ಗುತ್ತಿಗೆ ಬೆನ್ನಲ್ಲೇ ಅಲ್ಪಸಂಖ್ಯಾತರಿಗೆ ಮತ್ತೊಂದು ಯೋಜನೆಯಲ್ಲಿ ಮೀಸಲಾತಿ ಹೆಚ್ಚಳ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಸರ್ಕಾರಿ ಯೋಜನೆಗಳ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4 ರಷ್ಟು ಮೀಸಲಾತಿ ನೀಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಇಂದು (ಜೂನ್ 19) ನಡೆದ ಸಚಿವ ಸಂಪುಟ ಸಭೆಯಲ್ಲಿ, ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಬೆಂಗಳೂರು, (ಜೂನ್ 19): ಸರ್ಕಾರಿ ಯೋಜನೆಗಳ (Government scheme) ಗುತ್ತಿಗೆಯಲ್ಲಿ ಮೀಸಲಾತಿ (Reservation) ನೀಡಿದ ಬಳಿಕ ಈಗ ವಸತಿ ಯೋಜನೆಯಲ್ಲೂ ಅಲ್ಪಸಂಖ್ಯಾತರ ಮೀಸಲಾತಿ (minorities reservation) ಹೆಚ್ಚಳಕ್ಕೆ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ. ಇಂದು (ಜೂನ್ 19) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ಮಹತ್ವದ ತೀರ್ಮಾನ ಮಾಡಿದೆ. ವಸತಿಯೋಜನೆಯಡಿ ಮುಸ್ಲಿಂ ಸೇರಿದಂತೆ ಇತರೆ ಅಲ್ಪ ಸಂಖ್ಯಾತರಿಗೆ ಮೀಸಲಾತಿಯನ್ನು ಶೇ.10ರಿಂದ ಶೇ.15ಕ್ಕೆ ಏರಿಸಲು ಸಚಿವ ಸಂಪುಟ ಅಸ್ತು ಎಂದಿದೆ.
ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿಯನ್ನು ಪ್ರಸ್ತುತ ಶೇ.10 ರಿಂದ ಶೇ.15 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಸಿಎಂ ಸಿದ್ದರಾಮಯ್ಯನವರ ಮುಂದೆ ಇಟ್ಟಿದ್ದರು. ಇದೀಗ ಈ ಪ್ರಸ್ತಾವನೆಯನ್ನು ಇಂದಿನ ಕರ್ನಾಟಕ ಸಚಿವ ಸಂಪುಟ ಅಂಗೀಕರಿಸಿದೆ. ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಾರಿಗೊಳಿಸುವ ಎಲ್ಲಾ ವಸತಿ ಯೋಜನೆಗಳಿಗೆ ಅನ್ವಯಿಸುತ್ತದೆ. ರಾಜ್ಯದಲ್ಲಿ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಯಲ್ಲಿ ಮೀಸಲಾತಿ ಸೌಲಭ್ಯ ಸಿಗಲಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮುಹೂರ್ತ ನಿಗದಿ, ಅಸ್ತ್ರಗಳೊಂದಿಗೆ ವಿಪಕ್ಷ ಸಜ್ಜು
ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಯಡಿ ನಿಗದಿಪಡಿಸುವ ಗುರಿಯಲ್ಲಿ ಅಲ್ಪಸಂಖ್ಯಾತರಿಗೆ 10% ಮೀಸಲಾತಿ ನಿಗದಿಯಾಗಿದೆ. ಈ ಮೀಸಲಾತಿಯನ್ನು ಇದೀಗ 15% ಏರಿಕೆ ಮಾಡಿ ಕ್ಯಾಬಿನೆಟ್ ಅನುಮೋದನೆ ಸಹ ನೀಡಿದೆ.
ಸಚಿವ ಸಂಪುಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಾನೂನು ಸಚಿವ ಹೆಚ್ ಕೆ ಪಾಟೀಲ್, ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆ ಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದ್ದು, ಶೇಕಡಾ 10ರಿಂದ ಶೇ.15ಕ್ಕೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಮರಿಗೆ ಮಾತ್ರವಲ್ಲ ಅಲ್ಪಸಂಖ್ಯಾತರಿಗೂ ಅನ್ವಯ
ಸಾಚಾರ್ ಕಮಿಟಿ ವರದಿಯನ್ನೂ ಕೂಡ ಈಗ ಕೇಂದ್ರ ಪರಿಗಣಿಸುತ್ತಿದೆ. ಕೇಂದ್ರದ ಸೂಚನೆಗಳನ್ನು ಗಮನಿಸಿ ಸಾಮಾಜಿಕ ನ್ಯಾಯದ ಪಾಲನೆ ಮಾಡುತ್ತಿದ್ದೇವೆ. ನಿಯಮಗಳಿಗೆ ಕ್ಯಾಬಿನೆಟ್ ಅನುಮೋದನೆ ಸಾಕು. ಇದು ಎಲ್ಲ ಅಲ್ಪಸಂಖ್ಯಾತರಿಗೂ ಅನ್ವಯವಾಗುತ್ತದೆ. ಮುಸ್ಲಿಂ, ಜೈನರು, ಕ್ರಿಶ್ಚಿಯನ್ ಎಲ್ಲರೂ ಕೂಡ ಇದರಲ್ಲಿ ಒಳಗೊಳ್ಳುತ್ತಾರೆ. ಇದಕ್ಕೆ ಬೇಕಾದ ಹಲವು ಅಧ್ಯಯನ ವರದಿಗಳೂ ಕೂಡ ಇವೆ. ಬಡವರಿಗೆ ಮನೆ ಮಾಡಿಕೊಡುವುದರಲ್ಲಿ ರಾಜಕೀಯ ವಾಸನೆ ಹುಡುಕುವವರಿಗೆ ನಾವು ಉತ್ತರ ಕೊಡಲ್ಲ. ವಸತಿ ಹೀನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಎಂದು ಹೇಳಿದರು.
ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗುತ್ತಿದೆ
ಇನ್ನು ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನಗರ ಪ್ರದೇಶದಲ್ಲಿ ಬಹಳಷ್ಟು ಜನರು ಅಲ್ಪಸಂಖ್ಯಾತರಿದ್ದಾರೆ. ಅಲ್ಲಿ ಅನೇಕ ಕಡೆಗಳಲ್ಲಿ ಮನೆಗಳು ಖಾಲಿ ಇವೆ. ಎಷ್ಟೋ ಕಡೆ ಕಟ್ಟಿರೋ ಬಿಲ್ಡಿಂಗ್ ಖಾಲಿ ಇವೆ. ಅಲ್ಪಸಂಖ್ಯಾತರ ಜನಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬೇಕು. ಹೀಗಾಗಿ ಶೇಕಡಾ 15 ಪರ್ಸೆಂಟ್ ಏರಿಕೆ ಮಾಡಲಾಗುತ್ತಿದೆ. ನಾವು ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ ಎಂದು ಸಮಜಾಯಿಷಿ ನೀಡಿದರು.
Published On - 3:56 pm, Thu, 19 June 25




