ವಿಧಾನ ಪರಿಷತ್ ಚುನಾವಣೆ; ಐವರು ಹಾಲಿ ಎಂಎಲ್ಸಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧಾರ
Karnataka Legislative Council Election 2021: ಡಿಸೆಂಬರ್ನಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂಎಲ್ಸಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಎಂ.ಕೆ. ಪ್ರಾಣೇಶ್, ಬಿ.ಜಿ. ಪಾಟೀಲ್, ಮಹಾಂತೇಶ್ ಕವಟಗಿಮಠ, ಪ್ರದೀಪ್ ಶೆಟ್ಟರ್ಗೆ ಮತ್ತೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ.
ಬೆಂಗಳೂರು: ಕರ್ನಾಟಕದ 25 ವಿಧಾನ ಪರಿಷತ್ (Vidhan Parishad) ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿಯ (BJP) ಹಾಲಿ ವಿಧಾನ ಪರಿಷತ್ ಸದಸ್ಯರ ಪೈಕಿ ಐವರಿಗೆ ಮತ್ತೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಎಂ.ಕೆ. ಪ್ರಾಣೇಶ್, ಬಿ.ಜಿ. ಪಾಟೀಲ್, ಮಹಾಂತೇಶ್ ಕವಟಗಿಮಠ, ಪ್ರದೀಪ್ ಶೆಟ್ಟರ್ಗೆ ಮತ್ತೆ ಟಿಕೆಟ್ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಕೊಡಗು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಸುನಿಲ್ ಸುಬ್ರಮಣಿ ಬದಲು ಸುಜಾ ಕುಶಾಲಪ್ಪ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ. ಸುನಿಲ್ ಸಹೋದರ ಆಗಿರುವ ಸುಜಾ ಕುಶಾಲಪ್ಪಗೆ ಟಿಕೆಟ್ ನೀಡುವ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್ಗೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ಕಳೆದ ಬಾರಿಯ ಚುನಾವಣೆ ವೇಳೆ ಸುಜಾ ಕುಶಾಲಪ್ಪ ಅಭ್ಯರ್ಥಿಯಾಗಿ ಘೋಷಿಸಿದ್ದ ಬಿಜೆಪಿ ಕೊನೆಯ ಕ್ಷಣದಲ್ಲಿ ಸುನೀಲ್ ಸುಬ್ರಮಣಿಗೆ ಟಿಕೆಟ್ ನೀಡಿತ್ತು. ಈ ಬಾರಿ ಸುಜಾ ಕುಶಾಲಪ್ಪ ಅವರಿಗೆ ಟಿಕೆಟ್ ನೀಡುವ ಬಗ್ಗೆ ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ 10ರಂದು ರಾಜ್ಯ ವಿಧಾನ ಪರಿಷತ್ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದೆ. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 10ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಮಾಡಬಹುದಾಗಿದೆ.
ಈ ಬಾರಿ ಬೀದರ್ 1 , ಕಲಬುರ್ಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಮೈಸೂರು ,2, ಚಿಕ್ಕಮಗಳೂರು 1, ಹಾಸನ1, ತುಮಕೂರು 1, ಮಂಡ್ಯ1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1 ಹಾಗೂ ಕೊಡಗು ಜಿಲ್ಲೆಯ ಒಂದು ವಿಧಾನ ಪರಿಷತ್ ಕ್ಷೇತ್ರಕ್ಕೆ ಡಿ. 10ರಂದು ಚುನಾವಣೆ ನಡೆಯಲಿದೆ.
