ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಪ್ರಕಟವಾಗಿದ್ದು ಪೇಯ್ಡ್​​​ ನ್ಯೂಸ್​​ ಎಂದ ಬಿಜೆಪಿ, ಹಾಗಾದರೆ ನಿಮ್ಮ ಬಗ್ಗೆ ಲೇಖನ ಪ್ರಕಟಿಸಿ ತೋರಿಸಿ ಎಂದ ಎಎಪಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 19, 2022 | 7:01 PM

ಈ ಆರೋಪಗಳನ್ನು ಕೇಳಿದರೆ ನಗು ಬರುತ್ತದೆ ಎಂದಿದ್ದಾರೆ ಆಪ್ ನಾಯಕ ರಾಘವ್ ಚಡ್ಡಾ, ಯಾವುದೇ ಬಿಜೆಪಿ ನಾಯಕನ ಯಾವೊಂದು ಸುದ್ದಿಯೂ ಅದರಲ್ಲಿ ಪ್ರಕಟವಾಗಿಲ್ಲ. ಬಿಜೆಪಿ ಜಗತ್ತಿನಲ್ಲಿ ತಮ್ಮದೇ ದೊಡ್ಡ ಪಕ್ಷ ಎಂದು ಹೇಳುತ್ತಿದೆ.

ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಪ್ರಕಟವಾಗಿದ್ದು ಪೇಯ್ಡ್​​​ ನ್ಯೂಸ್​​ ಎಂದ ಬಿಜೆಪಿ, ಹಾಗಾದರೆ ನಿಮ್ಮ ಬಗ್ಗೆ ಲೇಖನ ಪ್ರಕಟಿಸಿ ತೋರಿಸಿ ಎಂದ ಎಎಪಿ
ನ್ಯೂಯಾರ್ಕ್ ಟೈಮ್ಸ್ - ಕೇಜ್ರಿವಾಲ್
Follow us on

ದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಮನೆ ಮೇಲೆ ಶುಕ್ರವಾರ ಬೆಳಗ್ಗೆ ಸಿಬಿಐ (CBI) ದಾಳಿ ನಡೆಸಿದೆ. ಇದರ ಮಧ್ಯೆಯೇ ದೆಹಲಿಯಲ್ಲಿ ಸಿಸೋಡಿಯಾ ನೇತೃತ್ವದ ಶಿಕ್ಷಣ ಕ್ರಾಂತಿ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ (New York Times) ಪ್ರಕಟವಾದ ಸುದ್ದಿ ಪೇಯ್ಡ್ ನ್ಯೂಸ್ ಎಂದು ಬಿಜೆಪಿ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ಸೌರಭ್ ಭಾರದ್ವಾಜ್, ನೀವು ಅದೆಷ್ಟು ಹಣ ಖರ್ಚು ಮಾಡಿಯಾದರೂ ಸರಿ, ನಿಮ್ಮಲ್ಲಿರುವ ಎಲ್ಲ ಅಧಿಕಾರವನ್ನು ಬಳಸಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ನಿಮ್ಮ ಬಗ್ಗೆ ಲೇಖನ ಪ್ರಕಟಿಸಿ ನೋಡೋಣ, ನಿಮಗೆ ಸಾಧ್ಯವಾದರೆ ಈ ರೀತಿ ಲೇಖನ ಪ್ರಕಟಿಸಿ ಎಂದು ನಾನು ನಿಮಗೆ ಚಾಲೆಂಜ್ ಮಾಡುತ್ತೇನೆ ಎಂದಿದ್ದಾರೆ. ಸಿಸೋಡಿಯಾ ಅವರನ್ನು ಹೈಲೈಟ್ ಮಾಡುವುದಕ್ಕಾಗಿ ಎಎಪಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಲೇಖನ ಪ್ರಕಟಿಸಲಿದೆ ಎಂದು ಹಲವಾರು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಇದೇ ಲೇಖನ ಖಲೀಜ್ ಟೈಮ್ಸ್ ನಲ್ಲಿಯೂ ಪ್ರಕಟವಾಗಿದೆ ಎಂದು ಬಿಜೆಪಿ ಹೇಳಿದೆ. ನ್ಯೂಯಾರ್ಕ್ ಟೈಮ್ಸ್ ಮತ್ತು ಖಲೀಜ್ ಟೈಮ್ಸ್ ಪತ್ರಿಕೆಯ ಲೇಖನಗಳನ್ನು ತೋರಿಸಿ ಮಾಧ್ಯಮದವರ ಮುಂದೆ ಮಾತನಾಡಿದ ಬಿಜೆಪಿ ನಾಯಕ ಪರ್ವೇಶ್ ವರ್ಮಾ, ಇದು ಎರಡೂ ಪತ್ರಿಕೆಗಳ ಫೋಟೊ, ಎರಡೂ ಪತ್ರಿಕೆಗೆ ಒಂದೇ ರಿಪೋರ್ಟರ್, ಒಂದೇ ಲೇಖನ, ಎರಡರಲ್ಲಿರುವ ಪದಗಳೂ ಒಂದೇ, ಫೋಟೊಗಳೂ ಒಂದೇ. ಹೀಗೆ ಯಾವತ್ತಾದರೂ ಆಗಿದೆಯೇ ಎಂದು ಕೇಳಿದ್ದಾರೆ. ಬಿಜೆಪಿಯ ಹಲವು ನಾಯಕರು ಇದೇ ರೀತಿಯ ಆರೋಪವನ್ನು ಮಾಡಿದ್ದಾರೆ.


ಎಎಪಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಮಾತಿನ ವಿಡಿಯೊವನ್ನು ಶೇರ್ ಮಾಡಿದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ನ್ಯೂಯಾರ್ಕ್ ಟೈಮ್ಸ್ ನಲ್ಲಿ ಲೇಖನ ಪ್ರಕಟವಾಗುವುದು ಅಷ್ಟು ಸುಲಭವಲ್ಲ. ಜಾಹೀರಾತಿನಲ್ಲಿ ನೀವು ಸಾರ್ವಜನಿಕರ ದುಡ್ಡನ್ನು ಎಷ್ಟು ಖರ್ಚು ಮಾಡುತ್ತಿದ್ದೀರಿ? ನೀವು ಚೀಫ್ ಮಿನಿಸ್ಟರಾ ಅಥವಾ ಚೀಫ್ ಮಾರ್ಕೆಟರ್? ಎಂದು ಕೇಳಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಆಪ್, ಖಲೀಜ್ ಟೈಮ್ಸ್ ಲೇಖನದಲ್ಲಿ ನ್ಯೂಯಾರ್ಕ್ ಟೈಮ್ಸ್ ಕೃಪೆ ಎಂದು ನೀಡಲಾಗಿದೆ ಎಂದಿದೆ. ಅವರು ನ್ಯಾಷನಲ್ ಟಿವಿಯಲ್ಲಿ ಸುಳ್ಳು ಹೇಳುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಲೇಖನ ಬರೆದದ್ದು ಕರಣ್ ದೀಪ್ ಸಿಂಗ್. ಖಲೀಜ್ ಟೈಮ್ಸ್ ನಲ್ಲಿ ಪ್ರಕಟವಾದ ಲೇಖನದ ಕೆಳಗೆ ಕೃಪೆ ನ್ಯೂಯಾರ್ಕ್ ಟೈಮ್ಸ್ ಎಂದು ಬರೆಯಲಾಗಿದೆ ಎಂದಿದ್ದಾರೆ ಭಾರದ್ವಾಜ್.

