ಆರ್‌ಸಿಬಿ ಸಂಭ್ರಮಾಚರಣೆ ಕಾಲತ್ತುಳಿತ: ಹಲವು ಪ್ರಶ್ನೆಗಳನ್ನೆತ್ತಿದ ಬಿಜೆಪಿ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ
ಬೆಂಗಳೂರಿನಲ್ಲಿ ಆರ್‌ಸಿಬಿ ಐಪಿಎಲ್ ವಿಜಯೋತ್ಸವದ ಸಂದರ್ಭದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟ ಘಟನೆಯ ಕುರಿತು ಪ್ರತಿಪಕ್ಷ ನಾಯಕ ಅಶೋಕ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಜನದಟ್ಟಣೆ ನಿರ್ವಹಣೆ ವೈಫಲ್ಯ, ಅಸಮರ್ಪಕ ಭದ್ರತೆ, ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಅವರು ಪ್ರಶ್ನಿಸಿದ್ದಾರೆ. ಸಮಗ್ರ ತನಿಖೆ ನಡೆಸುವಂತೆ ಮತ್ತು ಹೊಣೆಗಾರಿಕೆಯನ್ನು ನಿರ್ಧರಿಸುವಂತೆ ಅವರು ಆಗ್ರಹಿಸಿದ್ದಾರೆ.

ಬೆಂಗಳೂರು, ಜೂನ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಟ್ರೋಫಿ ಗೆದ್ದ ಪ್ರಯುಕ್ತ ಬೆಂಗಳೂರಿನಲ್ಲಿ ಜೂನ್ 4 ರಂದು ನಡೆದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಘಟನೆ ಸಂಬಂಧ ಹಲವು ಪ್ರಶ್ನೆಗಳನ್ನು ಎತ್ತಿರುವ ಅಶೋಕ್ (R Ashoka), ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ವಿಚಾರದಲ್ಲಿ ತಕ್ಷಣವೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸಂಭವಿಸಿದ ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದು, 75 ಮಂದಿ ಗಾಯಗೊಂಡಿದ್ದರು. ಇದು ಒಂದು ಆಕಸ್ಮಿಕ ಘಟನೆ ಅಲ್ಲ. ಇದರಲ್ಲಿ ನಿರ್ಲಕ್ಷ್ಯ ಮತ್ತು ಅಸಮರ್ಪಕ ಆಡಳಿತ ಎದ್ದು ಕಾಣುತ್ತಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಆಡಳಿತಗಳು ಸಾರ್ವಜನಿಕ ಸುರಕ್ಷತೆಯನ್ನು ನಿರ್ಲಕ್ಷಿಸಿ ರುವುದು ಎದ್ದು ಕಾಣುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಬರೆದ ಪತ್ರದಲ್ಲಿ ಅಶೋಕ್ ಉಲ್ಲೇಖಿಸಿದ್ದಾರೆ.
ಇಷ್ಟೇ ಅಲ್ಲದೆ ಘಟನೆಗೆ ಸಂಬಂಧಪಟ್ಟಂತೆ ಹಲವು ಕಾರಣಗಳನ್ನು ಪತ್ರದಲ್ಲಿ ಅಶೋಕ್ ಪಟ್ಟಿ ಮಾಡಿದ್ದಾರೆ. ಅವುಗಳು ಹೀಗಿವೆ;
- ಜನದಟ್ಟಣೆ ನಿಯಂತ್ರಿಸುವಲ್ಲಿ ವೈಫಲ್ಯ ಮತ್ತು ಸಂಭ್ರಮಾಚರಣೆ ಬಗ್ಗೆ ಅತಿಯಾದ ಪ್ರಚಾರ.
- ಅಸಮರ್ಪಕ ಭದ್ರತೆ ಮತ್ತು ಕಡಿಮೆ ಪೊಲೀಸರ ನಿಯೋಜನೆ.
- ಮೂಲಸೌಕರ್ಯಗಳು ಮತ್ತು ತುರ್ತು ಸೇವೆಗಳ ಕೊರತೆ.
- ಸಂಘಟಕರ ಬೇಜವಾಬ್ದಾರಿ.
- ರಾಜ್ಯ ಸರ್ಕಾರದ ವೈಫಲ್ಯಗಳು.
ಮಾನವ ಹಕ್ಕುಗಳ ಆಯೋಗಕ್ಕೆ ಅಶೋಕ್ ಆಗ್ರಹವೇನು?
- ತಕ್ಷಣವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು.
- ಸಮಗ್ರ ತನಿಖೆ ಆರಂಭಿಸಬೇಕು.
- ಹೊಣೆಗಾರಿಕೆ ಯಾರದ್ದು ಎಂಬುದನ್ನು ಕಾತರಿಪಡಿಸಿಕೊಳ್ಳಬೇಕು.
- ಮಾರ್ಗಸೂಚಿ ಮತ್ತು ಪ್ರೋಟೋಕಾಲ್ಗಳನ್ನು ಹೊರಡಿಸಬೇಕು.
- ಈಗ ನಡೆಯುತ್ತಿರುವ ತನಿಖೆಯ ಬಗ್ಗೆ ಗಮನಹರಿಸಬೇಕು.
ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡವರ ಕುಟುಂಬದವರಿಗೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ನ್ಯಾಯ ಒದಗಿಸಿಕೊಡಬೇಕು. ಅಷ್ಟೇ ಅಲ್ಲದೆ, ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ಸಂಭ್ರಮಾಚರಣೆ ಕಾಲ್ತುಳಿತ: ಮಕ್ಕಳ ಹಕ್ಕುಗಳ ಆಯೋಗದಿಂದಲೂ ಕೇಸ್
ಈ ಮಧ್ಯೆ, ಘಟನೆ ಸಂಬಂಧ ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಕಾಲ್ತುಳಿತ ಘಟನೆ ವೇಳೆ ಮಕ್ಕಳಿಗೆ ಆಗಿರುವ ಹಾನಿಯ ಕುರಿತು ಮಾಹಿತಿ ನೀಡುವಂತೆ ಸಿಐಡಿ ಅನ್ನು ಕೋರಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Thu, 12 June 25








