‘ಪಲ್ಟೂ ರಾಮ್’ ಅಪಖ್ಯಾತಿ ಹೊಂದಿರುವ ನಿತೀಶ್ ಕುಮಾರ್ ಮೋದಿ ಅಶ್ವಮೇಧ ಕಟ್ಟಿಹಾಕಬಲ್ಲರೆ..!

ಬಿಹಾರದ ಮುಖ್ಯಮಂತ್ರಿಯಾಗಿದ್ದರೂ ನಿತೀಶ್ ಕುಮಾರ್​ಗೆ ಹಿಂದಿನ ವರ್ಚಸ್ಸು ಉಳಿದಿಲ್ಲ. ಕಳೆದ ಕೆಲವು ವರ್ಷಗಳಿಂದ ಜೆಡಿಯು ಪರಿಸ್ಥಿತಿ ನಿರಂತರವಾಗಿ ಹದಗೆಟ್ಟಿದೆ.

'ಪಲ್ಟೂ ರಾಮ್' ಅಪಖ್ಯಾತಿ ಹೊಂದಿರುವ ನಿತೀಶ್ ಕುಮಾರ್ ಮೋದಿ ಅಶ್ವಮೇಧ ಕಟ್ಟಿಹಾಕಬಲ್ಲರೆ..!
ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 07, 2022 | 8:00 AM

ಬಿಹಾರದ ಮುಖ್ಯಮಂತ್ರಿಯಾಗಿದ್ದರೂ ನಿತೀಶ್ ಕುಮಾರ್​ಗೆ ಹಿಂದಿನ ವರ್ಚಸ್ಸು ಉಳಿದಿಲ್ಲ. ಕಳೆದ ಕೆಲವು ವರ್ಷಗಳಿಂದ ಜೆಡಿಯು ಪರಿಸ್ಥಿತಿ ನಿರಂತರವಾಗಿ ಹದಗೆಟ್ಟಿದೆ. 2010ರಲ್ಲಿ 144ರಲ್ಲಿ 115 ಸ್ಥಾನ ಗಳಿಸಿದ್ದ ಜೆಡಿಯು 2015ರಲ್ಲಿ 71ಕ್ಕೆ ಕುಸಿತ್ತು. 2020ರಲ್ಲಿ 43ಕ್ಕೆ ಕುಸಿದಿದೆ. ಆಗಾಗ ಮೈತ್ರಿ ಬದಲಾವಣೆಯಿಂದ ನಿತೀಶ್ ಕುಮಾರ್ ಇಮೇಜ್ ಕೂಡ ಕುಸಿದಿದೆ. ‘ಪಲ್ಟೂ ರಾಮ್’ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ. ರಾಷ್ಟ್ರರಾಜಕೀಯದಲ್ಲಿ ಕಮಾಲ್ ಮಾಡಬೇಕು ಎಂಬ ಉದ್ದೇಶದಿಂದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಗೆ ನಿತೀಶ್ ಕೈ ಹಾಕಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ವಿರೋಧಪಕ್ಷಗಳು ಸಜ್ಜಾಗುತ್ತಿವೆ. ದೈತ್ಯ ಬಿಜೆಪಿ ವಿರುದ್ಧ ಸೆಣೆಸಾಟಕ್ಕೆ ಅಖಾಡ ಸಜ್ಜುಗೊಳಿಸುತ್ತಿವೆ. ಬಿಜೆಪಿ ಜೊತೆಗಿದ್ದ ಜೆಡಿಯು ನಾಯಕ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಆರ್​ಜೆಡಿ‌, ಕಾಂಗ್ರೆಸ್ ಜತೆ ಸೇರಿ ಸರಕಾರ ರಚಿಸಿದ್ದಾರೆ. ಬಿಜೆಪಿ ಮೈತ್ರಿಯಿಂದ ಜೆಡಿಯು ಹೊರ ಬಂದ ಬಳಿಕ ರಾಷ್ಟ್ರರಾಜಕೀಯದಲ್ಲಿ ನಿತೀಶ್ ಕುಮಾರ್ ಆಕ್ಟೀವ್ ಆಗಿದ್ದಾರೆ. ಎರಡು ದಿನಗಳಿಂದ‌ ದೆಹಲಿಯಲ್ಲಿರುವ ನಿತೀಶ್ ಕುಮಾರ್, ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಡಪಕ್ಷಗಳ ನಾಯಕರು, ಜೆಡಿಎಸ್ ನಾಯಕ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಪ್ರಾಥಮಿಕವಾಗಿ ಚರ್ಚೆ ಶುರುಮಾಡಿದ್ದಾರೆ.

