಜುನ್ ಖರ್ಗೆಗೆ ಅಂದು ದೊರಕಿದ್ದು ನಿರಾಸೆಯೇ. ಕಾಂಗ್ರೆಸ್ಗೆ ಅಡಿಯಿಡುತ್ತಿದ್ದಂತೆ ಖರ್ಗೆ ಅವರಿಂದ ವಿಪಕ್ಷ ನಾಯಕನ ಸ್ಥಾನವನ್ನ ಪಡೆದುಕೊಂಡು ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗುತ್ತಿದ್ದಂತೆ ಮತ್ತೊಂದು ರಾಜಕೀಯ ತಂತ್ರ ಹೂಡಿದರು. ಅದರಂತೆ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ತೆರಳುವಂತೆ ಮಾಡಿದರು.
ಅದರ ಫಲವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಗೆದ್ದು ದೆಹಲಿ ಅಂಗಳಕ್ಕೆ ತೆರಳಿದರು. ಇನ್ನೊಂದೆಡೆ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಯಾದರು. ಈ ಮೂಲಕ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಬಲ್ಲ ಮಲ್ಲಿಕಾರ್ಜುನ ಖರ್ಗೆ ಅವರನ್ನ ದೆಹಲಿಗೆ ಕಳುಹಿಸುವುದರ ಜೊತೆಜೊತೆಗೆ ಪುತ್ರ ಪ್ರಿಯಾಂಕ್ ಖರ್ಗೆಗೆ ಮಂತ್ರಿಗಿರಿ ನೀಡಿ ಖರ್ಗೆ ಸಾಹೇಬರು ಸಿಟ್ಟಾಗದಂತೆ ಕ್ರಮವಹಿಸಿದರು. ಅಂದು ತಮ್ಮ ಸಿಎಂ ಗಾದಿ ರಕ್ಷಣೆಯ ಸಹಜ ರಾಜಕಾರಣದ ತಂತ್ರಗಾರಿಕೆಯ ಭಾಗವಾಗಿ ಖರ್ಗೆಯವರನ್ನ ದೆಹಲಿಗೆ ರಾಜಕಾರಣಕ್ಕೆ ಕಳುಹಿಸುವಲ್ಲಿ ಸಮ್ಮತಿಸಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಔಟ್ ಆಗಿದ್ದಾರೆ. ಆದರೆ ಮಲ್ಲಿಕಾರ್ಜುನ್ ಖರ್ಗೆ ದೆಹಲಿ ಅಂಗಳಲ್ಲಿ ಇನ್ನೂ ನಾಟೌಟ್, ಅಷ್ಟೇ ಅಲ್ಲ ಸ್ಟಿಲ್ ಬ್ಯಾಟಿಂಗ್.
ಮಲ್ಲಿಕಾರ್ಜುನ ಖರ್ಗೆ ಕೇವಲ ಬ್ಯಾಟಿಂಗ್ ಅಷ್ಟನ್ನೇ ಮಾಡುತ್ತಿಲ್ಲ. ಈಗ ಸ್ವತಃ ತಂಡದ ಕ್ಯಾಪ್ಟನ್ ಆಗಲು ಹೊರಟಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಮೇಲೆ ಹೇಗೆ ನೇರ ಪರಿಣಮ ಬೀರಲಿದೆ ಎಂಬುದೇ ಈ ಸ್ಟೋರಿಯ ಕೇಂದ್ರಬಿಂದು. ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕರ್ನಾಟಕ ಕಾಂಗ್ರೆಸ್ನಲ್ಲಿ ಈಗಾಗಲೇ ಪವರ್ ಪಾಲಿಟಿಕ್ಸ್ ಆರಂಭವಾಗಿದೆ. ಹಿಂದಿನಿಂದಲೂ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ರಾಜ್ಯ ಕಾಂಗ್ರೆಸ್ನಲ್ಲಿ ತೂಕವಿದ್ದರೂ, ಇತ್ತಿಚೆಗೆ ಸಿದ್ದರಾಮಯ್ಯ ಎಂಬ ಪ್ರಬಲ ರಾಜಕಾರಣಿಯ ಮಾತಿಗೆ ಉಳಿದವರ ಅಭಿಪ್ರಾಯ ಅಂಟಿಸಿ ಕಾಂಗ್ರೆಸ್ ನಿಲುವು ಎಂದು ಚಪ್ಪೆ ಒತ್ತಿದ್ದೇ ಹೆಚ್ಚು.
