ಅಲ್ಪಸಂಖ್ಯಾತರಿಗೆ 15% ಮೀಸಲಾತಿ: ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಸ್ಪಷ್ಟನೆ ನೀಡಿದ ಜಮೀರ್
ಕರ್ನಾಟಕ ಸರ್ಕಾರವು ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 15ರಷ್ಟು ಮೀಸಲಾತಿ ಘೋಷಿಸಿದೆ. ಇದು 2019ರ ಮೈತ್ರಿ ಸರ್ಕಾರದ ಸಂಪುಟ ಉಪಸಮಿತಿಯ ಶಿಫಾರಸು ಮತ್ತು ಸಾಚಾರ್ ಸಮಿತಿಯ ವರದಿಯನ್ನು ಆಧರಿಸಿದೆ.ಮೀಸಲಾತಿ ಹೆಚ್ಚಳವು ಅಲ್ಪಸಂಖ್ಯಾತರ ವಸತಿ ಅಗತ್ಯವನ್ನು ಪೂರೈಸುವ ಉದ್ದೇಶ ಹೊಂದಿದೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.

ಬೆಂಗಳೂರು, ಜೂನ್ 20: ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ಮೀಸಲಾತಿ (15% reservation for minorities) ನೀಡುವ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಸತಿ ಇಲಾಖೆ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡುವ ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಮೈತ್ರಿ ಸರ್ಕಾರದಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ 15 ರಷ್ಟು ಮೀಸಲಾತಿ ಬಗ್ಗೆ ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ.
ಸಾಚಾರ್ ಸಮಿತಿಯ ವರದಿ ಪ್ರಕಾರ ಕೇಂದ್ರದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ರಷ್ಟು ಮೀಸಲಾತಿ ನೀಡಬೇಕೆಂದು ಇದೆ. ಅದೇ ರೀತಿ ರಾಜ್ಯದಲ್ಲೂ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ ಕೇಂದ್ರದ ಮಾದರಿಯನ್ನೇ ರಾಜ್ಯದಲ್ಲೂ ಅನುಸರಿಸಲಾಗಿದೆ. ಹೆಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ ಸಮಯದಲ್ಲಿ ರಚಿಸಿದ್ದ ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು. ಇದೀಗ ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ ಎಂದರು.
ಈಗಾಗಲೇ ಇದ್ದ ಶೇ 10 ರಷ್ಟು ಮೀಸಲಾತಿ ಪ್ರಮಾಣ ಶೇ.15ಕ್ಕೆ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ವಸತಿ ರಹಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಇತ್ತು. ಶೇ.15ರಷ್ಟು ಮೀಸಲಾತಿ ಜಾರಿಗೊಳಿಸಬೇಕೆಂದು 2021ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಸಹ ತಿಳಿಸಿತ್ತು. ವಾಸ್ತವಾಂಶ ತಿಳಿಯದೆ ಪ್ರತಿಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ನಿವೇಶನ ಕಿತ್ತುಕೊಂಡು ಮುಸ್ಲಿಮರಿಗೆ ನೀಡಲಾಗುತ್ತೆ ಎಂಬ ಬಿಜೆಪಿ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ನಾವು ಯಾರ ನಿವೇಶನಗಳನ್ನು ಕಿತ್ತುಕೊಂಡು ಕೊಡುವುದಿಲ್ಲ. ಹಿಂದೆ ಸಾಚಾರ್ ಆಯೋಗದ ವರದಿಯಲ್ಲಿ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಗ್ರಾಮೀಣ ಭಾಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಬೇಕೆಂದು ಇತ್ತು ಎಂದು ಹೇಳಿದರು.
“ನಾವು ಅಡಿಪಾಯ ಹಾಕದೆ ವಸತಿ ಹಂಚಿಕೆ ಮಾಡಲು ಆಗುವುದಿಲ್ಲ. ಇದರ ಬಳಕೆ ಆಗಬೇಕಾಗಿದ್ದರಿಂದ ಇದನ್ನು ನಗರ ಪ್ರದೇಶಕ್ಕೂ ವಿಸ್ತರಣೆ ಮಾಡಲಾಗಿದೆ. ಈ ಎಲ್ಲದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಪಾಪ ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಏನು ಮಾಡಿದ್ದಾರೆಂದು ಅಧಿವೇಶನದಲ್ಲಿ ಮಾತಾಡಲಿ ಎಂದರು.
ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ ಶೇ 15 ರಷ್ಟು ಮೀಸಲಾತಿ ನೀಡುವ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಿದ್ದೇವೆ. ಮೀಸಲಾತಿ ಹೆಚ್ಚಳ ಬಗ್ಗೆ ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದ್ದೇವೆ. ಬಿಜೆಪಿ ನಾಯಕರು ಮೊಸರಿನಲ್ಲಿ ಕಲ್ಲು ಹುಡುಕುತ್ತಾರೆ. ಬಿಜೆಪಿಯವರಿಗೆ ರಾಜಕಾರಣ ಮಾಡಲು ಬೇರೆ ವಿಚಾರ ಉಳಿದಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಗುತ್ತಿಗೆ ಬೆನ್ನಲ್ಲೇ ಅಲ್ಪಸಂಖ್ಯಾತರಿಗೆ ಮತ್ತೊಂದು ಯೋಜನೆಯಲ್ಲಿ ಮೀಸಲಾತಿ ಹೆಚ್ಚಳ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಮೊದಲು ಗ್ಯಾರಂಟಿ ಯೋಜನೆ ಯಶಸ್ವಿ ಆಗುವುದಿಲ್ಲ ಎಂದರು. 136 ಸೀಟು ಗೆದ್ದರೂ 6 ತಿಂಗಳು ಸರ್ಕಾರ ಉಳಿಯಲ್ಲ ಎಂದರು. ಜನರ ಭಾವನೆಗಳ ಜೊತೆ ಬಿಜೆಪಿ ಆಟವಾಡುತ್ತದೆ. ಜನರ ದಿಕ್ಕು ತಪ್ಪಿಸಲು ಬಿಜೆಪಿಯವರು ಹುಚ್ಚಾಟ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