ವಿರೋಧ ಪಕ್ಷದಿಂದ ನಿತೀಶ್ ಪ್ರಧಾನಿ ಹುದ್ದೆಯ ರೇಸ್​ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಬೇರ್ಪಟ್ಟ ನಂತರ ನಿತೀಶ್ ಕುಮಾರ್ ಅವರೇ ಹಲವು ಬಾರಿ 2024ಕ್ಕೆ ಇಡೀ ವಿಪಕ್ಷಗಳನ್ನು ಒಗ್ಗೂಡಿಸುವುದಾಗಿ ಹೇಳಿದ್ದಾರೆ. ಹಾಗಾದರೆ ಕಳೆದ ಚುನಾವಣೆಗಳಲ್ಲಿ ಜೆಡಿಯು ಸಾಧನೆ ಹೇಗಿದೆ? ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ನಿತೀಶ್ ಕುಮಾರ್ ಹೇಗೆ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ? ಮೋದಿ‌ ಎದುರು ವಿಪಕ್ಷಗಳನ್ನು ಸಂಘಟಿಸಲು ಹೊರಟಿರುವ ನಿತೀಶ್ ಶಕ್ತಿ ಏನು..? ಅನ್ನೊದನ್ನು ನೋಡೊಣ..

ಕಳೆದ‌ ವಾರ ಎರಡು ದಿನಗಳ ಕಾಲ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪಾಟ್ನಾದಲ್ಲಿ ನಡೆದಿದೆ. ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪರವಾಗಿ ಬ್ಯಾನರ್​ಗಳು ಮಾಧ್ಯಮಗಳ ಗಮನ ಸೆಳೆದಿದೆ. ನಿತೀಶ್ ಅವರ ಫೋಟೋದೊಂದಿಗೆ ‘ರಾಜ್ಯದಲ್ಲಿ ತೋರಿಸಿದ್ದಾರೆ. ದೇಶದಲ್ಲಿ ತೋರಿಸಲಿದ್ದಾರೆ’ಎಂದು ಬರೆಯಲಾಗಿತ್ತು. 2003 ರಲ್ಲಿ ಅಸ್ತಿತ್ವಕ್ಕೆ ಬಂದ ಸಂಯುಕ್ತ ಜನತಾದಳ ಅಂದರೆ ಜೆಡಿಯು ಪ್ರಸ್ತುತ ಬಿಹಾರ ವಿಧಾನಸಭೆಯಲ್ಲಿ ಒಟ್ಟು 45 ಸದಸ್ಯರನ್ನು ಹೊಂದಿದೆ. ಇದಲ್ಲದೆ, 16 ಲೋಕಸಭೆ ಮತ್ತು ಐದು ರಾಜ್ಯಸಭಾ ಸದಸ್ಯರಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಜೆಡಿಯು ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಬಿಹಾರದಲ್ಲಿ ಜೆಡಿಯು 45 ಶಾಸಕರನ್ನು ಹೊಂದಿದ್ದರೆ, ಅರುಣಾಚಲ ಪ್ರದೇಶದಲ್ಲಿ ಏಳು ಮತ್ತು ಮಣಿಪುರದ ಐವರು ಶಾಸಕರು ನಿತೀಶ್ ಕುಮಾರ್ ಅವರ ಪಕ್ಷವನ್ನು ತೊರೆದಿದ್ದಾರೆ. ಎರಡು ರಾಜ್ಯದಲ್ಲಿ ಜೆಡಿಯು ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಮಣಿಪುರದಲ್ಲಿ ಸಧ್ಯ ಜೆಡಿಯು ಒಬ್ಬರೇ ಶಾಸಕರನ್ನು ಹೊಂದಿದ್ದು. ಅರುಣಾಚಲ ಪ್ರದೇಶದಲ್ಲಿ ಜೆಡಿಯು ಒಬ್ಬನೇ ಒಬ್ಬ ಶಾಸಕನನ್ನು ಹೊಂದಿಲ್ಲ.