ಈ ಆರೋಪಗಳನ್ನು ಕೇಳಿದರೆ ನಗು ಬರುತ್ತದೆ ಎಂದಿದ್ದಾರೆ ಆಪ್ ನಾಯಕ ರಾಘವ್ ಚಡ್ಡಾ, ಯಾವುದೇ ಬಿಜೆಪಿ ನಾಯಕನ ಯಾವೊಂದು ಸುದ್ದಿಯೂ ಅದರಲ್ಲಿ ಪ್ರಕಟವಾಗಿಲ್ಲ. ಬಿಜೆಪಿ ಜಗತ್ತಿನಲ್ಲಿ ತಮ್ಮದೇ ದೊಡ್ಡ ಪಕ್ಷ ಎಂದು ಹೇಳುತ್ತಿದೆ. ಇದು ಅತಿ ಶ್ರೀಮಂತ ಪಕ್ಷ. ನ್ಯೂಯಾರ್ಕ್ ಟೈಮ್ಸ್ ನ್ನು ಖರೀದಿ ಮಾಡಲು ಸಾಧ್ಯವಾಗುತ್ತಿದ್ದರೆ ಅವರು ಅದರ ಮುಖಪುಟದಲ್ಲಿರುತ್ತಿದ್ದರು ಎಂದು ಚಡ್ಡಾ ಹೇಳಿದ್ದಾರೆ.

ಸಿಸೋಡಿಯಾ ಅವರ ಮೇಲೆ ಸಿಬಿಐ ದಾಳಿ ಮಾಡಿದ್ದರ ಬಗ್ಗೆ ಪ್ರತಿಕ್ರಿಸಿದ್ದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷದ ಸಚಿವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಗಳಿದ್ದು ಬಿಜೆಪಿಗೆ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ. ಜಗತ್ತಿನಲ್ಲೇ ಉತ್ತಮ ಶಿಕ್ಷಣ ಸಚಿವರು ಎಂದು ಸಿಸೋಡಿಯಾ ಅವರನ್ನು ಘೋಷಿಸಲಾಗಿದೆ. ಖ್ಯಾತ ಸುದ್ದಿಪತ್ರಿಕೆ ದೆಹಲಿಯ ಶಿಕ್ಷಣ ಕ್ರಾಂತಿ ಬಗ್ಗೆ ವರದಿ ಮಾಡಿದ್ದು ಸಿಸೋಡಿಯಾ ಅವರ ಫೋಟೊವನ್ನೂ ಪ್ರಕಟಿಸಿದೆ. ಕಳೆದ ವರ್ಷ ನ್ಯೂಯರ್ಕ್ ಟೈಮ್ಸ್ ನಲ್ಲಿ ಕೊವಿಡ್​​ನಿಂದಾಗಿ ಜನರು ಸಾಯುತ್ತಿರುವ ಬಗ್ಗೆ ಸುದ್ದಿಯಾಗಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ.


ಕೈಲಾಶ್ ಗೆಹ್ಲೋಟ್ ಮತ್ತು ಸತ್ಯೇಂದರ್ ಜೈನ್ ಮೊದಲಾದ ಸಚಿವರ ಮೇಲೂ ದಾಳಿ ನಡೆದಿತ್ತು. ಆದರೆ ಏನೂ ಸಿಕ್ಕಿಲ್ಲ ಎಂದಿದ್ದಾರೆ ದೆಹಲಿ ಸಿಎಂ. ನಮ್ಮ ಮಿಷನ್​​ನ ದಾರಿಯಲ್ಲಿ ಹಲವಾರು ಅಡಚಣೆಗಳನ್ನು ಮಾಡಲಾಗಿದ. ಸಿಸೋಡಿಯಾ ಅವರ ಮೇಲೆ ಇದೇ ಮೊದಲ ಬಾರಿ ನಡೆದ ದಾಳಿ ಅಲ್ಲ ಇದು. ನನ್ನನ್ನು ಸೇರಿ ನಮ್ಮ ಸರ್ಕಾರದ ಹಲವು ಸಚಿವರ ಮೇಲೂ ದಾಳಿ ನಡೆದಿದೆ. ಆದರೆ ದಾಳಿಯಿಂದ ಅವರಿಗೆ ಏನೂ ಸಿಕ್ಕಿಲ್ಲ, ಏನು ಸಿಗುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

Published On - 6:54 pm, Fri, 19 August 22