ನವದೆಹಲಿ: ಎನ್ಡಿಎ ಮೈತ್ರಿಕೂಟದಿಂದ ಜೆಡಿಯು ನಾಯಕ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಹೊರಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಆತಂಕ ಬಿಜೆಪಿ ಕಾಡತೊಡಗಿದೆ. ಇದರ ಮಧ್ಯೆ ನಿತೀಶ್ ಕುಮಾರ್ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಚುನಾವಣಾ ಚಾಣಕ್ಯ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದು. ಮತ್ತೆ ಅವರು ಕಮಲ ಹಿಡಿದರೂ ಆಶ್ಚರ್ಯವಿಲ್ಲ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮಹತ್ವ ಹೇಳಿಕೆ ನೀಡಿದ್ದಾರೆ. ಆದ್ರೆ, ಇದನ್ನು ಜೆಡಿಯು ಅಲ್ಲಗಳೆದಿದ್ದು, ಗೊಂದಲ ಸೃಷ್ಟಿಸಿ ಹಾದಿ ತಪ್ಪಿಸುವ ಹೇಳಿಕೆ ಎಂದು ಕಿಶೋರ್ಗೆ ಟಾಂಗ್ ಕೊಟ್ಟಿದೆ.
‘ಪಲ್ಟೂ ರಾಮ್’ ಅಪಖ್ಯಾತಿ ಹೊಂದಿರುವ ನಿತೀಶ್ ಕುಮಾರ್ ಮೋದಿ ಅಶ್ವಮೇಧ ಕಟ್ಟಿಹಾಕಬಲ್ಲರೆ..!
ಬಿಹಾರದಲ್ಲಿ ಪಾದಯಾತ್ರೆ ನಡೆಯುತ್ತಿರುವ ಪ್ರಶಾಂತ್ ಕಿಶೋರ್, ಜೆಡಿಯು ಸಂಸದ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರ ಮೂಲಕ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದೆ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಪ್ರತಿಕ್ರಿಯೆ ಪಡೆಯಲು ಹರಿವಂಶ್ ಅವರನ್ನು ಸಂಪರ್ಕಿಸಿದೆ. ಆದ್ರೆ, ಈ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ನಿತೀಶ್ ಕುಮಾರ್ ಮತ್ತೆ ಬಿಜೆಪಿಯೊಂದಿಗೆ ಕೈ ಜೋಡಿಸಿಲ್ಲ ಎಂದು ಜೆಡಿಯು ಸ್ಪಷ್ಟಪಡಿಸಿದೆ.
ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದ ಮೈತ್ರಿ ರಚಿಸುವಲ್ಲಿ ಸಕ್ರಿಯರಾಗಿದ್ದಾರೆ. ಇದೇ ಕಾರಣದಿಂದ ಹರಿವಂಶ್ ಅವರು ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳುತ್ತಿಲ್ಲ, ಸಂದರ್ಭ ಬಂದಾಗ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಿ ಅವರೊಟ್ಟಿಗೆ ನಿತೀಶ್ ಕುಮಾರ್ ಕೆಲಸ ಮಾಡಲಿದ್ದಾರೆ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ಆದರೆ, ಪ್ರಶಾಂತ್ ಕಿಶೋರ್ ಹೇಳಿಕೆಯನ್ನು ತಳ್ಳಿ ಹಾಕಿರುವ ಜೆಡಿಯು ವಕ್ತಾರ ಕೆ. ಸಿ ತ್ಯಾಗಿ, ನಿತೀಶ್ ಕುಮಾರ್ 50 ವರ್ಷದಿಂದ ರಾಜಕೀಯದಲ್ಲಿದ್ದಾರೆ. ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಬಂದು ಕೇವಲ ಆರು ತಿಂಗಳಾಗಿದೆ. ಗೊಂದಲ ಸೃಷ್ಟಿಸಲು, ಹಾದಿ ತಪ್ಪಿಸಲು ಅವರು ಇಂತಹ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.