ಕಾಂಗ್ರೆಸ್ ಸಂಸದ, ಶಾಸಕರ ಮನೆಗಳ ಮೇಲೆ ಇಡಿ ದಾಳಿ ವಿಚಾರ: ಸಿಎಂ ಸೇರಿ ಯಾರೆಲ್ಲಾ ಏನಂದ್ರು?
ಕಾಂಗ್ರೆಸ್ ಸಂಸದ, ಶಾಸಕರ ಮನೆಗಳ ಮೇಲೆ ಇ.ಡಿ ಅಧಿಕಾರಿಗಳ ದಾಳಿಯಿಂದ ಕೆಲದಿನಗಳಿಂದ ತಣ್ಣಗಿದ್ದ ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ಹಗರಣ ಮತ್ತೆ ಸದ್ದು ಮಾಡಿದೆ. ಹಗರಣದ ಹಣವನ್ನು ಲೋಕಸಭಾ ಚುನಾವಣೆಗೆ ಬಳಕೆ ಆರೋಪ ಹಿನ್ನಲೆ ದಾಳಿ ಮಾಡಲಾಗಿದೆ. ಸದ್ಯ ಈ ದಾಳಿ ವಿಚಾರವಾಗಿ ರಾಜಕೀಯ ನಾಯಕರು ಕಿಡಿಕಾರಿದ್ದಾರೆ. ಯಾರೆಲ್ಲಾ ಏನಂದ್ರು ಇಲ್ಲಿದೆ ಮಾಹಿತಿ.

ಬೆಂಗಳೂರು, ಜೂನ್ 11: ವಾಲ್ಮೀಕಿ ನಿಗಮ ಹಗರಣದ (Valmiki Corporation scam) ಹಣ ಲೋಕಸಭಾ ಚುನಾವಣೆಗೆ ಬಳಕೆ ಆರೋಪ ಹಿನ್ನಲೆ ಬುಧವಾರ ಕಾಂಗ್ರೆಸ್ ಸಂಸದ ಮತ್ತು ಶಾಸಕರ ಮನೆ ಮತ್ತು ಕಚೇರಿಗಳ ಮೇಲೆ ಇ.ಡಿ ದಾಳಿ (ED Raid) ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಆ ಮೂಲಕ ಕೆಲದಿನಗಳಿಂದ ತಣ್ಣಗಿದ್ದ ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ಹಗರಣ ಮತ್ತೆ ಸದ್ದು ಮಾಡಿದೆ. ಇ.ಡಿ ಅಧಿಕಾರಿಗಳ ಡ್ರೀಲ್ಗೆ ಸಂಸದರು, ಶಾಸಕರು ಕಂಗಾಲಾಗಿದ್ದಾರೆ. ದಾಳಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.
ತಪ್ಪುಗಳನ್ನು ನಾವು ಬೆಂಬಲಿಸುವುದಿಲ್ಲ ಎಂದ ಸಿಎಂ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ. ಯಾವುದೇ ಕಾರಣಕ್ಕೂ ತಪ್ಪುಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇಡಿ ಜಪ್ತಿ ಮಾಡಿದ್ದ ಹಣ ಎಲ್ಲಿ ಹೋಯಿತು: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಯಾವ ಕಾರಣಕ್ಕೆ ದಾಳಿಯಾಗಿದೆ ಅನ್ನೋದು ಇಡಿಯವರಿಗೆ ಗೊತ್ತು. ಇಡಿ ಅಧಿಕಾರಿಗಳ ದಾಳಿ ಇದೇನು ಹೊಸದಲ್ಲ. ಚುನಾವಣೆ ಸಮಯದಲ್ಲಿ ಎಲ್ಲಾ ಪಕ್ಷಗಳ ಹಣ ಸೀಜ್ ಮಾಡಿದ್ದರು. ಇಡಿ ಜಪ್ತಿ ಮಾಡಿದ್ದ ಹಣ ಎಲ್ಲಿ ಹೋಯಿತು, ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಕರ್ನಾಟಕದಲ್ಲಿ ಏಕಕಾಲಕ್ಕೆ 8 ಕಡೆ ಇ.ಡಿ ದಾಳಿ
ಕಾಂಗ್ರೆಸ್ ಶಾಸಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಮೊದಲಿನಿಂದಲೂ ಸಿಟ್ಟಿದೆ. ಇಡಿ ದಾಳಿ ಮೂಲಕ ಟಾರ್ಚರ್ ಕೊಟ್ಟರೆ ಕಾಂಗ್ರೆಸ್ ಇಬ್ಭಾಗ ಮಾಡಬೇಕೆಂಬ ಉದ್ದೇಶ ಇರಬೇಕು. ಆದರೆ ಅದು ಸಾಧ್ಯವಿಲ್ಲದ ಮಾತು ಎಂದು ಹೇಳಿದ್ದಾರೆ.
