Mulayam Singh Yadav Obituary: ಶಿಕ್ಷಕ, ಕುಸ್ತಿಪಟು, ರಾಜಕಾರಣಿ; ಮುಲಾಯಂ ಸಿಂಗ್ ಯಾದವ್ ನಡೆದುಬಂದ ಹಾದಿ ಸುಲಭದ್ದಾಗಿರಲಿಲ್ಲ!
Mulayam Singh Yadav Passes Away: ರೈತನ ಮಗನಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರ ಬಾಲ್ಯ ಬಹಳ ಕಷ್ಟದಿಂದ ಕೂಡಿತ್ತು. ರಾಜಕೀಯಕ್ಕೆ ಸೇರುವ ಮೊದಲು ಮುಲಾಯಂ ಸಿಂಗ್ ಯಾದವ್ ಅವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ನವದೆಹಲಿ: ಸಮಾಜವಾದಿ ಪಕ್ಷದ ಅಧಿಪತಿ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಇಂದು ನಿಧನರಾಗಿದ್ದಾರೆ. ಗುರುಗ್ರಾಮದ (Gurugram) ಮೇದಾಂತ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇದರಿಂದ ದೇಶದ ರಾಜಕೀಯದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ದೇಶದ ರಕ್ಷಣಾ ಸಚಿವರ ಜವಾಬ್ದಾರಿಯನ್ನು ಹೊಂದಿದ್ದರು ಮುಲಾಯಂ ಸಿಂಗ್ ಯಾದವ್. ಮುಲಾಯಂ ಸಿಂಗ್ ಯಾದವ್ ರಾಜಕೀಯಕ್ಕೆ ಸೇರುವ ಮೊದಲು ಶಿಕ್ಷಕ ಹಾಗೂ ಕುಸ್ತಿಪಟುವಾಗಿದ್ದರು ಎನ್ನುವುದೇ ಅಚ್ಚರಿ.
ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈನಲ್ಲಿ 22 ನವೆಂಬರ್ 1939ರಂದು ಜನಿಸಿದರು. ಮುಲಾಯಂ ಉತ್ತರಪ್ರದೇಶದ ಇಟಾವಾ, ಫತೇಹಾಬಾದ್ ಮತ್ತು ಆಗ್ರಾದಲ್ಲಿ ಹೆಚ್ಚಿನ ಶಿಕ್ಷಣ ಪಡೆದರು. ಬ್ಯಾಚುಲರ್ ಆಫ್ ಟೀಚಿಂಗ್ ಮತ್ತು ಬಿಎ ಪದವಿ ಪಡೆದಿದ್ದರು. ಅವರು ಆಗ್ರಾ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಕೂಡ ಮಾಡಿದ್ದಾರೆ.
ಶಿಕ್ಷಕರಾಗಿದ್ದ ಮುಲಾಯಂ ಸಿಂಗ್ ಯಾದವ್: ರೈತನ ಮಗನಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರ ಬಾಲ್ಯ ಬಹಳ ಕಷ್ಟದಿಂದ ಕೂಡಿತ್ತು. ರಾಜಕೀಯಕ್ಕೆ ಸೇರುವ ಮೊದಲು ಮುಲಾಯಂ ಸಿಂಗ್ ಯಾದವ್ ಅವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಕರ್ಹಾಲ್ ಪ್ರದೇಶದ ಜೈನ್ ಇಂಟರ್ ಕಾಲೇಜಿನಿಂದ ಪ್ರಾರಂಭಿಸಿದರು. 1955ರಲ್ಲಿ ಮುಲಾಯಂ ಸಿಂಗ್ ಯಾದವ್ ಜೈನ್ ಇಂಟರ್ ಕಾಲೇಜಿನಲ್ಲಿ 9ನೇ ತರಗತಿಗೆ ಪ್ರವೇಶ ಪಡೆದ್ದರು. 1959 ರಲ್ಲಿ ಇಲ್ಲಿಂದ ತರಬೇತಿ ಪಡೆದ ಅವರು 1963ರಲ್ಲಿ ಸಹಾಯಕ ಶಿಕ್ಷಕರಾಗಿ ಕಲಿಸಲು ಪ್ರಾರಂಭಿಸಿದರು. ಆಗ ಮಾಸಿಕ 120 ರೂ. ಸಂಬಳ ಪಡೆಯುತ್ತಿದ್ದರು. ಪ್ರೌಢಶಾಲೆಯಲ್ಲಿ ಹಿಂದಿ ಮತ್ತು ಸಮಾಜ ವಿಜ್ಞಾನವನ್ನು ಪಾಠ ಮಾಡುತ್ತಿದ್ದರು.
ಇದನ್ನೂ ಓದಿ: Mulayam Singh Yadav Death: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನಿಧನ
ಮುಲಾಯಂ ಸಿಂಗ್ ಯಾದವ್ ಅವರ ಬೋಧನಾ ಶೈಲಿ ತುಂಬಾ ವಿಭಿನ್ನ ಮತ್ತು ಆಸಕ್ತಿದಾಯಕವಾಗಿತ್ತು ಎನ್ನುವುದನ್ನು ಅವರಿಂದ ಕಲಿತ ವಿದ್ಯಾರ್ಥಿಗಳು ಹೇಳುತ್ತಾರೆ. ಪಠ್ಯ ವಿಷಯದ ಬಗ್ಗೆ ಆಸಕ್ತಿ ತರುವುದರಲ್ಲಿ ಅವರು ನಿಪುಣರಾಗಿದ್ದರು. ಅವರು ಮಕ್ಕಳನ್ನು ಹೊಡೆಯುವುದನ್ನು ಬಲವಾಗಿ ವಿರೋಧಿಸುತ್ತಿದ್ದರು. ಮಕ್ಕಳನ್ನು ಹೊಡೆಯುವುದರಿಂದ ಅವರ ಬುದ್ಧಿವಂತಿಕೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಮುಲಾಯಂ ಸಿಂಗ್ ನಂಬಿದ್ದರು.
