ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ, ಶಾಲೆ ಅನುದಾನ ಬಂದ್
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಲು ಮುಂದಾಯ್ತಾ ಶಾಲಾ ಶಿಕ್ಷಣ ಇಲಾಖೆ ಎಂಬ ಪ್ರಶ್ನೆ ಇದಿಗ ಮೂಡಿದೆ. ವರ್ಷದಿಂದ ವರ್ಷಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಕುಸಿತವಾಗುತ್ತಿದೆ. ಹೀಗಾಗಿ ಸಿಎಂ ಶಿಕ್ಷಣ ಇಲಾಖೆಗೆ ಗುರಿ ನೀಡಿದ್ದು , ಇಲಾಖೆ ಮಾತ್ರ ಎಸ್ಎಸ್ಎಲ್ಸಿ ಫಲಿತಾಂಶ ಕುಸಿತಕ್ಕೆ ಶಿಕ್ಷಕರಿಗೆ ಬರೆ ಹಾಕಲು ಮುಂದಾಗಿದೆ.

ಬೆಂಗಳೂರು, ಜೂನ್ 20: ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ (SSLC Result) ಕುಸಿತಕ್ಕೆ ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪ್ರಸಕ್ತ ವರ್ಷ ಎಸ್ಎಸ್ಎಲ್ಸಿ ಫಲಿತಾಂಶ ಶೇ 75 ಸಾಧಿಸುವ ಗುರಿ ನೀಡಿದ್ದಾರೆ. ಈ ಬೆನ್ನಲ್ಲೇ ಶಿಕ್ಷಣ ಇಲಾಖೆಯು (Education Department) ಶಿಕ್ಷಕರ ಮೇಲೆ ಗದಾ ಪ್ರಹಾರಕ್ಕೆ ಮುಂದಾಗಿದೆ. ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಅನುದಾನಿತ ಶಾಲೆಗಳಿಗೆ ನೋಟಿಸ್ ನೀಡಿ ಕಾರಣ ಕೇಳಲು ಮುಂದಾಗಿದೆ. ವಿಷಯವಾರು ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಿಕ್ಷಕರಿಗೂ ನೋಟಿಸ್ ನೀಡಿ ಕ್ರಮ ಜರುಗಿಸಲು ಮುಂದಾಗಿದೆ. ಯಾಕೆ ನಿಮ್ಮ ವಿಷಯದಲ್ಲಿ ಫಲಿತಾಂಶ ಕಡಿಮೆ ಬಂದಿದೆ? ಏನು ಸಮಸ್ಯೆ? ಉತ್ತರಿಸಿ ಎಂದು ಶಿಕ್ಷರಿಗೂ ನೋಟಿಸ್ ನೀಡಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಶಿಕ್ಷಣ ಇಲಾಖೆಯ ನಡೆಗೆ ಕೆಲವು ಶಿಕ್ಷಕರಿಂದ ವಿರೋಧವೂ ವ್ಯಕ್ತವಾಗಿದೆ.
ಶಾಲಾ ಮುಖ್ಯ ಶಿಕ್ಷಕರಿಗೂ ನೋಟಿಸ್
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಎಲ್ಲಾ ಸೌಲಭ್ಯ ನೀಡಿದರೂ ಫಲಿತಾಂಶ ಕಡಿಮೆ ಬಂದಿದೆ. ನಿಮ್ಮ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ನೀವು ಕ್ರಮ ತೆಗೆದುಕೊಂಡಿಲ್ಲ. ಇದು ಕರ್ತವ್ಯ ಲೋಪ ಅಲ್ಲವೇ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ನೋಟಿಸ್‌ಗೆ ಉತ್ತರ ಕೊಟ್ಟ ಬಳಿಕ ಅಂತಹ ಶಾಲಾ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಖಾಸಗಿ ಅನುದಾನಿತ ಶಾಲೆಗಳ ಮೇಲೆ ಕಠಿಣ ಕ್ರಮ
ಖಾಸಗಿ ಅನುದಾನಿತ ಶಾಲೆಗಳ ಮೇಲೆ ಕಠಿಣ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲಾ ಶಿಕ್ಷಕರು, ಸಂಸ್ಥೆಗಳ ಅನುದಾನವನ್ನೇ ಕಡಿತ ಮಾಡುವ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿದೆ. ವಿಷಯವಾರು ಫಲಿತಾಂಶ ನೋಡಿ ಶಿಕ್ಷಕರ ವಾರ್ಷಿಕ ಬಡ್ತಿ, ವೇತನಾನುದಾನ ತಡೆಗೆ ಸರ್ಕಾರ ನಿರ್ಧಾರ ಮಾಡಿದೆ. ಬಿಇಓಗಳು ಎಲ್ಲವನ್ನೂ ಪರಿಶೀಲಿಸಿ ಆಯುಕ್ತರಿಗೆ ವರದಿ ನೀಡಬೇಕು ಎಂದು ಸೂಚಿಸಲಾಗಿರುವುದು ಶಿಕ್ಷಕರ ಬೇಸರಕ್ಕೆ ಕಾರವಾಗಿದೆ
ಶಾಲೆಗಳ ಮೇಲೆ ಏನು ಕ್ರಮ?
- ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ ಶಾಲೆಗಳ ವಿಷಯವಾರು ಶಿಕ್ಷಕರ ವಾರ್ಷಿಕ ಬಡ್ತಿ ತಡೆಹಿಡಿಯುವುದು.
- ವಿಷಯವಾರು ನಿರಂತರವಾಗಿ 3 ವರ್ಷ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿದ್ದರೆ ಅಂತ ಶಿಕ್ಷಕರ ವೇತನಾನುದಾನ ತಡೆಹಿಡಿಯುವುದು.
- ಸತತ 5 ವರ್ಷಗಳಲ್ಲಿ ಶೇ 50 ಫಲಿತಾಂಶ ಬಾರದಿದ್ದರೆ ಆ ಶಾಲೆಯ ಅನುದಾನವೇ ತಡೆಹಿಡಿಯುವುದು.
ಇದನ್ನೂ ಓದಿ: Karnataka SSLC Result 2023 Highlights: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; 4 ವಿದ್ಯಾರ್ಥಿಗಳು ರಾಜ್ಯದ ಟಾಪರ್ಗಳು
ಒಟ್ಟಿನಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಗತಿಗೆ ಶಿಕ್ಷಕರನ್ನು ಗುರಿಯಾಗಿಸಿ ಶಿಕ್ಷಣ ಇಲಾಖೆ ಚಾಟಿ ಬೀಸಿರುವುದು ಈಗ ಶಿಕ್ಷಕರ ವಲಯದಲ್ಲಿ ವಿರೋಧಕ್ಕೆ ಕಾರಣವಾಗಿದ್ದು, ಶಿಕ್ಷಣ ಇಲಾಖೆ ಆಯುಕ್ತರು ಮಾತ್ರ ಇದಕ್ಕೆ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ.







