ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಹೊಸ ರೂಪ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ಕಾಂಗ್ರೆಸ್​ ತನ್ನ ಐದು ಗ್ಯಾರಂಟಿ ಯೋಜನೆಗಳಿಗೆ ಹೊಸ ರೂಪ ನೀಡಲು ಮುಂದಾಗಿದ್ದು, ವಿಧಾನಸಭಾ ಕ್ಷೇತ್ರವಾರು ಗ್ಯಾರಂಟಿ ಸಮಾವೇಶ ಆಯೋಜಿಸಲು ತೀರ್ಮಾನಿಸಿದೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಹೊಸ ರೂಪ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ
ಡಿಕೆ ಶಿವಕುಮಾರ್​
Updated By: ರಮೇಶ್ ಬಿ. ಜವಳಗೇರಾ

Updated on: Jan 10, 2024 | 5:37 PM

ಬೆಂಗಳೂರು, (ಜನವರಿ 10): ಮುಂಬರುವ ಲೋಕಸಭಾ ಚುನಾವಣೆಗೆ (Loksabha Elections 2024) ಕಾಂಗ್ರೆಸ್ (Congress) ಸಿದ್ಧತೆ ಆರಂಭಿಸಿದೆ. ವಿಧಾನಸಭೆ ಚುನಾವಣೆಯಂತೆಯೇ ಲೋಕಸಭಾ ಚುನಾವಣೆಯಲ್ಲೂ ಸಹ ಗ್ಯಾರಂಟಿ ಯೋಜನೆಗಳನ್ನು (Congress Guarantee Schemes) ಮುಂದಿಟ್ಟುಕೊಂಡು ಜನರ ಬಳಿ ಹೋಗಲು ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ರಚನೆಗ ನಿರ್ಧರಿಸಲಾಗಿದೆ. ಅಲ್ಲದೇ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ ಆಯೋಜಿಸಲು ತೀರ್ಮಾನಿಸಿದೆ. ಇದರೊಂದಿಗೆ ಲೋಕಸಭಾ ಚುನಾವಣೆಗಾಗಿ ಗ್ಯಾರಂಟಿ ಯೋಜನೆಗಳಿಗೆ ಹೊಸ ರೂಪ ನೀಡಲು ಕೈ ಪಾಳೆಯ ಮುಂದಾಗಿದೆ.

ಇನ್ನು ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಸೆಂಬ್ಲಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ ಆಯೋಜನೆ ಮಾಡುತ್ತೇವೆ. ಉಸ್ತುವಾರಿ ಸಚಿವರು ಕಡ್ಡಾಯವಾಗಿ ಗ್ಯಾರಂಟಿ ಸಮಾವೇಶ ಮಾಡಬೇಕು. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಶೇಕಡಾ 80ರಷ್ಟು ಕುಟುಂಬಕ್ಕೆ ನಮ್ಮ ಗ್ಯಾರಂಟಿ ಯೋಜನೆ ತಲುಪ್ತಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರತಿ ಜಿಲ್ಲೆಗೂ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. 28 ಉಪಾಧ್ಯಕ್ಷರು, MLCಗಳಿಗೂ ಉಸ್ತುವಾರಿ ಜವಾಬ್ದಾರಿ ನೀಡಿದ್ದೇವೆ. ಬ್ಲಾಕ್ ಮಟ್ಟದಲ್ಲೂ ಎಲೆಕ್ಷನ್ ಜವಾಬ್ದಾರಿ ನೀಡಲಾಗುತ್ತದೆ ಎಂದು ವಿವರಿಸಿದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ಯಾರೆಲ್ಲಾ ಇರ್ತಾರೆ? ಏನೆಲ್ಲಾ ಸೌಲಭ್ಯ? ಇಲ್ಲಿದೆ ವಿವರ

ಗ್ಯಾರಂಟಿ ಯೋಜನೆಗಳಿಗೆ ಹೊಸ ರೂಪವನ್ನೇ ಕೊಡುತ್ತಿದ್ದೇವೆ. ನಾಮನಿರ್ದೇಶನಕ್ಕೆ ಅವಕಾಶ ಇರುವ ಕಡೆ ಕಾರ್ಯಕರ್ತರ ನೇಮಕ ಮಾಡಲಾಗುತ್ತದೆ. ಆಶ್ರಮ, ಆಸ್ಪತ್ರೆ ಸಮಿತಿ, ಕೆಡಿಪಿ ಸಮಿತಿಗೆ ಕಾರ್ಯಕರ್ತರ ನೇಮಕವಾಗಲಿದೆ.ಇದರೊಂದಿಗೆ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಅಂತಾ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿ ಡಿಕೆ ಶಿವಕುಮಾರ್, ಜನವರಿ 14ರ ಬಳಿಕ ನಿಗಮ ಮಂಡಳಿಗಳಿಗೆ ಚೇರ್ಮನ್ ಗಳ ನೇಮಕ ಆಗಲಿದೆ. ಹೆಚ್ಚೆಚ್ಚು ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂಬ ತೀರ್ಮಾನವಾಗಿದೆ ಎಂದು ಸ್ಪಷ್ಟಪಡಿಸಿದರು.