ಮುಲಾಯಂ ಸಿಂಗ್ ಯಾದವ್ ರಾಜಕೀಯ ಪಯಣ:
ಮುಲಾಯಂ ಸಿಂಗ್ ಯಾದವ್ 1960ರ ಸುಮಾರಿಗೆ ರಾಜಕೀಯ ಪ್ರವೇಶಿಸಿದರು. ಲೋಹಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1992 ರಲ್ಲಿ ಅವರು ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಮೂರು ಬಾರಿ (1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007) ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. 1996ರಿಂದ 1998ರವರೆಗೆ ಮುಲಾಯಂ ಸಿಂಗ್ ಯಾದವ್ ಅವರು ದೇಶದ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ತುರ್ತು ಪರಿಸ್ಥಿತಿಯಲ್ಲಿ ಮುಲಾಯಂ 19 ತಿಂಗಳು ಜೈಲುವಾಸ ಅನುಭವಿಸಿದ್ದರು. 1977ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಗಿ ಜನತಾ ದಳ ಅಧಿಕಾರಕ್ಕೆ ಬಂದಾಗ, ಮುಲಾಯಂ ಸಿಂಗ್ ಯಾದವ್ ಅವರನ್ನು ರಾಜ್ಯ ಸಚಿವರಾಗಿ ನೇಮಿಸಲಾಯಿತು. ಈ ನೇಮಕಾತಿಯು ಮುಲಾಯಂ ಅವರ ಜೀವನದ ನಿರ್ಣಾಯಕ ಕ್ಷಣವಾಗಿದ್ದು ಅದು ಅವರ ನಂತರದ ರಾಜಕೀಯ ಜೀವನವನ್ನು ಬದಲಾಯಿಸಿತು. ರಾಜ್ಯ ಸಚಿವರಾಗಿದ್ದ ಅವರು ಸಹಕಾರಿ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದರು. ಇದು ಅವರನ್ನು ಹಿಂದುಳಿದ ಜಾತಿ ಸಮುದಾಯಗಳ ಮೆಸ್ಸಿಹ್‌ನನ್ನಾಗಿ ಮಾಡಿತು ಮತ್ತು ಅವರ ರಾಜಕೀಯ ಆಕಾಂಕ್ಷೆಗಳನ್ನು ಪೂರೈಸಲು ಅದನ್ನು ಬಳಸಲು ಅವರು ಸಮಯ ತೆಗೆದುಕೊಳ್ಳಲಿಲ್ಲ.
ಮುಲಾಯಂ ಅವರು ತಮ್ಮ ಮುಸ್ಲಿಂ-ಯಾದವ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಮಾಡಿದ ಪ್ರಯತ್ನಗಳು, ಲಾಲು ಪ್ರಸಾದ್ ಯಾದವ್ ಅವರು ಬಿಹಾರ ರಾಜಕೀಯದಲ್ಲಿ ಸಹ ಜಾರಿಗೆ ತರುತ್ತಿದ್ದ ಸಮೀಕರಣ, ಅವರನ್ನು 1992ರಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಪ್ರಾರಂಭಿಸುವಂತೆ ಮಾಡಿತು. ಅವರು ಮತ್ತೆ ಮುಖ್ಯಮಂತ್ರಿಯಾದರು ಎಂಬ ಅಂಶದಿಂದ ಅವರ ಜನಪ್ರಿಯತೆ ಎಷ್ಟಿತ್ತು ಎಂಬುದನ್ನು ಅಳೆಯಬಹುದು. ರಾಜಕೀಯದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡ ಮುಲಾಯಂ ಸಿಂಗ್ ಯಾದವ್ ಭಾರತ ಕಂಡ ಶ್ರೇಷ್ಟ ರಾಜಕಾರಣಗಳಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ.
ಮುಲಾಯಂ ಸಿಂಗ್ ಯಾದವ್ ಅವರ ಮೊದಲ ಪತ್ನಿ ಮಾಲತಿ ದೇವಿ 1974ರಲ್ಲಿ ಪುತ್ರ ಅಖಿಲೇಶ್ ಯಾದವ್ ಗೆ ಜನ್ಮ ನೀಡಿದ್ದ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಅವರು 2003ರವರೆಗೆ ಅನಾರೋಗ್ಯದಿಂದ ಬಳಸಿ, ಕೊನೆಯುಸಿರೆಳೆದರು. ಅಖಿಲೇಶ್ ಯಾದವ್ ಇದೀಗ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. 1990ರ ದಶಕದಲ್ಲಿ ಸಾಧನಾ ಗುಪ್ತ ಜೊತೆಗೆ ಸಂಬಂಧ ಹೊಂದಿದ್ದ ಮುಲಾಯಂ ಸಿಂಗ್ ಯಾದವ್ ಅವರ ಸಂಬಂಧವನ್ನು 2007ರಲ್ಲಿ ಸುಪ್ರೀಂ ಕೋರ್ಟ್ ಕಾನೂನು ಮಾನ್ಯ ಮಾಡಿತು. ಅವರ ಪುತ್ರ ಪ್ರತೀಕ್ ಯಾದವ್ ರ ಪತ್ನಿ ಅಪರ್ಣ ಬಿಷ್ತ್ ಯಾದವ್ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು.
(ವರದಿ: ಹರೀಶ್ ಜಿ.ಆರ್, ಟಿವಿ9 ಹಿರಿಯ ವರದಿಗಾರ, ನವದೆಹಲಿ)