ಚಾಮರಾಜನಗರದಲ್ಲಿ ವ್ಯಾಘ್ರ ಅಟ್ಟಹಾಸ: ಒಂದೇ ತಿಂಗಳಲ್ಲಿ 2 ಜೀವ ಬಲಿ ಪಡೆದ ನರಭಕ್ಷಕ ಹುಲಿ
ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ಮಧ್ಯೆ ಸಂಘರ್ಷ ನಿಲ್ಲುತ್ತಿಲ್ಲ. ಚಾಮರಾಜನಗರದ ಹುಲಿ ಸಂರಕ್ಷಿತ ಪ್ರದೇಶದಲ್ಲಂತೂ ಇದು ತುಸು ಹೆಚ್ಚಾಗಿ ಕಂಡು ಬರುತ್ತಿದೆ. ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರನ್ನು ಹುಲಿ ತಿಂದು ಹಾಕಿದೆ. ಗುಂಡ್ಲುಪೇಟೆ ದೇಶಿಪುರ ಗ್ರಾಮದಲ್ಲಿ ದನಗಳು ಹಾಗೂ ಕುರಿಗಳನ್ನು ಮೇಯಸುತ್ತಿದ್ದ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದಾರೆ.

ಚಾಮರಾಜನಗರ, ಜೂನ್ 20: ಚಾಮರಾಜನಗರದ ಗುಂಡ್ಲುಪೇಟೆಯ ದೇಶಿಪುರ (Deshipura) ಎಂಬ ಕಾಡಂಚಿನ ಗ್ರಾಮದಲ್ಲಿ ಹುಲಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ದನ ಮೇಯಿಸಲು ತೆರಳಿದ್ದ ಮಧ್ಯವಯಸ್ಕ ಪುಟ್ಟಮ್ಮ ವ್ಯಾಘ್ರ ದಾಳಿಗೆ (Tiger Attack) ಆಹಾರವಾಗಿದ್ದಾರೆ. ಗುರುವಾರ ಸಂಜೆ ದನಕರುಗಳು ಹಾಗೂ ಕುರಿಗಳ ಹಿಂಡನ್ನು ಮೇಯಿಸುತ್ತಿರುವಾಗಲೇ ಹಠಾತ್ ಆಗಿ ಹುಲಿ ದಾಳಿ ಮಾಡಿದೆ. ಪುಟ್ಟಮ್ಮನನ್ನು ಕೊಂದ ಹುಲಿ, ನಂತರ ಸ್ವಲ್ಪ ದೂರ ಎಳೆದೊಯ್ದಿತ್ತು. ಹೊಟ್ಟೆ ಬಗೆದು ತಿನ್ನುತ್ತಿರುವಾಗಲೇ, ಜನ ನೋಡಿ ಬೆಚ್ಚಿದ್ದಿದ್ದಾರೆ. ನಾಲ್ಕೈದು ಮಂದಿ ಬೊಬ್ಬೆ ಹೊಡೆದಿದ್ದಾರೆ, ಚೀರಾಡಿದ್ದಾರೆ. ಆಗ ಹುಲಿ ಪುಟ್ಟಮ್ಮ ಮೃತದೇಹ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದೆ.
ಈ ಘಟನೆ ನಡೆದು ಎರಡ್ಮೂರು ಗಂಟೆ ಕಳೆದರೂ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್‌ನ ಯಾವೊಬ್ಬ ಅಧಿಕಾರಿಯೂ ಸ್ಥಳದತ್ತ ಸುಳಿದಿಲ್ಲ ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.
4 ದಿನದ ಹಿಂದಷ್ಟೇ ಮಹಿಳೆ ಕೊಂದು ಹಾಕಿದ್ದ ಹುಲಿ
ಅತ್ತ ಯಳಂದೂರಿನ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ರಾಮಯ್ಯನಪೋಡು ಬಳಿ 4 ದಿನದ ಹಿಂದೆ ರಂಗಮ್ಮ ಎಂಬ ವೃದ್ಧೆಯನ್ನ ಹುಲಿ ಕೊಂದಿತ್ತು. ಆ ಘಟನೆಯ ಕಹಿ ನೆನೆಪು ಮಾಸುವ ಮುನ್ನವೇ ಈಗ ಪುಟ್ಟಮ್ಮ ಹುಲಿ ದಾಳಿಗೆ ಸಾವನ್ನಪ್ಪಿದ್ದಾರೆ.
ಮೂತ್ರ ವಿಸರ್ಜನೆ ಮಾಡುತ್ತಿದ್ದಾಗಲೇ ವ್ಯಕ್ತಿ ಮೇಲೆ ಹುಲಿ ದಾಳಿ
ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿದ ಘಟನೆ ಚಾಮರಾಜನಗರ ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ರಾಮಯ್ಯನ ಪೋಡಿ ಎಂಬಲ್ಲಿ ಜೂನ್ 10 ರಂದು ನಡೆದಿತ್ತು. ಗಾಯಗೊಂಡಿದ್ದ ರವಿ ಅವರನ್ನು ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಚಾಮರಾಜನಗರ: ಮೂತ್ರ ವಿಸರ್ಜನೆಗೆಂದು ಹೊರ ಬಂದ ವ್ಯಕ್ತಿ ಮೇಲೆ ಹುಲಿ ದಾಳಿ
ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮತ್ತೊಂದೆಡೆ, ಕ್ರಂಚ್ ಹಾಗೂ ಸೋಲಾರ್ ಫೆನ್ಸಿಂಗ್ ಅಳವಡಿಸಲು ಬಂಡೀಪುರ ಸಿಎಫ್ ಪ್ರಭಾಕರನ್ ಅವರಿಗೆ ಕಾಡಂಚಿನ ಜನ ಸಾಕಷ್ಟು ಮನವಿ ಮಾಡಿದಾರೆ. ಆದರೆ, ಪ್ರಭಾಕರನ್ ಈ ಬಗ್ಗೆ ನಿರ್ಲಕ್ಷ್ಯ ತೋರಿದಾರೆ ಎಂದು ಕಾಡಂಚಿನ ಜನ ಕಿಡಿಕಾರುತ್ತಿದ್ದಾರೆ.







