MLC Election Results: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ವಿವರ

| Updated By: ganapathi bhat

Updated on: Dec 14, 2021 | 11:26 PM

Election Results: 25 ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು, ಅವರು ಪಡೆದ ಮತಗಳ ವಿವರ ಇಲ್ಲಿ ನೀಡಲಾಗಿದೆ.

MLC Election Results: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆದಿದ್ದು, ಅದರ ಮತ ಎಣಿಕೆ ಪ್ರಕ್ರಿಯೆ ಇಂದು (ಡಿಸೆಂಬರ್ 14) ನಡೆದಿದೆ. 25 ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು, ಅವರು ಪಡೆದ ಮತಗಳ ವಿವರ ಇಲ್ಲಿ ನೀಡಲಾಗಿದೆ.

ವಿಧಾನಪರಿಷತ್‌ನ 11 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು ಲಭಿಸಿದೆ. ಕೊಡಗು, ಧಾರವಾಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡ, ಚಿತ್ರದುರ್ಗ, ಬೆಂಗಳೂರು ನಗರ, ವಿಜಯಪುರದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ವಿಧಾನಪರಿಷತ್‌ನ 11 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಾಧಿಸಿದೆ. ಬೀದರ್, ವಿಜಯಪುರ, ದಕ್ಷಿಣ ಕನ್ನಡ, ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ, ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಜಯವಾಗಿದೆ. ವಿಧಾನಪರಿಷತ್‌ನ 2 ಸ್ಥಾನಗಳಲ್ಲಿ ಜೆಡಿಎಸ್​ ಪಕ್ಷಕ್ಕೆ ಗೆಲುವು ಸಿಕ್ಕಿದೆ. ಹಾಸನ ಪರಿಷತ್​ ಕ್ಷೇತ್ರದಲ್ಲಿ ಡಾ.ಸೂರಜ್​ ರೇವಣ್ಣಗೆ ಜಯ ಹಾಗೂ ಮೈಸೂರು ಪರಿಷತ್​ ಕ್ಷೇತ್ರದಲ್ಲಿ ಸಿ.ಎನ್.ಮಂಜೇಗೌಡ ಜಯ ಸಾಧಿಸಿದ್ದಾರೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಫಲಿತಾಂಶ
ಬೆಂಗಳೂರು ನಗರ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿಗೆ ಗೆಲುವು ಲಭಿಸಿದೆ. ಬಿಜೆಪಿಯ ಹೆಚ್.ಎಸ್. ಗೋಪಿನಾಥ್ ರೆಡ್ಡಿಗೆ 1,227 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಯೂಸುಫ್ ಷರೀಫ್‌ಗೆ (KGF ಬಾಬು) 830 ಮತ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿಗೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ 2,262 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್‌ನ ಹೆಚ್.ಎಂ.ರಮೇಶ್‌ಗೌಡಗೆ 1,540 ಮತ ಲಭಿಸಿವೆ. ಬಿಜೆಪಿಯ ಬಿ.ಸಿ.ನಾರಾಯಣಸ್ವಾಮಿಗೆ ಕೇವಲ 54 ಮತ ಪಡೆದುಕೊಂಡಿದ್ದಾರೆ.

ಕೊಡಗು, ದಕ್ಷಿಣ ಕನ್ನಡ ಚುನಾವಣಾ ಫಲಿತಾಂಶ ಹೀಗಿದೆ
ಕೊಡಗು ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ವಿಜೇತ ಸುಜಾ ಕುಶಾಲಪ್ಪಗೆ 705 ಮತಗಳು ಬಂದಿವೆ. ಕಾಂಗ್ರೆಸ್​ನ ಡಾ. ಮಂಥರಗೌಡಗೆ 632 ಮತಗಳು ಲಭಿಸಿವೆ. ದಕ್ಷಿಣ ಕನ್ನಡ ದ್ವಿಸದಸ್ಯ ಪರಿಷತ್ ಕ್ಷೇತ್ರದ ಫಲಿತಾಂಶ ಬಂದಿದ್ದು, ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಜಯ ಲಭಿಸಿದೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಗೆ 3,672 ಮತಗಳು ಹಾಗೂ ಕಾಂಗ್ರೆಸ್‌ನ ಮಂಜುನಾಥ ಭಂಡಾರಿಗೆ 2,079 ಮತಗಳು ಸಿಕ್ಕಿವೆ.

ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಯಾರಿಗೆ ಗೆಲುವು?
ಚಿಕ್ಕಮಗಳೂರು ವಿಧಾನಪರಿಷತ್ ಕ್ಷೇತ್ರದ ಫಲಿತಾಂಶದಂತೆ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್‌ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್‌ಗೆ 1188 ಮತಗಳು ಲಭಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡಗೆ 1182 ಮತ ಸಿಕ್ಕಿವೆ. ಕೇವಲ 6 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. ಶಿವಮೊಗ್ಗ ವಿಧಾನಪರಿಷತ್ ಕ್ಷೇತ್ರದ ಫಲಿತಾಂಶದಂತೆ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್‌ಗೆ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್‌ಗೆ 2,197 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್‌ಗೆ 1,848 ಮತ ಲಭ್ಯವಾಗಿದೆ.

ಧಾರವಾಡ, ಕಲಬುರಗಿಯಲ್ಲಿ ಗೆದ್ದವರ್ಯಾರು?
ಧಾರವಾಡ ದ್ವಿಸದಸ್ಯ ಪರಿಷತ್ ಕ್ಷೇತ್ರದ ಫಲಿತಾಂಶದಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಜಯ ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್‌ಗೆ 3,334 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್‌ಗೆ 2,497 ಮತಗಳು ಲಭ್ಯವಾಗಿದೆ. ಕಲಬುರಗಿ ವಿಧಾನಪರಿಷತ್ ಕ್ಷೇತ್ರದ ಫಲಿತಾಂಶದಂತೆ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್‌ಗೆ ಗೆಲುವು ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್‌ಗೆ 3,452 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್‌ಗೆ 3,303 ಮತಗಳು ಲಭಿಸಿವೆ.

ಚಿತ್ರದುರ್ಗ, ಬಳ್ಳಾರಿ ಫಲಿತಾಂಶ ಹೀಗಿದೆ
ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದ ಫಲಿತಾಂಶದಂತೆ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್‌ಗೆ ಗೆಲುವು ಲಭ್ಯವಾಗಿದೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್‌ಗೆ 2,629 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್‌ಗೆ 2,271 ಮತ ಸಿಕ್ಕಿವೆ. ಬಳ್ಳಾರಿ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್‌ಗೆ ಗೆಲುವು ಲಭಿಸಿದೆ. ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್‌ಗೆ 2,659 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯಗೆ 1,902 ಮತ ಸಿಕ್ಕಿವೆ.

ಹಾಸನ, ಉತ್ತರ ಕನ್ನಡ ಚುನಾವಣಾ ಫಲಿತಾಂಶ
ಹಾಸನ ವಿಧಾನಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣಗೆ 2,281 ಮತಗಳು ಸಿಕ್ಕಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್‌ಗೆ 748 ಮತಗಳು ಲಭಿಸಿದೆ. ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್‌ಗೆ ಗೆಲುವು ಲಭ್ಯವಾಗಿದೆ. ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್‌ಗೆ 1,514 ಮತ ಹಾಗೂ ‘ಕೈ’ ಅಭ್ಯರ್ಥಿ ಭೀಮಪ್ಪ ಟಿ.ನಾಯ್ಕ್‌ಗೆ 1,331 ಮತ ಸಿಕ್ಕಿದೆ.

ಬೀದರ್, ಮಂಡ್ಯ ಫಲಿತಾಂಶ
ಬೀದರ್ ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್‌ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಭೀಮರಾವ್ ಪಾಟೀಲ್‌ಗೆ 1,789 ಮತ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ 1,562 ಮತಗಳನ್ನು ಪಡೆದುಕೊಂಡಿದ್ದಾರೆ. ಮಂಡ್ಯ ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಜಿ.ದಿನೇಶ್ ಗೂಳಿಗೌಡಗೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಎಂ.ಜಿ.ದಿನೇಶ್ ಗೂಳಿಗೌಡ 2,009 ಮತ, ಜೆಡಿಎಸ್‌ನ ಎನ್.ಅಪ್ಪಾಜಿಗೌಡ 1,912 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಆರ್.ಪೇಟೆ ಮಂಜು 50 ಮತಗಳನ್ನು ಪಡೆದುಕೊಂಡಿದ್ದಾರೆ.

ಕೋಲಾರ, ತುಮಕೂರು ವಿಧಾನಪರಿಷತ್ ಕ್ಷೇತ್ರದ ಫಲಿತಾಂಶ
ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್‌ಗೆ ಜಯ ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್‌ಗೆ 2,280 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ವಕ್ಕಲೇರಿ ರಾಮುಗೆ 1,438 ಮತಗಳು ಲಭ್ಯವಾಗಿದೆ. ಬಿಜೆಪಿಯ ಡಾ.ಕೆ.ಎನ್.ವೇಣುಗೋಪಾಲ್‌ 1,682 ಮತ ಪಡೆದುಕೊಂಡಿದ್ದಾರೆ. ತುಮಕೂರು ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣಗೆ ಗೆಲುವು ಲಭಿಸಿದೆ. ಕಾಂಗ್ರೆಸ್‌ನ ರಾಜೇಂದ್ರ ರಾಜಣ್ಣ 3,135 ಮತಗಳು, ಬಿಜೆಪಿಯ ಎಮ್.ಎನ್. ಲೋಕೇಶ್‌ಗೌಡ 2,050 ಮತಗಳು ಹಾಗೂ ಜೆಡಿಎಸ್‌ನ ಆರ್.ಅನಿಲ್‌ಕುಮಾರ್‌ಗೆ 1,298 ಮತಗಳನ್ನು ಪಡೆದುಕೊಂಡಿದ್ದಾರೆ.