ನಾಯಕರ ರಾಜಕೀಯ ವ್ಯಕ್ತಿತ್ವವುವೂ ಇದಕ್ಕೆ ಕಾರಣವಿರಬಹುದು. ಖರ್ಗೆ ಪಟ್ಟಾಭಿಷೇಕದ ಬಗ್ಗೆ ಮಾತನಾಡುವ ಮೊದಲು ಅವರ ರಾಜಕೀಯ ವ್ಯಕ್ತಿತ್ವದ ಪ್ಲಸ್ ಮತ್ತು ಮೈನಸ್ಗಳೆರಡರ ಬಗ್ಗೆಯೂ ಚರ್ಚಿಸಬೇಕು. ಪಕ್ಷನಿಷ್ಠೆಯು ಖರ್ಗೆ ಅವರ ಬಹುದೊಡ್ಡ ಶಕ್ತಿ ಎಂಬುದರಲ್ಲಿ ಅನುಮಾನವಿಲ್ಲ. ಅದಕ್ಕಿಂತ ಮಿಗಲಾಗಿ ಖರ್ಗೆ ಎಂದೂ ಸಹ ಹೆಚ್ಚು ಮಾತನಾಡಿದವರಲ್ಲ. ಅದೇ ಕಾರಣಕ್ಕೇನೋ ಅವರ ನಿವಾಸದ ಎದರು ಹೆಚ್ಚಾಗಿ ಟಿವಿ ಮಾಧ್ಯಮಗಳ ಮೈಕ್ ಆರ್ಭಟಿಸಿದ್ದು ಕಡಿಮೆ. ಮೇಲಾಗಿ ಖರ್ಗೆ ಬಾಯಿಯಿಂದ ಮಾತುಗಳು ಜಾರಿಲ್ಲ. ಲೂಸ್ ಟಾಕ್ಗಳಿಗೆ ಅವರು ಎಂದೂ ಅವಕಾಶ ನೀಡಿದವರಲ್ಲ.
ಕ್ಯಾಮೆರಾಗಳ ಮುಂದೆ ಬಡಬಡಿದುಕೊಳ್ಳುವುದಕ್ಕಿಂತ ಲೋಕಸಭೆ-ರಾಜ್ಯಸಭೆಯಲ್ಲೇ ಮಾತನಾಡಿದ್ದು ಹೆಚ್ಚು. ಇನ್ನೂ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ಖರ್ಗೆ ಒಬ್ಬ ನಿಪುಣ. ಯಾರು ಅದೆಷ್ಟೇ ಕೆದಕಿದರೂ ಖರ್ಗೆ ಎಂದೂ ಸಹ ಮಾಹಿತಿ ಸೋರಿಕೆ ಮಾಡಿಲ್ಲ. ಎಂಥ ಸಂದರ್ಭದಲ್ಲೂ ಸಹ ಪಕ್ಷವನ್ನು ಕಡೆಗಣಿಸಿಲ್ಲ. ಎದುರಾಳಿಗಳ ವಾಗ್ದಾಳಿಗಳನ್ನು ಖರ್ಗೆ ಮುಲಾಜಿಲ್ಲದೆ ಎದುರಿಸಿದ್ದಾರೆ. ಪಕ್ಷವನ್ನು ಕಷ್ಟಕಾಲಗಳಲ್ಲೂ ಸಮರ್ಥಿಸಿಕೊಂಡಿದ್ದಾರೆ. ಈ ಅಂಶಗಳೇ ಗಾಂಧಿ ಕುಟುಂಬಕ್ಕೆ ಇಷ್ಟವಾಗಿದ್ದು. ಆದರೆ ದೇಶದಲ್ಲಿ ಅಂಗಾತ ಮಕಾಡೆ ಮಲಗಿರುವ ಕಾಂಗ್ರೆಸ್ಗೆ ಶಕ್ತಿ ತುಂಬಲು ಇಷ್ಟೇ ಸಾಕೇ?