ಇವೆಲ್ಲಾ ಪೂರ್ವ ನಿಯೋಜಿತ ದಾಳಿಗಳು: ಬಸವರಾಜ ರಾಯರೆಡ್ಡಿ
ದೆಹಲಿಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿದ್ದು, ಕೇಂದ್ರದಲ್ಲಿರುವ ಮೋದಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಬರೀ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಇಡಿ, ಐಡಿ ದಾಳಿ ಆಗುತ್ತಿದೆ. ಇವೆಲ್ಲಾ ಪೂರ್ವ ನಿಯೋಜಿತ ದಾಳಿಗಳು, ಇಡಿ ದಾಳಿ ಸರಿಯಲ್ಲ. ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ದಾಳಿಗಳನ್ನು ಮಾಡಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ತನಿಖೆ ಆಗಲಿ, ಆದರೆ ಇಡಿಗೂ ವಾಲ್ಮೀಕಿ ನಿಗಮದ ಕೇಸ್ಗೂ ಏನು ಸಂಬಂಧ ಎಂದಿದ್ದಾರೆ.
ಹಗರಣದ ಬಗ್ಗೆ ಸದನದಲ್ಲೇ ಸಿಎಂ ಒಪ್ಪಿಕೊಂಡಿದ್ರು: ಡಾ.ಅಶ್ವತ್ಥ್ ನಾರಾಯಣ
ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗನಿಂದಲೂ ಹಗಲು ದರೋಡೆ ಮಾಡುತ್ತಿದ್ದಾರೆ. ರಾಜ್ಯದ ಜನರ ಜೇಬಿನಿಂದ ಹಣ ಲೂಟಿ ಮಾಡುತ್ತಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆ ಬಳಿಕ ವಾಲ್ಮೀಕಿ ನಿಗಮದ ಹಗರಣ ಹೊರಗೆ ಬಂತು. ಸರ್ಕಾರ ಯಾರ ಮೇಲೂ ಕ್ರಮಕೈಗೊಳ್ಳದೆ ಭಂಡತನ ತೋರಿದೆ. ಬಳ್ಳಾರಿ ಚುನಾವಣೆಗೆ ಹಣ ಬಳಸಿದ್ದಾರೆಂದು ತನಿಖೆಯಲ್ಲಿ ಗೊತ್ತಾಗಿದೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಸದನದಲ್ಲೇ ಸಿಎಂ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.
ಬಿ. ಶ್ರೀರಾಮುಲು ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸಂಸದರು, ಶಾಸಕರ ಮನೆಗಳ ಮೇಲೆ ಇಡಿ ದಾಳಿ ಮಾಡಿದೆ. ಈ ನಾಯಕರು ಬಹಳ ಸಾಚಾಗಳ ತರಹ ಮಾತಾಡುತ್ತಿದ್ದರು. ಇವರು ಮಾಡುವುದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ. ನಾವು ನಾಗೇಂದ್ರ ರಾಜೀನಾಮೆಗೆ ಒತ್ತಾಯ ಮಾಡಿದ್ದೆವು. ಬಳಿಕ ರಾಜೀನಾಮೆ ನೀಡಿ ಜೈಲು ಪಾಲಾದರು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.