ಬೆಳಗಾವಿ, ರಾಯಚೂರು ಫಲಿತಾಂಶ ಹೀಗಿದೆ
ಬೆಳಗಾವಿ ದ್ವಿಸದಸ್ಯ ಪರಿಷತ್ ಕ್ಷೇತ್ರದ ಫಲಿತಾಂಶದಂತೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ 3718 ಮತಗಳಿಂದ ಜಯ ಲಭಿಸಿದೆ. ದ್ವಿತೀಯ ಪ್ರಾಶಸ್ತ್ಯದ 408 ಮತಗಳಿಂದ ಲಖನ್​ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಪಡೆದುಕೊಂಡಿದ್ದಾರೆ. ರಾಯಚೂರು ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶರಣಗೌಡ ಪಾಟೀಲ್ ಬಯ್ಯಾಪುರಗೆ ಜಯ ಲಭಿಸಿದೆ. ಶರಣಗೌಡ ಪಾಟೀಲ್ ಬಯ್ಯಾಪುರಗೆ 3,369 ಮತಗಳು ಹಾಗೂ ಬಿಜೆಪಿಯ ವಿಶ್ವನಾಥ್ ಎ.ಬನಹಟ್ಟಿಗೆ 2,941 ಮತಗಳು ಸಿಕ್ಕಿದೆ.

ಕುತೂಹಲ ಕೆರಳಿಸಿದ್ದ ಮೈಸೂರು, ವಿಜಯಪುರ ಫಲಿತಾಂಶ
ಮೈಸೂರು ದ್ವಿಸದಸ್ಯ ಪರಿಷತ್ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯಗೆ 2,865 ಮತಗಳು ಲಭಿಸಿವೆ. ಮೈಸೂರು ಪರಿಷತ್ ಕ್ಷೇತ್ರದಲ್ಲಿ ಎಲಿಮಿನೇಷನ್​ ಸುತ್ತಿನಲ್ಲಿ ಜೆಡಿಎಸ್​ನ ಸಿ.ಎನ್.​ಮಂಜೇಗೌಡ ಜಯಶಾಲಿ ಆಗಿದ್ದಾರೆ. 2ನೇ ಸುತ್ತಿನಲ್ಲೂ ಸಿ.ಎನ್.​ಮಂಜೇಗೌಡಗೆ ಜಯ ಸಿಕ್ಕಿರಲಿಲ್ಲ. ಎಲಿಮಿನೇಷನ್​ ಸುತ್ತಿನಲ್ಲಿ ಸಿ.ಎನ್.​ಮಂಜೇಗೌಡಗೆ ಜಯ ಲಭಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಕ್ಷೇತ್ರದ ಫಲಿತಾಂಶ ಈಗ ಹೊರಬಿದ್ದಿದೆ.

ವಿಜಯಪುರ ದ್ವಿಸದಸ್ಯ ಪರಿಷತ್ ಕ್ಷೇತ್ರದಲ್ಲಿ ಕೂಡ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ್‌ಗೆ ಗೆಲುವು ಲಭಿಸಿದೆ. ಕಾಂಗ್ರೆಸ್‌ನ ಸುನಿಲ್ ಗೌಡ ಪಾಟೀಲ್‌ಗೆ 3,245 ಮತಗಳು ಲಭ್ಯವಾಗಿದೆ. ದ್ವಿತೀಯ ಪ್ರಾಶಸ್ತ್ಯದ ಮತಗಳಿಂದ ಪಿ.ಹೆಚ್.ಪೂಜಾರಗೆ ಜಯ ಸಿಕ್ಕಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆ: ಬಿಜೆಪಿಗೆ ಮುಳುವಾಯ್ತಾ ಲಖನ್ ಜಾರಕಿಹೊಳಿ ಸ್ಪರ್ಧೆ? ಬೆಳಗಾವಿಯಲ್ಲಿ ಕಾಂಗ್ರೆಸ್​ಗೆ ಗೆಲುವು

ಇದನ್ನೂ ಓದಿ: ಚಿಕ್ಕಮಗಳೂರು: 6 ಮತಗಳ ಅಂತರದಿಂದ ಬಿಜೆಪಿಗೆ ಗೆಲುವು; ಮರು ಮತ ಎಣಿಕೆಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

Published On - 4:45 pm, Tue, 14 December 21