ಹತ್ತಾರು ದೇವರಿಗೆ ಹರಕೆ ಹೊತ್ತ ಬಳಿಕ ಹುಟ್ಟಿದ ಮಗಳ ಸಾವು: ಮದ್ವೆ ಮನೆಯಲ್ಲಿ ಆಗಿದ್ದೇನು?
ದಂಪತಿಗೆ ಅನೇಕ ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಹೆತ್ತವರು ಮಕ್ಕಳಿಗಾಗಿ ಹತ್ತಾರು ದೇವರಿಗೆ ಹರಕೆ ಹೊತ್ತಿದ್ದರಂತೆ. ಅನೇಕ ವರ್ಷಗಳ ನಂತರ ಹೆಣ್ಣು ಮಗು ಹುಟ್ಟಿತ್ತು. ಆದರೆ, ಮದುವೆ ಮನೆಯಲ್ಲಿ ಬಿದ್ದ ಸಾಂಬಾರು ಬಾಲಕಿ ಜೀವಕ್ಕೆ ಕುತ್ತು ತಂದಿದೆ. ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಹುಬ್ಬಳ್ಳಿ, ಜೂನ್ 20: ಹುಬ್ಬಳ್ಳಿ (Hubballi) ತಾಲೂಕಿನ ಚನ್ನಾಪುರ ಗ್ರಾಮದ ಎರಡುವರೆ ವರ್ಷದ ರುಕ್ಸಾನಾಬಾನು ಶೇಖಸನದಿ ಮೃತಪಟ್ಟಿದ್ದಾಳೆ. ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬರುವಾಗ ಮಾರ್ಗ ಮಧ್ಯದಲ್ಲಿ ರುಕ್ಸಾನಾಬಾನು ಕೊನೆಯುಸಿರೆಳದಿದ್ದಾಳೆ. ಬಾಲಕಿ ಸಾವಿಗೆ ಕಾರಣ ಮದುವೆ ಮನೆಯಲ್ಲಿ ಮೈಮೇಲೆ ಬಿದ್ದಿದ್ದ ಸುಡುವ ಸಾಂಬಾರು. ಐದು ದಿನಗಳ ಹಿಂದೆ ಹೆತ್ತವರು ಮಗಳನ್ನು ಕರೆದುಕೊಂಡು ಶಿಗ್ಗಾಂವ ತಾಲೂಕಿನ ಕುಣ್ಣುರು ಗ್ರಾಮದಲ್ಲಿ ಸಂಬಂಧಿಯ ಮದುವೆಗೆ ಹೋಗಿದ್ದರು. ಮದುವೆ ಮನೆಯಲ್ಲಿ ಪಾತ್ರೆಯಲ್ಲಿದ್ದ ಸುಡುವ ಸಾಂಬಾರು ಬಾಲಕಿ ಮೈಮೇಲೆ ಬಿದ್ದಿದೆ. ಕೂಡಲೇ ಬಾಲಕಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೈಮೆಲೆ ಅನೇಕ ಕಡೆ ಸುಟ್ಟ ಗಾಯಗಳಾಗಿದ್ದರಿಂದ ಬಾಲಕಿ ನರಳಾಡಿದ್ದಾಳೆ. ಆದರೆ, ಸ್ವಲ್ಪ ಗುಣಮುಖರಾಗಿದ್ದರಿಂದ ಮೊನ್ನೆ ಬಾಲಕಿಯನ್ನು ಡಿಸ್ಜಾರ್ಜ್ ಮಾಡಲಾಗಿತ್ತು. ಆದರೆ, ಶುಕ್ರವಾರ (ಜೂ.20) ಮುಂಜಾನೆ ಮತ್ತೆ ಮೈಮೇಲೆ ಗುಳ್ಳೆಗಳಾಗಿದ್ದರಿಂದ ಬಾಲಕಿಯನ್ನು ಹೆತ್ತವರು ಮತ್ತೆ ಕಿಮ್ಸ್ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಕಿಮ್ಸ್ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬಾಲಕಿ ಬಾರದ ಲೋಕಕ್ಕೆ ಹೋಗಿದ್ದಾಳೆ.
ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಹೆತ್ತವರಿಗೆ ರುಕ್ಸಾನಾಬಾನು ಒಬ್ಪಳೇ ಮಗಳು. ರುಕ್ಸಾನಾಬಾನು ಹೆತ್ತವರಿಗೆ ಮದುವೆಯಾಗಿ ಅನೇಕ ವರ್ಷವಾದರೂ ಮಕ್ಕಳಾಗಿರಲಿಲ್ಲವಂತೆ. ಹೀಗಾಗಿ, ಹೆತ್ತವರು ಹತ್ತಾರು ದೇವರಿಗೆ ಮಕ್ಕಳಿಗಾಗಿ ಹರಕೆ ಹೊತ್ತಿದ್ದರಂತೆ. ದೇವರ ಆಶಿರ್ವಾದಿಂದ ಎರಡುವರೆ ವರ್ಷದ ಹಿಂದೆ ರುಕ್ಸಾನಾಬಾನು ಜನಿಸಿದ್ದಳು.
ಇದನ್ನೂ ಓದಿ: ಬೆಂಗಳೂರು ಟು ಗೋವಾ: ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ
ಇರುವ ಒಬ್ಪಳೇ ಮಗಳನ್ನು ಹೂವಿನಂತೆ ನೋಡಿಕೊಂಡಿದ್ದರಂತೆ. ಆದರೆ, ಮದುವೆ ಮನೆಯಲ್ಲಿ ಊಟಕ್ಕೆ ನೀಡಲು ಬಿಸಿ ಮಾಡಿಟ್ಟ ಪಾತ್ರೆ ಬಳಿ ಆಟವಾಡುತ್ತಾ ಹೋಗಿದ್ದ ರುಕ್ಸಾನಾಬಾನು ಪಾತ್ರೆ ಮುಟ್ಟಿದ್ದಾಳೆ. ಒಲೆ ಮೇಲಿದ್ದ ಪಾತ್ರೆ ಜಾರಿ ರುಕ್ಸಾನಾಬಾನು ಮೈಮೆಲೆ ಬಿದ್ದಿದೆ. ಸುಡುವ ಸಾರು ಬಿದ್ದಿದ್ದರಿಂದ ಬಾಲಕಿ ಬಾರದ ಲೋಕಕ್ಕೆ ಹೋಗಿದ್ದಾಳೆ.
ಇದ್ದೊಬ್ಬ ಮಗಳನ್ನು ಕಳೆದುಕೊಂಡ ಹೆತ್ತವರು ಕಂಗಾಲಾಗಿದ್ದಾರೆ. ಹೆತ್ತವರು ಸ್ವಲ್ಪ ಯಾಮಾರಿದರೂ ಎಂತಹ ದುರ್ಘಟನೆ ಆಗುತ್ತದೆ ಅನ್ನೋದಕ್ಕೆ ಇದು ಉದಾಹರಣೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Fri, 20 June 25