“ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ, ಇಲ್ಲವಾದರೆ…”
ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ, ನಮಗೆ ಅಡ್ಡಿ ಪಡಿಸುವುದಾದರೆ ನಿಮ್ಮ ಕಾರ್ಯಕ್ರಮಗಳಿಗೆ ನಾವು ಪ್ರತಿಭಟನೆ ವ್ಯಕ್ತಪಡಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ: ಇತ್ತೀಚಿನ ಬೆಳವಣಿಗೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಎದುರಿಸಲಾಗದು ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಹೇಳಿಕೆ ನೀಡಿದ ಅವರು, ಗೋಬ್ಯಾಕ್ ಎಂದು ಪ್ರತಿಭಟಿಸಿದರೆ ಹೇಗೆ ಬೊಮ್ಮಾಯಿ ಸಾಹೇಬರೆ? ಗೋಬ್ಯಾಕ್ ಎಂದು ಪ್ರತಿಭಟಿಸಿದರೆ ಹೇಗೆ ಕಟೀಲು ಸಾಹೇಬರೆ? ನಾವು ಸರ್ಕಾರಿ ಕಾರ್ಯಕ್ರಮದ ವಿರುದ್ಧ ಧರಣಿಗೆ ಕರೆ ನೀಡಿದರೆ? ಲಂಚದ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಕರೆ ನೀಡಿದರೆ ಹೇಗೆ? ಎಂದು ಪ್ರಶ್ನೆಗಳನ್ನು ಹಾಕುತ್ತಾ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾರೆ. ಹೇಳಿಕೆಗಳ ಬಗ್ಗೆ ಟೀಕೆ ಮಾಡುವುದು ಒಂದು ಪ್ರಜಾಪ್ರಭುತ್ವದ ಭಾಗವಾಗಿದೆ. ನೆರೆ ವೇಳೆ ವಿಪಕ್ಷ ನಾಯಕರಾಗಿ ಭೇಟಿ ನೀಡಿದ್ದಾರೆ. ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಅವರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ, ಬಿಜೆಪಿ ಕಾರ್ಯಕರ್ತರ ಕೊಲೆ ನಡೆಯುತ್ತಿವೆ ಎಂದು ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವಿಧ ಹೇಳಿಕೆಗಳು ನೀಡಲಾಗಿದೆ. ಸರ್ಕಾರ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಅವರ ಸಚಿವರೇ ಹೇಳಿದ್ದಾರೆ. ನಮ್ಮ ಜನರು ನಿಮ್ಮ ಕಾರ್ಯಕ್ರಮಕ್ಕೆ ಪ್ರತಿಭಟಿಸಿದರೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿರುತ್ತದೆ ? ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ, ನಮಗೆ ಅಡ್ಡಿ ಪಡಿಸುವುದಾದರೆ ನಮಗೆ ಬೇರೆ ದಾರಿ ಇಲ್ಲ ನಿಮ್ಮ ಕಾರ್ಯಕ್ರಮಗಳಿಗೆ ನಾವು ಪ್ರತಿಭಟನೆ ವ್ಯಕ್ತಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಮೇಕೆದಾಟು ಸೇರಿದಂತೆ ಅನೇಕ ವಿಚಾರಗಳಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ನಮ್ಮ ವಿರುದ್ಧ ಪ್ರಕರಣಗಳನ್ನು ಹಾಕಿದ್ದೀರಿ, ಆದರೆ ನಿಮ್ಮ ನಾಯಕರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದೀರಿ. ನಮಗೂ ಕಾಲ ಬರುತ್ತದೆ. ಸಚಿವರ ಕಾರ್ಯಕ್ರಮದ ವೇಳೆ ನಾವು ಕಪ್ಪುಬಾವುಟ ಪ್ರದರ್ಶಿಸುವದು ಅನಿವಾರ್ಯ ಆಗಲಿದೆ. ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಜನರು ನರಳುತ್ತಿದ್ದಾರೆ. ವಿಪಕ್ಷ ನಾಯಕರು ಸರ್ಕಾರ ಎಚ್ಚರಿಸುವ ಕರ್ತವ್ಯ ಮಾಡುತ್ತಿದ್ದಾರೆ ಎಂದರು.
