ಸದ್ಯ ರಾಜ್ಯದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದೂವರೆ ತಿಂಗಳಾಯ್ತು. ಸಚಿವ ಸಂಪುಟ ಭರ್ತಿಯಾಗಿ, ಆಯಾ ಇಲಾಖೆಯ ಕಾರ್ಯಗಳು ಚುರುಕುಗೊಂಡ ಬೆನ್ನಲ್ಲಿಯೇ ಈಗ ಕಾಂಗ್ರೆಸ್ ಹೈಕಮಾಂಡ್ ನಿಗಮ, ಮಂಡಳಿ ನೇಮಕಕ್ಕೆ ಕೈ ಹಾಕಿದೆ. ಪ್ರಮುಖ ನಿಗಮಗಳ (corporations and boards) ಅಧ್ಯಕ್ಷ ಹಾಗೂ ಸದಸ್ಯರಾಗೋಕೆ ಈಗಾಗಲೇ ಪೈಪೋಟಿ ಶುರುವಾಗಿದೆ. ಈ ಮಧ್ಯೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ವರಿಷ್ಠರ ಮುಂದೆ ಹೊಸದೊಂದು ಬೇಡಿಕೆ ಇಟ್ಟಿದ್ದಾರೆ. ಏನದು? ಒಂದು ಪಕ್ಷ ಅಧಿಕಾರಕ್ಕೆ ಬಂದಾಗ, ಎಲೆಕ್ಷನ್ ಸೋತವರಿಗೆ ಹಾಗೂ ಚುನಾವಣೆ ವೇಳೆ ಅಸಮಾಧಾನಗೊಂಡವರಿಗೆ ಸಮಾಧಾನ ಮಾಡೋಕೆ ಅಂತಾನೇ ನಿಗಮ, ಮಂಡಳಿಗಳಿಗೆ ನೇಮಕ ಮಾಡೋದು ಸಾಮಾನ್ಯ.
ಹಾಗೆಯೇ ಈಗ ಕಾಂಗ್ರೆಸ್ ಪಕ್ಷವೂ ರಾಜ್ಯದಲ್ಲಿ ಖಾಲಿ ಇರೋ ನಿಗಮ ಮಂಡಳಿಗಳನ್ನು ಭರ್ತಿ ಮಾಡೋಕೆ ಮುಂದಾಗಿದ್ದೇ ತಡ, ಹೊಸಬರಿಗೆ ಮಣೆ ಹಾಕಬೇಡಿ. ನಿಷ್ಠಾವಂತರನ್ನು ಕಡೆಗಣಿಸಬೇಡಿ ಅನ್ನೋ ಕೂಗು ಪಕ್ಷದ ಹಿರಿಯ ಕಾರ್ಯಕರ್ತರಿಂದ ಆಗ್ರಹ ಬಂದಿದೆ. ಧಾರವಾಡದಲ್ಲಿ ( Dharwad Congress) ಪಕ್ಷದ ಪ್ರಮುಖ ಕಾರ್ಯಕರ್ತರೇ ಈ ಬಗ್ಗೆ ಬಹಿರಂಗವಾಗಿ ದನಿ ಎತ್ತಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೆ ಈಗ ನಿಗಮ-ಮಂಡಳಿಗಳಿಗೆ ಅವಕಾಶ ಕೊಡಲೇಬಾರದು. ಅವರು ಪಕ್ಷಕ್ಕಾಗಿ ದುಡಿಯಲಿ, ಬಳಿಕ ಅವಕಾಶ ಪಡೆಯಲಿ ಅನ್ನೋದು ಅವರ ಆಗ್ರಹ. ಕನಿಷ್ಠ ಐದು ವರ್ಷಕ್ಕಿಂತ ಹೆಚ್ಚು ಕಾಲ ಪಕ್ಷದಲ್ಲಿದ್ದು ದುಡಿಯುತ್ತ ಬಂದವರನ್ನೇ ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ನಿರ್ದೇಶಕ, ಸದಸ್ಯರನ್ನಾಗಿ ಮಾಡಬೇಕು ಎಂದು ಕೆಪಿಸಿಸಿ ಸಂಯೋಜಕ ರಾಜು ಎಚ್. ಎಂ ಅವರು ವರಿಷ್ಠರನ್ನು ಆಗ್ರಹಿಸಿದ್ದಾರೆ.
ನಿಗಮ ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಸೂಕ್ತ ಹಾಗೂ ಆರ್ಹರ ಹೆಸರು ಪಟ್ಟಿ ಮಾಡಿ ಕೊಡುವಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಜಿಲ್ಲಾ ಅಧ್ಯಕ್ಷರಿಗೆ ಸೂಚಿಸಿದ್ದಾರಂತೆ. ಅದರಂತೆ ಪಟ್ಟಿಯೂ ಕೂಡ ತಯಾರಾಗಿ ರವಾನೆಯಾಗುತ್ತಿದೆ. ಆದರೆ ಈ ಪಟ್ಟಿಯಲ್ಲಿ ಹೊಸಬರಿಗೆ ಮಣೆ ಹಾಕುತ್ತಿದ್ದಾರೆ ಅನ್ನೋ ಸಂಶಯ ನಿಷ್ಠಾವಂತ ಕಾರ್ಯಕರ್ತರಲ್ಲಿ ಮೂಡಿದೆ. ಇದೇ ಕಾರಣಕ್ಕೆ ಈಗ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇನ್ನು ಈ ಹಿಂದೆ ಕೂಡ ಸರ್ಕಾರ ಇದ್ದಾಗ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ, ಬೆಂಗಳೂರು ಕೇಂದ್ರಿತ ಇಲ್ಲವೇ ಹಳೇ ಮೈಸೂರು ಭಾಗದವರ ಪಾಲಾಗಿತ್ತು. ಉತ್ತರ ಕರ್ನಾಟಕದವರನ್ನು ಕಡೆಗಣಿಸಲಾಗಿತ್ತು. ಹೀಗಾಗಿ ಮತ್ತೆ ಅದೇ ತಪ್ಪು ಆಗದಿರಲಿ, ಪ್ರಮುಖ ಅಧ್ಯಕ್ಷ ಸ್ಥಾನಗಳು ಉತ್ತರ ಕರ್ನಾಟಕಕ್ಕೂ ಸಿಗಲಿ ಅನ್ನೋದು ಧಾರವಾಡದ ಕಾರ್ಯಕರ್ತರ ಆಗ್ರಹ.
ಈ ಸರ್ಕಾರದಲ್ಲಿ ಯಾವುದೇ ಒಂದು ಪ್ರಕ್ರಿಯೆ ಕೂಡ ಸರಳವಾಗಿ ಆಗುತ್ತಿಲ್ಲ. ಒಂದಿಲ್ಲೊಂದು ವಿವಾದ, ಗದ್ದಲ, ಚರ್ಚೆ ನಡೆಯುತ್ತಲೇ ಇದೆ. ಈಗಾಗಲೇ ಗ್ಯಾರಂಟಿ ಯೋಜನೆ ಜಾರಿಯ ಕಸರತ್ತಿನಲ್ಲಿ ಹೈರಾಣಾಗಿ ಹೋಗಿರುವ ಕೈ ವರಿಷ್ಠರಿಗೆ ಈಗ ನಿಗಮ-ಮಂಡಳಿ ನೇಮಕವೂ ಹೊಸ ಸವಾಲಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಅವುಗಳನ್ನು ಮುಖಂಡರು ಹೇಗೆ ನಿವಾರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಧಾರವಾಡ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Fri, 30 June 23