ಜನವರಿ 5ಕ್ಕೆ ತೆರವಾಗುವ ವಿಧಾನ ಪರಿಷತ್ ಸ್ಥಾನಗಳು:
ಬಿಜೆಪಿ: ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಎಂ.ಕೆ. ಪ್ರಾಣೇಶ್ (ಉಪ ಸಭಾಪತಿ)- ಚಿಕ್ಕಮಗಳೂರು ಸ್ಥಳೀಯ ಸಂಸ್ಥೆ ಮಹಾಂತೇಶ್ ಕವಟಗಿಮಠ (ಸರ್ಕಾರಿ ಮುಖ್ಯ ಸಚೇತಕ)-ಬೆಳಗಾವಿ ಸ್ಥಳೀಯ ಸಂಸ್ಥೆ ಬಿ.ಜಿ. ಪಾಟೀಲ್-ಕಲಬುರಗಿ ಸ್ಥಳೀಯ ಸಂಸ್ಥೆ ಪ್ರದೀಪ್ ಶೆಟ್ಟರ್- ಧಾರವಾಡ ಸ್ಥಳೀಯ ಸಂಸ್ಥೆ ಸುನೀಲ್ ಸುಬ್ರಮಣಿ- ಕೊಡಗು ಸ್ಥಳೀಯ ಸಂಸ್ಥೆ
ಪಕ್ಷೇತರ: ವಿವೇಕರಾವ್ ಪಾಟೀಲ್ – ಬೆಳಗಾವಿ ಸ್ಥಳೀಯ ಸಂಸ್ಥೆ
ಕಾಂಗ್ರೆಸ್: ಎಸ್.ಆರ್. ಪಾಟೀಲ್ (ವಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆ ಎಂ. ನಾರಾಯಣಸ್ವಾಮಿ (ವಿಪಕ್ಷ ಮುಖ್ಯ ಸಚೇತಕ)-ಬೆಂಗಳೂರು ಸ್ಥಳೀಯ ಸಂಸ್ಥೆ ಪ್ರತಾಪ್ ಚಂದ್ರ ಶೆಟ್ಟಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಶ್ರೀಕಾಂತ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆ ಶ್ರೀನಿವಾಸ್ ಮಾನೆ- ಧಾರವಾಡ ಸ್ಥಳೀಯ ಸಂಸ್ಥೆ ಧರ್ಮಸೇನ-ಮೈಸೂರು ಸ್ಥಳೀಯ ಸಂಸ್ಥೆ ವಿಜಯ್ ಸಿಂಗ್- ಬೀದರ್ ಸ್ಥಳೀಯ ಸಂಸ್ಥೆ ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆ ಕೆ.ಸಿ. ಕೊಂಡಯ್ಯ-ಬಳ್ಳಾರಿ ಸ್ಥಳೀಯ ಸಂಸ್ಥೆ ಆರ್. ಪ್ರಸನ್ನಕುಮಾರ್- ಶಿವಮೊಗ್ಗ ಸ್ಥಳೀಯ ಸಂಸ್ಥೆ ಎಂ.ಎ. ಗೋಪಾಲಸ್ವಾಮಿ-ಹಾಸನ ಸ್ಥಳೀಯ ಸಂಸ್ಥೆ ಎಸ್. ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆ ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆ ಸುನೀಲ್ ಗೌಡ ಪಾಟೀಲ್- ವಿಜಯಪುರ ಸ್ಥಳೀಯ ಸಂಸ್ಥೆ
ಜೆಡಿಎಸ್: ಎನ್. ಅಪ್ಪಾಜಿ ಗೌಡ (ಜೆಡಿಎಸ್ ಮುಖ್ಯ ಸಚೇತಕ)-ಮಂಡ್ಯ ಸ್ಥಳೀಯ ಸಂಸ್ಥೆ ಸಂದೇಶ್ ನಾಗರಾಜ್-ಮೈಸೂರು ಸ್ಥಳೀಯ ಸಂಸ್ಥೆ ಸಿ.ಆರ್. ಮನೋಹರ್- ಕೋಲಾರ ಸ್ಥಳೀಯ ಸಂಸ್ಥೆ ಕಾಂತರಾಜು- ತುಮಕೂರು ಸ್ಥಳೀಯ ಸಂಸ್ಥೆ.
ಇದನ್ನೂ ಓದಿ: ಡಿ. 10ಕ್ಕೆ ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ; ಜನವರಿ 5ಕ್ಕೆ ತೆರವಾಗಲಿರುವ ಸ್ಥಾನಗಳಿವು
ಕರ್ನಾಟಕ ವಿಧಾನ ಪರಿಷತ್ಗೆ ದ್ವೈವಾರ್ಷಿಕ ಚುನಾವಣೆ ದಿನಾಂಕ ಪ್ರಕಟ, ಡಿಸೆಂಬರ್ನಲ್ಲಿ 25 ಸ್ಥಾನಗಳಿಗೆ ಮತದಾನ