ದೆಹಲಿ: ಭಾರತೀಯ ಜನತಾ ಪಕ್ಷವು (BJP) ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಾಗಿ ಒಟ್ಟು ₹ 252 ಕೋಟಿ ಖರ್ಚು ಮಾಡಿದೆ. ಈ ಮೊತ್ತದಲ್ಲಿ ಶೇ 60ರಷ್ಟು ಅಂದರೆ, ₹ 151 ಕೋಟಿ ಮೊತ್ತವನ್ನು ಪಶ್ಚಿಮ ಬಂಗಾಳ ಒಂದರಲ್ಲೇ ಖರ್ಚು ಮಾಡಿದೆ. ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಅಧಿಕಾರದಿಂದ ಕೆಳಗಿಳಿಸಿ, ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ನಾಯಕರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿರಲಿಲ್ಲ.
ವೆಚ್ಚದ ವಿವರಗಳನ್ನು ಬಿಜೆಪಿಯು ಚುನಾವಣಾ ಆಯೋಗಕ್ಕೆ ನೀಡಿದೆ. ₹ 252,02,71,753 ಮೊತ್ತವನ್ನು ಬಿಜೆಪಿ ಚುನಾವಣೆಗಾಗಿ ಖರ್ಚು ಮಾಡಿದೆ. ಈ ಪೈಕಿ ₹ 43.81 ಕೋಟಿಯನ್ನು ಅಸ್ಸಾಂ ಮತ್ತು ₹ 4.79 ಕೋಟಿಯನ್ನು ಪುದುಚೇರಿ ವಿಧಾನಸಭಾ ಚುನಾವಣೆಗಾಗಿ ಖರ್ಚು ಮಾಡಿದೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆಯನ್ನು ಡಿಎಂಕೆ ಅಧಿಕಾರದಿಂದ ಕೆಳಗಿಳಿಸಿತು. ತಮಿಳುನಾಡಿನಲ್ಲಿ ಶೇ 2.6ರಷ್ಟು ಮತ ಪಡೆದಿದ್ದ ಬಿಜೆಪಿ ಅಲ್ಲಿ ₹ 22.97 ಕೋಟಿ ವ್ಯಯಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದ ಬಿಜೆಪಿಯು ₹ 151 ಕೋಟಿ ವ್ಯಯಿಸಿತ್ತು. ಆದರೆ ಬಿಜೆಪಿಯ ಪ್ರಯತ್ನ ಫಲ ನೀಡಿರಲಿಲ್ಲ.
ಕೇರಳದಲ್ಲಿ ಈ ಬಾರಿ ಒಂದಿಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಬಿಜೆಪಿ ಎಲ್ಡಿಎಫ್ ವಿರುದ್ಧದ ಹೋರಾಟದಲ್ಲಿ ಅಂಥ ಯಶಸ್ಸು ಸಿಕ್ಕಿರಲಿಲ್ಲ. ಕೇರಳ ಚುನಾವಣೆಗಾಗಿ ಬಿಜೆಪಿ ₹ 29.24 ಕೋಟಿ ಖರ್ಚು ಮಾಡಿತ್ತು.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ರನ್ನು ಸಿಎಂ ಪಟ್ಟದಿಂದ ಇಳಿಸಿದರೆ ಕೋಪಗೊಳ್ಳುತ್ತಾರೆ ಎಂದ ಬಿಜೆಪಿ ಮಾಜಿ ಶಾಸಕ
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ; ಐವರು ಹಾಲಿ ಎಂಎಲ್ಸಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧಾರ