ಬೆಂಗಳೂರು: ಇನ್ನೇನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಇಲ್ಲ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವಷ್ಟರಲ್ಲೇ ಅತೃಪ್ತ ಶಾಸಕ ಜಿಟಿ ದೇವೇಗೌಡ ಅವರನ್ನು ದಳಪತಿಗಳು ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಖುದ್ದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರೇ ಇತ್ತೀಚೆಗೆ ಮೈಸೂರಿನ ಜಿಟಿ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ಸಂಧಾನ ಮಾಡಿಬಂದಿದ್ದರು. ಇದರ ಬೆನ್ನಲ್ಲೇ ಜಿಟಿ ದೇವೇಗೌಡ ಅವರು ಬರೋಬ್ಬರಿ ಮೂವರೆ ವರ್ಷಗಳ ಬಳಿಕ ಜೆಡಿಎಸ್ನ ಕೇಂದ್ರ ಕಚೇರಿಗೆ ಕಾಲಿಟ್ಟಿದ್ದಾರೆ.
ಹೌದು…ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನದ ಬಳಿಕ ಕುಮಾರಸ್ವಾಮಿ ಮೇಲೆ ಮುನಿಸಿಕೊಂಡಿದ್ದ, ಜಿಟಿ ದೇವೇಗೌಡ, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು. ಅಲ್ಲದೇ ಜೆಡಿಎಸ್ನಿಂದ ಒಂದು ಕಾಲು ಆಚೆ ಇಟ್ಟು ಕಾಂಗ್ರೆಸ್, ಬಿಜೆಪಿ ನಾಯಕ ಸಂಪರ್ಕದಲ್ಲಿದ್ದರು. ಆದ್ರೆ, ಅತೃಪ್ತ ಶಾಸಕ ಜಿ,ಟಿ.ದೇವೇಗೌಡ ಜೊತೆಗೆ ಪಕ್ಷದ ವರಿಷ್ಠ ದೇವೇಗೌಡ ಅವರು ಮಾಡಿದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಇದೀಗ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
Karnataka Politics: ದೊಡ್ಡಗೌಡ್ರ ಪ್ಲಾನ್ ಸಕ್ಸಸ್: ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್-ಬಿಜೆಪಿಗೆ ಜಿಟಿಡಿ ಶಾಕ್!
ಮೂರೂವರೆ ವರ್ಷಗಳ ನಂತರ ಜಿಟಿಡಿ ಇಂದು (ಅಕ್ಟೋಬರ್ 26) ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ. ಅವರನ್ನು ಬರಮಾಡಿಕೊಂಡ ಕುಮಾರಸ್ವಾಮಿಗೆ ಜಿಟಿಡಿ ಸಿಹಿ ತಿನಿಸಿದರು.ಬಳಿಕ ಜಿಟಿಡಿ ಹಾಗೂ ಕುಮಾರಸ್ವಾಮಿ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ಮೂಲಕ ಕುಮಾರಸ್ವಾಮಿ ಹಾಗೂ ಜಿಟಿ ದೇವೇಗೌಡ ನಡುವೆ ಇದ್ದ ಎಲ್ಲಾ ವೈಮನಸ್ಸೂ ಕೊನೆಗೊಂಡಂತಾಗಿದೆ.
ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆ ಬೇಸರ ಮಾಡಿಕೊಂಡು ಪಕ್ಷದಿಂದ ದೂರವೇ ಉಳಿದಿದ್ದರು. ಪಕ್ಷ ಬಿಟ್ಟು ಜಿಟಿ ದೇವೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ದೇವೇಗೌಡರ ಒಂದು ಭೇಟಿ ಕೊಟ್ಟ ಬಳಿಕ ಎಲ್ಲಾ ವೈಮನಸ್ಸೂ ಕೊನೆಗೊಂಡಿದೆ. ಅಲ್ಲದೇ ಜಿಟಿ ದೇವೇಗೌಡ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಭಾಗದ ಉಸ್ತುವಾರಿಯನ್ನೂ ನೀಡಲಾಗಿದೆ. ಜತೆಗೆ ಅವರ ಮಗ ಹರೀಶ್ ಗೌಡ ಅವರಿಗೂ ಹುಣಸೂರಿನಿಂದ ಈ ಬಾರಿ ಸ್ಪರ್ಧೆಗೆ ಟಿಕೆಟ್ ಸಹ ನೀಡಲಾಗಿದೆ. ಇದು ಜಿಟಿಡಿಗೆ ಡಬಲ್ ಖುಷಿ ತಂದಿದೆ.
ಜೆಡಿಎಸ್ ಕಚೇರಿಯಲ್ಲಿ ಜೆಟಿಡಿ ಮಾತು
ಇನ್ನು ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ರಾಜ್ಯದಲ್ಲಿ ಭಾರಿ ಮಳೆಯಿಂದ ರಸ್ತೆಗಳು, ನಾಲೆಗಳು ಹಾಳಾಗಿವೆ. ಸಿಎಂಗೆ ಅವೆಲ್ಲವನ್ನೂ ಸರಿಪಡಿಸುವ ಶಕ್ತಿ ಚಾಮುಂಡೇಶ್ವರಿ ನೀಡಲಿ. ಮರಳಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದು ಖುಷಿ ತಂದಿದೆ ಎಂದರು.
ನಿನ್ನೆ ಸಾಯಂಕಾಲದವರೆಗೂ ಸೂರ್ಯ ಗ್ರಹಣ ಇತ್ತು, ಮೋಕ್ಷ ಆಗಿದೆ. ನಾಡಿಗೆ ಒಳ್ಳೆಯದು ಆಗಬೇಕು. ಸಿಎಂ ಬೊಮ್ಮಾಯಿಯವರಿಗೂ ಮುಂಜಾನೆ ಅವರ ಮನೆಗೆ ಭೇಟಿ ನೀಡಿ ಸಿಹಿ ತಿನ್ನಿಸಿದ್ದೇನೆ. ರಾಜ್ಯದಲ್ಲಿ ಮಳೆ ಬಂದು ರಸ್ತೆಗಳು,ನಾಲೆಗಳು ಹಾಳಾಗಿವೆ. ಅವೆಲ್ಲವನ್ನೂ ಸರಿ ಪಡಿಸುವ ಶಕ್ತಿ ಚಾಮುಂಡೇಶ್ವರಿ ನೀಡಲಿ ಎಂದು ಸಿಎಂಗೆ ಹಾರೈಸಿದ್ದೇನೆ
ಕುಮಾರಸ್ವಾಮಿಗೂ ಸಿಹಿ ತಿನ್ನಿಸಿ, ಒಳ್ಳೆಯದಿಗಲಿ ಎಂದು ಹಾರೈಸಿದ್ದೇನೆ. ನಾಡಿಗೆ ಒಳ್ಳೆಯದಾಗಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಲ್ಲರಿಗೂ ಒಳ್ಳೆಯದಾಗಲಿ. ಮರಳಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದು ಖುಷಿ ತಂದಿದೆ ಎಂದು ಹೇಳಿದರು.
Published On - 2:52 pm, Wed, 26 October 22