PM Candidate: ನರೇಂದ್ರ ಮೋದಿಯೇ 2024ರ ಪ್ರಧಾನಿ ಅಭ್ಯರ್ಥಿ: ಅಮಿತ್ ಶಾ ಘೋಷಣೆ
ಹೊಸಬರಿಗೆ ಅವಕಾಶ ನೀಡಿ, ನರೇಂದ್ರ ಮೋದಿ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಬಹುದು ಎಂಬ ಊಹಾಪೋಹಗಳು ಕೇಳಿಬಂದಿದ್ದವು.
ಪಾಟ್ನಾ: ಬಿಜೆಪಿ ಮತ್ತು ಜೆಡಿಯು ಮೈತ್ರಿಯು 2024ರ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಯುತ್ತದೆ. ನರೇಂದ್ರ ಮೋದಿ (Narendra Modi) ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿರುತ್ತಾರೆ (PM Candidate) ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು. ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದ ಭಾರತೀಯ ಜನತಾ ಪಕ್ಷದ (Bharatiya Janata Party – BJP) ವಿವಿಧ ಮೋರ್ಚಾಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪ್ರಧಾನಿ ಅಭ್ಯರ್ಥಿ ಯಾರಾಗಿರಬೇಕು ಎನ್ನುವುದು ಬಿಸಿಬಿಸಿ ಚರ್ಚೆಯ ವಿಚಾರವಾಗಿತ್ತು. ಹೊಸಬರಿಗೆ ಅವಕಾಶ ನೀಡಿ, ನರೇಂದ್ರ ಮೋದಿ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಬಹುದು ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಇದೀಗ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾದ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಅಮಿತ್ ಶಾ ಘೋಷಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಹಾರದಲ್ಲಿ ಜೆಡಿಯು ಜೊತೆಗೆ ಮಾಡಿಕೊಂಡಿರುವ ಮೈತ್ರಿಯ ಬಗ್ಗೆಯೂ ಚರ್ಚೆ ನಡೆಯಿತು. 2024ರ ಲೋಕಸಭೆ ಮತ್ತು 2025ರ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿಯೂ ಈ ಮೈತ್ರಿ ಆಬಾಧಿತವಾಗಿ ಮುಂದುವರಿಯಲಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಅವರು ಹೇಳಿದರು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಶ್ಮೀರದ ಮಹಿಳೆಯರು ತಯಾರಿಸಿರುವ ತ್ರಿವರ್ಣ ಧ್ವಜವನ್ನು ಎಲ್ಲರಿಗೂ ವಿತರಿಸಲಾಯಿತು. ಸಂವಿಧಾನದ 370ನೇ ವಿಧಿಯ ರದ್ದತಿಯ ನಂತರ ಕಾಶ್ಮೀರದಲ್ಲಿ ಹಲವು ಬದಲಾವಣೆಗಳು ಆಗಿವೆ. ಈ ಬದಲಾವಣೆಯನ್ನು ಬಿಂಬಿಸಲು ತ್ರಿವರ್ಣ ಧ್ವಜವನ್ನು ಹಂಚಲಾಯಿತು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಎಲ್ಲ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿದ್ದೇವೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ದಲಿತರು, ಬುಡಕಟ್ಟು ಜನಾಂಗಕ್ಕೆ ಸೇರಿದವರು ಮತ್ತು ಹಳ್ಳಿಗಳಿಂದ ಬಂದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ದೇಶಭಕ್ತಿಗೆ ಉತ್ತೇಜನ ನೀಡುವ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯ ಭಾರತದಲ್ಲಿ ಬಂದಿದೆ. ಆಗಸ್ಟ್ 13ರಿಂದ 15ರ ಅವಧಿಯಲ್ಲಿ ಮೂರು ದಿನ ದೇಶದ ಮೂಲೆಮೂಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಬಿಜೆಪಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
Published On - 10:09 am, Mon, 1 August 22