ಹೀಗಾಗಿಯೇ ಮಲ್ಲಿಕಾರ್ಜುನ್ ಖರ್ಗೆ ಅವರ ನಾಯಕತ್ವವನ್ನು ಪ್ರಶ್ನೆ ಮಾಡುವವರಿದ್ದಾರೆ. ಕರ್ನಾಟಕ ರಾಜಕಾರಣದಲ್ಲಿ ಖರ್ಗೆಜಿ ಬಹುದೊಡ್ಡ ಲೀಡರ್ ಆಗಿದ್ರೂ, ಮಾಸ್ ಲೀಡರ್ ಅಲ್ಲ. ಕೆಪಿಸಿಸಿ ಚುಕ್ಕಾಣಿ ಹಿಡಿದಾಗಲೂ ಸಹ ಉತ್ತಮ ಫಲಿತಾಂಶ ಹೊರಬಿರಲಿಲ್ಲ. ಸಂಘಟನೆಯ ವಿಚಾರದ ಬಗ್ಗೆ ದಲಿತ ಹೋರಾಟಗಾರರೇ ಅನೇಕ ಬಾರಿ ಪ್ರಶ್ನೆ ಎತ್ತಿದ್ದಾರೆ. 70-80ರ ದಶಕಗಳ ಸಮುದಾಯ, ಸಂಘಟನೆ ಬಗ್ಗೆ ಹೇಳುವುದಾದರೂ ಹಿರಿಯ ದಲಿತ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರಂಥವರ ಓಡಾಟವನ್ನು ಹೋಲಿಸಿ ಖರ್ಗೆ ಏನು ಮಾಡಿದರು ಎಂದು ಪ್ರಶ್ನಿಸಿದ್ದುಂಟು.
ಖರ್ಗೆ ಪ್ರಬುದ್ಧ ರಾಜಕಾರಣಿಯಾದರೂ, ಅವರ ಸಂಘಟನಾ ಆಲಸ್ಯದ ಬಗ್ಗೆ ಕೈ ನಾಯಕರೇ ಒಳಗೊಳಗೆ ದನಿ ಎತ್ತಿದ್ದುಂಟು. ಎಡಗೈ ಮತ್ತು ಬಲಗೈ ಸಮುದಾಯಗಳು ನೆಪ ಮಾತ್ರಕ್ಕೆ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳಾಗಿವೆಯೇ ಹೊರತು ಮೊದಲಿನಿಂತೆ ಕಾಂಗ್ರೆಸ್ ಜೊತೆ ಗಟ್ಟಿಯಾಗಿ ನಿಂತಿಲ್ಲ. ಹೀಗಾಗಿ ಕನಿಷ್ಠ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಖರ್ಗೆ ತಮ್ಮ ಸಮುದಾಯದ ಮತಗಳನ್ನು ವಾಪಸ್ ಪಕ್ಷದ ಮತಬುಟ್ಟಿಗೆ ತರುವುದೇ ದೊಡ್ಡ ಸವಾಲು. ಇದೆಲ್ಲದರ ಹೊರತಾಗಿಯೂ ಮಲ್ಲಿಕಾರ್ಜುನ ಖರ್ಗೆ ಎಫೆಕ್ಟ್ ಬಗ್ಗೆ ಕಾಂಗ್ರೆಸ್ ಪಡಸಾಲೆಯಲ್ಲಿ ಚರ್ಚೆ ಆರಂಭವಾಗಿದೆ.
ಚುನಾವಣೆಗೂ ಮೊದಲೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರಾಜ್ಯ ಸುತ್ತುತ್ತಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಉಭಯ ನಾಯಕರು ತಮ್ಮತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಕಾಂಗ್ರೆಸ್ ಕರ್ನಾಟಕ ಘಟಕವು ಸಿದ್ದರಾಮಯ್ಯ ಬಣ ಹಾಗೂ ಡಿ.ಕೆ.ಶಿವಕುಮಾರ್ ಬಣ ಎಂದು ಎರಡು ಗುಂಪಾಗಿ ವಿಭಜನೆಯಾಗಿದೆ. ಇದರ ನಡುವೆ ಮೂಲ ಕಾಂಗ್ರೆಸ್ಸಿಗರು ಎಂಬ ಕಾಂಗ್ರೆಸ್ ಒಳಗಿನ ಮೂರನೇ ರಂಗವಿದ್ದರೂ ಅದರ ದನಿ ಜೋರಾಗಿ ಕೇಳಿಸಿದ್ದು ಅಪರೂಪ.
