ಕೆಲವು ರೌಡಿಗಳು ಪೊಲೀಸರಿಗೆ ಧಮಕಿ ಹಾಕುವುದನ್ನು ನೋಡಿದ್ದೇನೆ; ಛಲವಾದಿ ನಾರಾಯಣಸ್ವಾಮಿ ಹೇಳಿದ್ದು ಯಾರಿಗೆ?

|

Updated on: May 25, 2023 | 3:39 PM

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಬಿಜೆಪಿ (BJP) ನಾಯಕರನ್ನು ಗುರಿಯಾಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ದೂರಿದ್ದಾರೆ.

ಕೆಲವು ರೌಡಿಗಳು ಪೊಲೀಸರಿಗೆ ಧಮಕಿ ಹಾಕುವುದನ್ನು ನೋಡಿದ್ದೇನೆ; ಛಲವಾದಿ ನಾರಾಯಣಸ್ವಾಮಿ ಹೇಳಿದ್ದು ಯಾರಿಗೆ?
ಛಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಬಿಜೆಪಿ (BJP) ನಾಯಕರನ್ನು ಗುರಿಯಾಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ದೂರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್, ಹರೀಶ್ ಪೂಂಜ ಮೇಲೆ ಹಿಂದಿನ ವಿಚಾರಕ್ಕೆ ಈಗ ಎಫ್​​ಐಆರ್ ಹಾಕಿದ್ದಾರೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಾ? ಕಾರ್ಯಕರ್ತರನ್ನು, ಮುಖಂಡರನ್ನು ಧಮಕಿ ಹಾಕಿ ಬಾಯಿ ಮುಚ್ಚಿಸ್ತೀರಾ? ಇಷ್ಟಕ್ಕೇ ಹೆದರಿಸಲು ಸಾಧ್ಯವಾ? ಕೆಲವು ರೌಡಿಗಳು ಪೊಲೀಸರಿಗೆ ಧಮಕಿ ಹಾಕುವುದನ್ನು ನೋಡಿದ್ದೇವೆ. ಅನುಭವಿ ಅಧಿಕಾರಿಗಳಿಗೆ ಧಮಕಿ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಅವರ ಬಾಯಿ ಮುಚ್ಚಿಸೋ ಕೆಲಸ‌ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

ಪೊಲೀಸ್ ಇಲಾಖೆಯ ಕೇಸರೀಕರಣ ಅಂತ ಹೇಳುತ್ತಿದ್ದೀರಿ. ಅವರು ಎಂದಾದ್ರೂ ಕೇಸರಿ ಡ್ರೆಸ್ ಹಾಕೋದನ್ನು ನೋಡಿದ್ರಾ? ಪೊಲೀಸರ ಮೇಲೆ‌ ಹಗೆತನ ತೋರುವುದು ಸರಿಯಲ್ಲ. ನೀವು ಜನರನ್ನು ವಂಚಿಸಿ, ತೇಜೋವಧೆ ಮಾಡಿ ಮತ ಪಡೆಯುವ ಕೆಲಸ ಮಾಡಿದ್ದೀರಿ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಇಲಾಖೆಯಲ್ಲಿ 40% ಕಮಿಷನ್ ಪಡೆದಿದ್ದಾರೆ. ಅಂಥವರನ್ನೆಲ್ಲಾ ಜೈಲಿಗೆ ಕಳಿಸ್ತೀನಿ ಅಂತ ಎಂಬಿ ಪಾಟೀಲ್ ಹೇಳಿದ್ದಾರೆ. ಅವರೇನು ನೀರಾವರಿ ಮಂತ್ರಿನಾ? ಅದರ ಅರ್ಥ ಅವರಿಗೆ ನೀರಾವರಿ ಮಂತ್ರಿಗಿರಿ ಬೇಕು ಅಂತ ಅಲ್ಲವೇ? ಮತ್ತೊಬ್ಬ ಸಚಿವರು ಆರ್​​ಎಸ್​ಎಸ್, ಜರಂಗದಳ ಬ್ಯಾನ್ ಮಾಡ್ತೀನಿ ಅಂತಾರೆ. ಅದರ ಅರ್ಥ ಹೋಮ್ ಮಿನಿಸ್ಟರ್ ಬೇಕು ಅಂತ ಅಷ್ಟೆ. ಖಾತೆಗಳ ಹಂಚಿಕೆ ಆಗಿಲ್ಲ, ಆದ್ರೆ ನಾನೇ ಅದರ ವಾರಸುದಾರ ಅಂತ ಹೇಳುತ್ತಿದ್ದಾರೆ. ನಿಮ್ಮ ಈ ಬೆದರಿಕೆಗೆ ಬಿಜೆಪಿ ಸೊಪ್ಪು ಹಾಕಲ್ಲ ಎಂದು ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ವಾಮ ಮಾರ್ಗವನ್ನು ಜನರಿಗೆ ತೋರಿಸಿದ್ದೀರಿ. ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಅಂತ ಜನಕ್ಕೆ ತೋರಿಸಿದ್ದೀರಿ. ನೀವು ಮಾಡುವ ಮಾಡುವ ತಪ್ಪಿಗೆ ಲೈನ್ ಮ್ಯಾನ್, ಕಂಡಕ್ಟರ್​​ಗಳಿಗೆ ಸಮಸ್ಯೆ ಮಾಡಬೇಕಾ ಎಂದು ಅವರು ಕಾಂಗ್ರೆಸ್​​ನವರನ್ನು ಪ್ರಶ್ನಿಸಿದ್ದಾರೆ.

