ಇಂದು ಮುಲಾಯಂ ಸಿಂಗ್ ಯಾದವ್ ಅಂತ್ಯಕ್ರಿಯೆ; ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರು ಭಾಗಿ

Mulayam Singh Yadav Funeral: ಎಸ್​ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆ ಉತ್ತರ ಪ್ರದೇಶದ ಸೈಫೈ ಗ್ರಾಮದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಇಂದು ಮುಲಾಯಂ ಸಿಂಗ್ ಯಾದವ್ ಅಂತ್ಯಕ್ರಿಯೆ; ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರು ಭಾಗಿ
ಮುಲಾಯಂ ಸಿಂಗ್ ಯಾದವ್
Updated By: ಸುಷ್ಮಾ ಚಕ್ರೆ

Updated on: Oct 11, 2022 | 12:47 PM

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಸೋಮವಾರ ತಮ್ಮ 82ನೇ ವಯಸ್ಸಿನಲ್ಲಿ ಗುರುಗ್ರಾಮದಲ್ಲಿರುವ (Gurugram) ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಿನ್ನೆ ಉತ್ತರ ಪ್ರದೇಶಕ್ಕೆ ಕೊಂಡೊಯ್ಯಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಎಸ್​ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆ ಉತ್ತರ ಪ್ರದೇಶದ ಸೈಫೈ ಗ್ರಾಮದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಇಂದು ನಡೆಯುವ ಅಂತ್ಯಕ್ರಿಯೆಯಲ್ಲಿ ದೇಶದ ಹಲವು ರಾಜಕೀಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿನ್ನೆ ಎಸ್​ಪಿ ನಾಯಕರ ಕುಟುಂಬದ ಸಮ್ಮುಖದಲ್ಲಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಇಂದು ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಉತ್ತರ ಪ್ರದೇಶದ ಸರ್ಕಾರದ ಇತರ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Mulayam Singh Yadav Death: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನಿಧನ

ಯೋಗಿ ಆದಿತ್ಯನಾಥ್ ಅವರಲ್ಲದೆ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೈಫೈಗೆ ಪ್ರಯಾಣಿಸುವುದಾಗಿ ದೃಢಪಡಿಸಿದ್ದಾರೆ. ಜೊತೆಗೆ ಹಲವಾರು ರಾಷ್ಟ್ರೀಯ ರಾಜಕೀಯ ನಾಯಕರು ಕೂಡ ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರಿಗೆ ಅಂತಿಮ ನಮನ ಸಲ್ಲಿಸಲು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಕೂಡ ಆಗಮಿಸುವ ನಿರೀಕ್ಷೆಯಿದೆ. ನಿನ್ನೆ ಮುಲಾಯಂ ಸಿಂಗ್ ಯಾದವ್ ಅವರ ಸಾವಿನ ಸುದ್ದಿಯನ್ನು ಅವರ ಕುಟುಂಬದಿಂದ ಖಚಿತಪಡಿಸಿದ ತಕ್ಷಣ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ತೆರಳಿದ್ದರು.

ಇದನ್ನೂ ಓದಿ: Mulayam Singh Yadav Obituary: ಶಿಕ್ಷಕ, ಕುಸ್ತಿಪಟು, ರಾಜಕಾರಣಿ; ಮುಲಾಯಂ ಸಿಂಗ್ ಯಾದವ್ ನಡೆದುಬಂದ ಹಾದಿ ಸುಲಭದ್ದಾಗಿರಲಿಲ್ಲ!

ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬವು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿತ್ತು. ಆದ್ದರಿಂದ ಲಾಲು ಪ್ರಸಾದ್ ಯಾದವ್ ತಮ್ಮ ಮಗ ತೇಜಸ್ವಿ ಯಾದವ್ ಅವರೊಂದಿಗೆ ಇಂದು ಅಂತ್ಯಕ್ರಿಯೆಯಲ್ಲಿ ಹಾಜರಾಗುವ ನಿರೀಕ್ಷೆಯಿದೆ.

ಮುಲಾಯಂ ಸಿಂಗ್ ಯಾದವ್ ಅವರು ಉಸಿರಾಟದ ತೊಂದರೆ ಅನುಭವಿಸಿದ ನಂತರ ಅಕ್ಟೋಬರ್ 1ರಂದು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಈಗಾಗಲೇ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುಗೆ ದಾಖಲಾಗಿದ್ದರು. ನಿನ್ನೆ ಅವರು ಕೊನೆಯುಸಿರೆಳೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