ಮನೆ ಹಂಚಿಕೆಗೆ ಲಂಚ ಪ್ರಕರಣ: ಆಡಿಯೋ ನಿಜ, ಲೀಕ್ ಮಾಡಿದ್ದು ಅನೈತಿಕವೆಂದ ಸರ್ಫರಾಜ್ ಖಾನ್
ವಸತಿ ಯೋಜನೆಯಲ್ಲಿ ಲಂಚದ ಆರೋಪದ ಕುರಿತು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಮತ್ತು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ನಡುವಿನ ಆಡಿಯೋ ಸೋರಿಕೆಯಾಗಿರುವುದು ಕರ್ನಾಟಕ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ಸರ್ಫರಾಜ್ ಖಾನ್ ಈ ಆಡಿಯೋ ನಿಜ ಎಂದು ಒಪ್ಪಿಕೊಂಡಿದ್ದು, ಮೊಬೈಲ್ ಸಂಭಾಷಣೆಯನ್ನು ಸೋರಿಕೆ ಮಾಡಿದ್ದು ಅನೈತಿಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜೂನ್ 20: ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಲು ಹಣ ಪಡೆಯಲಾಗಿದೆ ಎಂಬ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿಆರ್ ಪಾಟೀಲ್ (BR Patil) ಜತೆ ಮಾತನಾಡಿರುವ ಆಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಆ ಕುರಿತು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಆಡಿಯೋ ಬಹಿರಂಗವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಪ್ರಕರಣದ ಬಗ್ಗೆ ಸಚಿವ ಜಮೀರ್ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.
ಈ ವಿಚಾರವನ್ನು ಸಚಿವರ ಗಮನಕ್ಕೆ ತಂದಿದ್ದೇನೆ. ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರುತ್ತೇನೆ. ದೂರವಾಣಿಯಲ್ಲಿ ಮಾತನಾಡಿದ್ದನ್ನು ಸೋರಿಕೆ ಮಾಡಿದ್ದು ಅನೈತಿಕವಾದದ್ದು. ಜನಪ್ರತಿನಿಧಿ ಎಂಬ ಕಾರಣಕ್ಕೆ ಮಾತನಾಡಿದ್ದೇನೆ. ಅವರೇ ಕರೆ ಮಾಡಿ ಆಡಿಯೋ ರೆಕಾರ್ಡ್ ಮಾಡಿ ಲೀಕ್ ಮಾಡಿದ್ದಾರೆ ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ. ಆ ಮೂಲಕ, ವೈರಲ್ ಆಗಿರುವ ಆಡಿಯೋ ಅಸಲಿ ಎಂದು ಅವರು ಒಪ್ಪಿಕೊಂಡಂತಾಗಿದೆ.
ಆಡಿಯೋದಲ್ಲೂ ಸ್ಪಷ್ಟವಾಗಿ ಹೇಳಿದ್ದೇನೆ . ಹಣ ತೆಗೆದುಕೊಂಡು ಮನೆ ಹಂಚಿಕೆ ಮಾಡಿದ್ದರೆ ತಿಳಿಸಿ, ಅಂಥವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ನಾನು ಹೇಳಿದ್ದೇನೆ. ನನ್ನದು ಐಫೋನ್, ಇದರಲ್ಲಿ ರೆಕಾರ್ಡಿಂಗ್ ಮಾಡಿಕೊಳ್ಳಲು ಆಗುವುದಿಲ್ಲ. ಅವರೇ ರೆಕಾರ್ಡ್ ಮಾಡಿ ಲೀಕ್ ಮಾಡಿರುವುದು ಸಂಪೂರ್ಣ ಅನೈತಿಕ. ಸಚಿವ ಜಮೀರ್ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸರ್ಫರಾಜ್ ಖಾನ್ ತಿಳಿಸಿದ್ದಾರೆ.
ಬಿಆರ್ ಪಾಟೀಲ್ ಮತ್ತು ಸರ್ಫರಾಜ್ ಖಾನ್ ನಡುವೆ ಮೊಬೈಲ್ ಫೋನ್ ಮೂಲಕ ನಡೆದ ಮಾತುಕತೆಯಲ್ಲಿ ಲಂಚದ ವಿಚಾರ ಪ್ರಸ್ತಾಪವಾಗಿತ್ತು. ಹಣ ನೀಡಿದವರಿಗಷ್ಟೇ ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಬಿಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆಳಂದ ಮತಕ್ಷೇತ್ರದ ಹಲವೆಡೆ ಲಂಚ ಪಡೆದು ಮನೆ ಹಂಚಿಕೆ ಮಾಡಲಾಗಿದೆ. ಅಫಜಲಪುರ ಕ್ಷೇತ್ರದಲ್ಲಿಯೂ ಹಣ ಪಡೆದೇ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿಆರ್ ಪಾಟೀಲ್ ಆರೋಪ ಮಾಡಿದ್ದರು.
ಇದನ್ನೂ ಓದಿ: ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ: ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ವೈರಲ್ ಆಡಿಯೋ
ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಇದೀಗ ವೈರಲ್ ಆಗಿರುವ ಆಡಿಯೊ ನಿಜ ಎಂದು ಸರ್ಫರಾಜ್ ಖಾನ್ ಒಪ್ಪಿಕೊಂಡಂತಾಗಿದೆ. ಈ ವಿಚಾರವಾಗಿ ಸಿಎಂ ಜತೆ ಮಾತುಕತೆ ನಡೆಸುವುದಾಗಿಯೂ ಬಿಆರ್ ಪಾಟೀಲ್ ಈಗಾಗಲೇ ಹೇಳಿದ್ದು ಕುತೂಹಲ ಮೂಡಿಸಿದೆ.