ಮೊದಲು ಗ್ಯಾರಂಟಿ ಘೋಷಣೆಯ ಹಣ ಕೊಡಲಿ‌; ರವಿಕುಮಾರ್

ಒಬ್ಬ ಪೊಲೀಸ್ ಅಧಿಕಾರಿಯೂ ಕೇಸರಿ ಬಟ್ಟೆ ಧರಿಸಿ ಬಂದಿಲ್ಲ. ಕೇಸರೀಕರಣ ಮಾಡ್ತಿದ್ದೀರಾ ಅಂತ ಡಿಸಿಎಂ ಪ್ರಶ್ನೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಮೊದಲು ತಮ್ಮ ಗ್ಯಾರಂಟಿ ಕಾರ್ಡ್ ಘೋಷಣೆಯ ಹಣ ಕೊಡಲಿ‌. ಆಮೇಲೆ ಪೊಲೀಸ್ ಇಲಾಖೆ ಕೇಸರೀಕರಣ ಆಗಿದೆಯೋ ಇಲ್ಲವೋ ನೋಡೋಣ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಜನರು ಗ್ಯಾರಂಟಿಗಳಿಗೆ ಕಾಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿ ಸುತ್ತುತ್ತಿದ್ದಾರೆ; ಬಿಜೆಪಿ ಕಿಡಿ

ಈಗ ನಿಮ್ಮ ಸರ್ಕಾರ ಬಂದಿದೆ, ಪೊಲೀಸರು ಕೆಲಸ ಮಾಡ್ತಾರೆ. ಆಗ ನಮ್ಮ ಸರ್ಕಾರ ಇತ್ತು, ಆಗಲೂ ಕೆಲಸ ಮಾಡಿದ್ದಾರೆ. ನಮ್ಮ ಇಬ್ಬರು ಶಾಸಕರ ಮೇಲೆ ಎಫ್​​ಐಆರ್ ದಾಖಲಿಸಿದ್ದಾರೆ. ಭಯೋತ್ಪಾದಕ, ನಕ್ಸಲ್ ಬೆಂಬಲಿಗರ ಪರವಾಗಿ ನಿಂತಿದ್ದೀರಾ? ಟಿಪ್ಪು ಜಯಂತಿ ಬೇಡ ಅಂತ ಹೇಳಿದ್ದಕ್ಕೆ ನಮ್ಮವರ ಮೇಲೆ ಎಫ್​ಐಆರ್ ಹಾಕ್ತೀರಾ? ಬಂಟ್ವಾಳದಲ್ಲಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡುವವರ ಮೇಲೆ ಎಫ್​ಐಆರ್ ಹಾಕಿಲ್ಲ. ಧರ್ಮ ರಕ್ಷಣೆ ಮಾಡುವ ನಮ್ಮ ಶಾಸಕರು, ಕಾರ್ಯಕರ್ತರ ಮೇಲೆ ಎಫ್​ಐಆರ್ ಹಾಕ್ತೀರಿ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಆರ್​ಎಸ್​​ಎಸ್ ಬ್ಯಾನ್ ಮಾಡ್ತೀನಿ ಅಂತ ಹೇಳಿದ್ದಾರೆ. ಅವರಿನ್ನೂ ಮಗು ಅಂತ ಕಾಣುತ್ತದೆ. ಅವರು ಕೂಪ ಮಂಡೂಕ ತರಹ ಕಾಣ್ತಿದ್ದಾರೆ. ಆರ್​ಎಸ್​​ಎಸ್ ಬಡವರ, ಸಂಕಷ್ಟಕ್ಕೆ ಸಿಲುಕಿದವರ ಪರ ಕೆಲಸ ಮಾಡುವ ಸಂಘಟನೆ. ಭಯೋತ್ಪಾದನೆಗೆ ಬೆಂಬಲ ಕೊಡುವ ಸಂಘಟನೆಗಳನ್ನು ನಿಷೇಧಿಸುವ ತಾಕತ್ತು ನಿಮಗಿಲ್ಲ. ದಿನನಿತ್ಯ ಶಾಖೆ ನಡೆಸುವ ಸಂಘಟನೆ ಬ್ಯಾನ್ ಮಾಡ್ತೀರಾ? ಇಂದಿರಾ ಗಾಂಧಿ ಸೇರಿದಂತೆ ಹಲವರು ಆರ್​ಎಸ್​​ಎಸ್ ಬ್ಯಾನ್ ಮಾಡಲು ಮುಂದಾಗಿದ್ರು. ಖರ್ಗೆ ಅವರೇ ನಿಮ್ಮ ಹಿರಿಯರನ್ನು ಕೇಳಿ ಬ್ಯಾನ್ ಮಾಡಿದ್ರೆ ಏನಾಗುತ್ತದೆ ಅಂತ. ನಿಮಗೆ ಹುಚ್ಚು ಹಿಡಿದಿದೆ ಎಂದು ರವಿಕುಮಾರ್ ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