ಆದರೆ ಈಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ, ಮೂಲ ಕಾಂಗ್ರೆಸ್ಸಿಗರೆಂಬ ಐಡೆಂಟಿಟಿ ಕಾರ್ಡ್ಗೆ ಇನ್ನಷ್ಟು ಬೆಲೆ ಬರಲಿದೆ. ಜೊತೆಗೆ ಕೇವಲ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣವನ್ನಷ್ಟೇ ಗಂಭೀರವಾಗಿ ಸ್ವೀಕರಿಸುತ್ತಿದ್ದ ಮರಿ ನಾಯಕರು ಖರ್ಗೆ ಅವರ ಸದಾಶಿವನಗರದ ಸಮ್ಯಕ್ ರಾಧಾ ನಿವಾಸದೆದರು ತಮ್ಮ ವಾಹನಗಳನ್ನು ಪಾರ್ಕ್ ಮಾಡುವ ಕಾಲ ದೂರವಿಲ್ಲ. ಅಲ್ಲಿಗೆ ರಾಜ್ಯ ಕಾಂಗ್ರೆಸ್ನ ಟಿಕೆಟ್ ಹಂಚಿಕೆ ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಮೂರನೇ ಆಯಾಮದ (3ಡಿ) ಸ್ಪರ್ಶ ಸಿಗಲಿದೆ. ಅಲ್ಲಿಗೆ ಟಿಕೆಟ್ ಹಂಚಿಕೆಯಲ್ಲಿ ಔಟ್ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದವರಿಗೆ ತಾವಿನ್ನೂ ನಾಟೌಟ್ ಎಂಬ ಸಂದೇಶವನ್ನು ಖರ್ಗೆ ರವಾನಿಸಿದಂತಾಗಿದೆ.
ಇನ್ನು ಸಿದ್ದರಾಮಯ್ಯ ಅವರ ರಾಜಕೀಯ ಅಸ್ಮಿತೆಯು ಅಹಿಂದ ಬ್ರಾಂಡ್ನಲ್ಲೇ ಅಡಗಿದೆ. ಅಲ್ಪಸಂಖ್ಯಾತರು, ಹಿಂದುಳಿದ ಸಮಾಜದವರು ಸಿದ್ದರಾಮಯ್ಯ ನಾಯಕತ್ವವನ್ನ ಒಪ್ಪಿದರೂ, ದಲಿತರು ಮಾತ್ರ ಸಂಪೂರ್ಣವಾಗಿ ಸಿದ್ದರಾಮಯ್ಯರನ್ನ ತಮ್ಮ ಎಕ್ಸ್ಕ್ಲೂಸಿವ್ ನಾಯಕ ಎಂದು ಒಪ್ಪಿಲ್ಲ. ಇದೇ ಕಾರಣಕ್ಕೆ ಆಗಾಗ ದಲಿತ ಮುಖ್ಯಮಂತ್ರಿ ವಿಚಾರ ಮುನ್ನಲೆಗೆ ಬರುತ್ತಲೇ ಇರುತ್ತದೆ. ಹೀಗೆ ದಲಿತ ಸಿಎಂ ವಿಚಾರ ಮುಂದೆ ಬಂದಾಗಲೆಲ್ಲಾ ಸಿದ್ದರಾಮಯ್ಯ ತಮ್ಮ ರಾಜಕೀಯ ಜಾಣ್ಮೆ ಬಳಸಿ ನಾನು ಸಹ ದಲಿತನೇ ಎನ್ನುತ್ತಲೇ ವಿಚಾರ ವಿವಾದವಾಗದಂತೆ ಎಚ್ಚರವಹಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗುತ್ತಲೇ ಸಿದ್ದರಾಮಯ್ಯ ನಾಯಕತ್ವದ ನೆರಳಲ್ಲಿ ರಾಜಕೀಯ ಆಶ್ರಯ ಪಡೆದಿದ್ದ ದಲಿತ ಮುಖಂಡೆರಲ್ಲಾ ಆಲದ ಮರವಾಗಿ ಬೆಳೆಯಲಾರಂಭಿಸಿರುವ ತಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ಆಶ್ರಯಕ್ಕೆ ಬಂದರೂ ಅಚ್ಚರಿಯೇನಿಲ್ಲ.
ಸಹಜವಾಗಿಯೇ ಎಐಸಿಸಿ ಅಧ್ಯಕ್ಷರಾಗಿ ಇನ್ನಷ್ಟು ಹೆಚ್ಚಿನ ಅವಕಾಶ ಹಾಗೂ ಅಧಿಕಾರ ಖರ್ಗೆ ಅವರಿಗೆ ಇರುತ್ತದೆ. ಇದು ಸಿದ್ದರಾಮಯ್ಯ ಅವರ ಅಹಿಂದದ ಬಲವನ್ನು ಕುಗ್ಗಿಸಿ ಮತ್ತೆ ದಲಿತ ರಾಜಕಾರಣಕ್ಕೆ ಬಲ ನೀಡಬಹುದು. ಇದು ಸಹಜವಾಗಿಯೇ ಬಹು ವರ್ಷಗಳಿಂದ ರಾಜ್ಯದ ಪರಮೋಚ್ಚ ರಾಜಕೀಯ ಅಧಿಕಾರ ಸ್ಥಾನದ ಮೇಲೆ ಕಣ್ಣಿಟ್ಟಿರುವ ದಲಿತ ಸಮುದಾಯದಲ್ಲೂ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಖಂಡಿತವಾಗಿಯೂ ಖರ್ಗೆ ಅವರ ಆಪ್ತ ವರ್ಗ ಈ ಸಂದೇಶವನ್ನು ತಮ್ಮ ಸಮುದಾಯಕ್ಕೆ ರವಾನಿಸಲಿದೆ. ಇದು ಸಿದ್ದರಾಮಯ್ಯ ಅವರ ರಾಜಕಾರಣದ ಮೇಲೂ ಪರಿಣಾಮ ಬೀರಲಿದೆ.