ಶಾಸಕ ಬೋಪಯ್ಯನನ್ನು ಬಂಧಿಸಬೇಕು
ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಕಾಂಗ್ರೆಸ್ನವರೇ ಮೊಟ್ಟೆ ಎಸೆದಿದ್ದಾರೆ ಎಂಬ ಹೇಳಿಕೆ ನೀಡಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ಮೊದಲು ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಬಂಧಿಸಬೇಕು. ಸುಳ್ಳಿನ ಮತ್ತೊಂದು ಹೆಸರೇ ಬಿಜೆಪಿ ಹಾಗೂ ಬಿಜೆಪಿ ಶಾಸಕರು. ನಾನು ಮಾಡಿದ್ದರೆ ನಾನು ಎಂದು ಹೇಳಿಕೊಳ್ಳಬೇಕು, ನಮ್ಮ ಕಾರ್ಯಕರ್ತರು ಎಂದು ಹೇಳಿಕೊಳ್ಳಬೇಕು. ಅದುಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಎಂದು ಹೇಳಿದರೆ ಅದು ಹೇಡಿತನ ಎಂದರು.
ವಿರೋಧವಿದ್ದ ಕಡೆ ಸಿದ್ಧರಾಮಯ್ಯ ಯಾಕೆ ಹೋಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ವ್ಯಂಗ್ಯವಾಡಿದ ಡಿಕೆ ಶಿವಕುಮಾರ್, ಓಹೋಹೋ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಲ್ಯಾಂಡ್ ಓನರಾ? ಮಡಿಕೇರಿ ಏನು ಅವರ ಮನೇನಾ ಅದು ? ಎಂದು ಪ್ರಶ್ನಿಸಿದರು. ಮಡಿಕೇರಿ ಚಲೋ ಬಗ್ಗೆ ಮಾತನಾಡಿ, ಕಾಂಗ್ರೆಸ್ನಿಂದ ಮಡಿಕೇರಿ ಚಲೋ ಬಗ್ಗೆ ಇನ್ನೂ ಚರ್ಚಿಸಿಲ್ಲ, ಬೆಂಗಳೂರಿಗೆ ಹೋದ ಬಳಿಕ ಚರ್ಚೆ ಮಾಡುತ್ತೇನೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾವಾಗೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಇಂಧನ ಸಚಿವರಾಗಿದ್ದಾಗ ಒಳ ಒಪ್ಪಂದ, ಅಕ್ರಮ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಡ ಮಾಡದೆ ಸರ್ಕಾರ ತನಿಖೆ ಮಾಡಲಿ, ಕೇವಲ ಹೇಳಿಕೆ ನೀಡದೆ ತನಿಖೆ ಮಾಡಲಿ, ಸಿಬಿಐ, ಇಡಿಗಾದರು ವಹಿಸಿ ತನಿಖೆ ಮಾಡಲಿ. ಹಗ್ಗ, ಸರಪಳಿ ಬೇಕಿದ್ದರೆ ಕಳಿಸುವೆ ಎಂದು ವ್ಯಂಗ್ಯವಾಡಿದರು.
ಸಾವರ್ಕರ್ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ
ಚಿಕ್ಕಮಗಳೂರು: ಬಿಜೆಪಿ, ಆರ್ಎಸ್ಎಸ್ನವರಿಗೆ ನಾವು ಹೆದರಿಕೊಳ್ಳುವುದಿಲ್ಲ. ಅವರು ರಾಜಕೀಯ ಮಾಡಿದರೆ ನಾವೂ ರಾಜಕೀಯ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜಿಲ್ಲೆಯ ಶೃಂಗೇರಿಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನಾವು ಸತ್ಯ ಹೇಳುವುದೇ ತಪ್ಪಾಗಿ ಹೋಗಿದೆ. ಬಿಜೆಪಿಯವರು ನೀಚಮಟ್ಟಕ್ಕೆ ಇಳಿದು ರಾಜಕೀಯ ಮಾಡುತ್ತಿದ್ದಾರೆ. ನಾವು ಬಿಜೆಪಿ, ಆರ್ಎಸ್ಎಸ್ನ ಯಾವುದೇ ಬೆದರಿಕೆಗೆ ಜಗ್ಗಲ್ಲ, ರಾಜಕೀಯವನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ, ಅವರು ಪ್ರತಿಭಟನೆ ಮಾಡಿದರೆ ನಾವು ಕೂಡ ಮಾಡುತ್ತೇವೆ ಎಂದರು. ಸಾವರ್ಕರ್ ಬಗ್ಗೆ ಮಾತನಾಡಿ, ಸಾವರ್ಕರ್ ಕ್ಷಮಾಪಣಾ ಪತ್ರ ಬರೆದುಕೊಟ್ಟು ಜೈಲಿಂದ ಹೊರಬಂದಿದ್ದರು. ಸೂಕ್ಷ್ಮ ಪ್ರದೇಶದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿದ್ಯಾಕೆ ಎಂದಿದ್ದೆ, ನಾನು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Fri, 19 August 22