ಬಿಹಾರ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಜೆಡಿಯು‌ ಶಕ್ತಿ ಏನು..?

ಬಿಹಾರ ಹೊರತುಪಡಿಸಿ, ಜೆಡಿಯು ಜಾರ್ಖಂಡ್, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯಗಳಲ್ಲಿ ಮಾತ್ರ ಸ್ವಲ್ಪ ಯಶಸ್ಸುಗಳಿಸುತ್ತಿದೆ. 2005ರಲ್ಲಿ ಜಾರ್ಖಂಡ್‌ನಲ್ಲಿ ಜೆಡಿಯು ಆರು ಸ್ಥಾನಗಳನ್ನು ಪಡೆದಿತ್ತು. ಅದು 2009ರಲ್ಲಿ ಎರಡಕ್ಕೆ ಇಳಿದಿತ್ತು. 2014ರಲ್ಲಿ ಮತ್ತು 2019ರಲ್ಲಿ ಜೆಡಿಯು ಜಾರ್ಕಾಂಡ್​​ನಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. 2019 ರ ವಿಧಾನಸಭಾ ಚುನಾವಣೆಯಲ್ಲಿ ಅರುಣಾಚಲ ಪ್ರದೇಶದ 14 ಸ್ಥಾನಗಳಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಏಳರಲ್ಲಿ ಪಕ್ಷ ಗೆದ್ದಿತ್ತು. ಆದರೆ ಗೆದ್ದವರೆಲ್ಲ ಬಿಜೆಪಿ ಸೇರಿದ್ದಾರೆ. ಅದೇ ರೀತಿ ಮಣಿಪುರದಲ್ಲಿ ಈ ವರ್ಷ ನಡೆದ ಚುನಾವಣೆಯಲ್ಲಿ 38 ಸ್ಥಾನಗಳಿಗೆ ಜೆಡಿಯು ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಆರರಲ್ಲಿ ನಿತೀಶ್ ಕುಮಾರ್ ಪಕ್ಷ ಗೆದ್ದಿದೆ. ಈ ಪೈಕಿ ಐವರು ಶಾಸಕರು ಬಿಜೆಪಿ ಸೇರಿದ್ದಾರೆ.

ನಿತೀಶ್ ಪ್ರಧಾನಿಯಾಗುವ ಕನಸು ನೆರವೇರುತ್ತಾ..?

ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಅಭ್ಯರ್ಥಿ ಮಾಡುವ ಕನಸನ್ನು ಆರ್​ಜೆಡಿ ತೋರಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದಿಂದ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಬೇಕು ಎಂಬ ಷರತ್ತಿನ ಮೇಲೆ ಬಿಹಾರದಲ್ಲಿ ಮಹಾಮೈತ್ರಿಕೂಟ ರಚನೆಯಾಗಿರುವ ಸಾಧ್ಯತೆ ಇದೆ. ಆರ್‌ಜೆಡಿ ಹೊರತುಪಡಿಸಿ, ಉತ್ತರ ಪ್ರದೇಶದಿಂದ ಸಮಾಜವಾದಿ ಪಕ್ಷದ ಬೆಂಬಲ ನಿತೀಶ್‌ಗೆ ಸಿಗಲಿದೆ. ನಿತೀಶ್‌ ಕುಮಾರ್​ರನ್ನು ಕೇಂದ್ರದ ರಾಜಕೀಯಕ್ಕೆ ಕಳುಹಿಸುವ ಮೂಲಕ ಬಿಹಾರದ ಅಧಿಕಾರವನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಳ್ಳಲು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಯೋಜನೆ ರೂಪಿಸಿದ್ದಾರೆ.

                                                                                                                                                                ಹರೀಶ್ ಜಿ.ಆರ್