ಮುಂದಿನ ಮುಖ್ಯಮಂತ್ರಿ ರೇಸ್ಗೆ ಮಲ್ಲಿಕಾರ್ಜುನ ಖರ್ಗೆ ಸಹ ಎಂಟ್ರಿ ಕೊಡಬಹುದೇ ಎಂಬ ಪ್ರಶ್ನೆಗೆ ನೇರ ಉತ್ತರವಿಲ್ಲದಿದ್ದರೂ, ಎಐಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬುದನ್ನ ಅಧಿಕೃತವಾಗಿ ನಿರ್ಧರಿಸುವುದು ಮಲ್ಲಿಕಾರ್ಜುನ ಖರ್ಗೆ ಅವರೇ ಎಂಬುದು ಶತಃಸಿದ್ಧ. 50 ವರ್ಷದ ಸುದೀರ್ಘ ರಾಜಕಾರಣದ ಅನುಭವದೊಂದಿಗೆ ರಾಷ್ಟ್ರೀಯ ಕಾಂಗ್ರೆಸ್ ಗದ್ದುಗೆ ಎರುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇವಲ ಮುಖ್ಯಮಂತ್ರಿ ಸ್ಥಾನಕ್ಕೆ ಸೀಮಿತಗೊಳಿಸುವುದು ಅಷ್ಟು ಸೂಕ್ತವೇ ಎಂಬುದು ಸಹ ಉತ್ತಮ ಪ್ರಶ್ನೆಯೇ. ಹೀಗಾಗಿ ಯಾರೂ ಊಹಿಸಲಾಗದ ಈ ರಾಜಕಾರಣ ಎಂಬ ಗದ್ದುಗೆಯಾಟದಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಶೇಷ ಸಂದರ್ಭದಲ್ಲಿ ಈ ದೇಶದ ಚುಕ್ಕಾಣಿಯೂ ಹಿಡಿಯುವಂತಾದರೆ ನಾನೊಬ್ಬ ಕನ್ನಡಿಗನಾಗಿ ಸಹಜವಾಗಿ ಹೆಮ್ಮೆ ಪಡುತ್ತೇನೆ.
ಇದರ ಅರ್ಥ ಈ ಅಂಕಣದ ಕೊನೆಯಲ್ಲಿ ನಾನು ಖರ್ಗೆ ಪರ ಬ್ಯಾಟ್ ಬೀಸುತ್ತಿದ್ದೇನೆ ಎಂದಲ್ಲ. ಖರ್ಗೆ ಇನ್ನೂ ರಾಜಕಾರಣದ ಅಂಗಳದಲ್ಲಿ ನಾಟೌಟ್ ಎಂಬ ಸಂದೇಶ ನೀಡುತಿದ್ದೇನೆ ಅಷ್ಟೇ. ಆದರೆ ಖರ್ಗೆ ಅವರೇನೋ ನಾಟೌಟ್ ಆಗಿದ್ದಾರೆ ನಿಜ. ಆದರೆ ಪಕ್ಷ ಅವರನ್ನು ಪ್ರಮುಖ ಬ್ಯಾಟ್ಸಮನ್ ಆಗಿ ಉಪಯೋಗಿಸುತ್ತದೆಯೇ ಅಥವಾ ಕೇವಲ ನೈಟ್ ವಾಚ್ಮನ್ ಆಗಿ ಬಳಸುತ್ತದೆಯೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ರಾಜಕೀಯ ವಿಶ್ಲೇಷಣೆ: ಪ್ರಮೋದ್ ಶಾಸ್ತ್ರಿ, ಪೊಲಿಟಿಕಲ್ ಬ್ಯೂರೊ ಚೀಫ್, ಟಿವಿ9 ಕನ್ನಡ
Published On - 3:34 pm, Sun, 2 October 22