Narendra Modi: ಉತ್ತರ ಪ್ರದೇಶದಲ್ಲೀಗ 16 ವೈದ್ಯಕೀಯ ಕಾಲೇಜು: ಇದು ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಎಂದ ನರೇಂದ್ರ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 25, 2021 | 11:53 AM

ಉತ್ತರ ಪ್ರದೇಶದ ವಿವಿಧೆಡೆ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

Narendra Modi: ಉತ್ತರ ಪ್ರದೇಶದಲ್ಲೀಗ 16 ವೈದ್ಯಕೀಯ ಕಾಲೇಜು: ಇದು ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಎಂದ ನರೇಂದ್ರ ಮೋದಿ
ಪ್ರಧಾನಿ ಮೋದಿ
Follow us on

ಲಖನೌ: ಸ್ವಚ್ಛ, ಸಮೃದ್ಧ ಉತ್ತರ ಪ್ರದೇಶದ ಆಶೋತ್ತರ ಈಡೇರಿಸಲು ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬದ್ಧವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉತ್ತರ ಪ್ರದೇಶದ ವಿವಿಧೆಡೆ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. ಸಿದ್ಧಾರ್ಥನಗರ, ಇಟಾ, ಹರ್ದೋಯಿ, ಪ್ರತಾಪಗಡ, ಫತೇಪುರ, ದೆರಾಯ್, ಘಾಜಿಪುರ, ಮಿರ್ಝಾಪುರ ಮತ್ತು ಜೌನ್​ಪುರ್​ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಲಿವೆ.

ಅನಾರೋಗ್ಯ ಕೇವಲ ಬಡವರಿಗೆ ಮಾತ್ರವಲ್ಲ ಯಾರನ್ನು ಬೇಕಾದರೂ ಕಾಡಬಹುದು. ನಮ್ಮ ಡಬಲ್ ಎಂಜಿನ್ ಸರ್ಕಾರವು ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಸಾವಿರಾರು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಡಯಾಲಿಸಿಸ್ ಮತ್ತು ಹೃದ್ರೋಗ ಚಿಕಿತ್ಸೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಉತ್ತರ ಪ್ರದೇಶ ಮಾತ್ರವಲ್ಲ ಇಡೂಈ ದೇಶದಲ್ಲಿ ಹತ್ತಾರು ಅತ್ಯುತ್ತಮ ಆಸ್ಪತ್ರೆಗಳು ನಮ್ಮ ಸರ್ಕಾರ ಆರಂಭಿಸಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬರುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳಿದ್ದವು. ಈಗ 16 ಕಾಲೇಜುಗಳಿವೆ. ವೈದ್ಯಕೀಯ ಕಾಲೇಜುಗಳಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುವುದು ಮಾತ್ರವಲ್ಲ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿಯೂ ಸಿಗುತ್ತದೆ. ದುರಾದೃಷ್ಟವಶಾತ್ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ದೂರದೃಷ್ಟಿಯ ಯೋಜನೆಗಳನ್ನೇ ರೂಪಿಸಿರಲಿಲ್ಲ ಎಂದು ಹಿಂದಿನ ಸರ್ಕಾರಗಳ ಬಗ್ಗೆ ದೂರಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವೈದ್ಯಕೀಯ ಕಾಲೇಜುಗಳು ಮಾತ್ರವಲ್ಲ ವೈದ್ಯಕೀಯ ಶಿಕ್ಷಣದ ಸೀಟುಗಳನ್ನೂ ಹೆಚ್ಚಿಸಲಾಗಿದೆ. ಉತ್ತರ ಪ್ರದೇಶದ ಬಡ ಕುಟುಂಬದ ಹೆಣ್ಣುಮಗಳೊಬ್ಬಳು ವೈದ್ಯೆಯಾಗಬೇಕು ಎಂದುಕೊಂಡರೆ ಅದು ಈಗ ಅಸಾಧ್ಯವಲ್ಲ. ಕಳೆದ 7 ವರ್ಷಗಳಲ್ಲಿ 60,000 ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೃಜಿಸಲಾಗಿದೆ. ಹೊಸ ತಲೆಮಾರಿನ ಸಾಕಷ್ಟು ವೈದ್ಯರು ಈಗ ವೃತ್ತಿರಂಗ ಪ್ರವೇಶಿಸಿದ್ದಾರೆ. ಅವರ ಸೇವೆಯಿಂದ ದೇಶದ ಜನರ ಆರೋಗ್ಯ ಸುಧಾರಿಸಲಿದೆ ಎಂದು ಮೋದಿ ತಿಳಿಸಿದರು.

ಹಿಂದಿ ಜೊತೆಗೆ ಹಲವು ಭಾರತೀಯ ಭಾಷೆಗಳಲ್ಲಿಯೂ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಸಿಗಲಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತೆ ಆಗಬೇಕು ಎನ್ನುವುದು ನಮ್ಮ ಸರ್ಕಾರದ ನೀತಿ. ಉತ್ತರ ಪ್ರದೇಶದಲ್ಲಿ ಕೊರೊನಾ ಸಂದರ್ಭದಲ್ಲಿಯೂ ಸಾಕಷ್ಟು ಸಾಧನೆಗಳು ಆಗಿವೆ ಎಂದು ಹೇಳಿದರು.

ಉತ್ತರ ಪ್ರದೇಶದ ಪ್ರತಿ ಜಿಲ್ಲೆಯಲ್ಲಿಯೂ ಕೊರೊನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೊರೊನಾ ಲಸಿಕೆ ನೀಡಿಕೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಲು ಉತ್ತರ ಪ್ರದೇಶದ ಕೊಡುಗೆ ದೊಡ್ಡದು. ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್ ಜೊತೆಗೆ ಸಬ್​ ಕಾ ಪ್ರಯಾಸ್ (ಎಲ್ಲರ ಜೊತೆಗೆ, ಎಲ್ಲರ ವಿಕಾಸ ಮತ್ತು ಎಲ್ಲರ ಪರಿಶ್ರಮ) ಸಹ ಅಗತ್ಯ ಎಂದು ಮೋದಿ ಹೇಳಿದರು. ಈವರೆಗೆ ಸಬ್​ ಕಾ ಸಾಥ್-ಸಬ್​ ಕಾ ವಿಕಾಸ್ ಎಂದಷ್ಟೇ ಹೇಳುತ್ತಿದ್ದ ಮೋದಿ ಇದೀಗ ಸಬ್​ ಕಾ ಪ್ರಯಾಸ್ ಎಂದು ಹೊಸ ಪದಗುಚ್ಛವನ್ನು ಜೋಡಿಸಿದ್ದು ಜನರ ಗಮನಸೆಳೆಯಿತು. ಜನರು ಈ ಘೋಷಣೆಯನ್ನು ಪುನರುಚ್ಚರಿಸಿ ಬೆಂಬಲಿಸಿದರು.

ಉತ್ತರ ಪ್ರದೇಶದಲ್ಲಿ 9 ಹೊಸ ವೈದ್ಯಕೀಯ ಕಾಲೇಜುಗಳ ಮೂಲಕ 2,500 ಹಾಸಿಗೆಳ ಆಸ್ಪತ್ರೆಗಳು ಆರಂಭವಾಗಲಿವೆ. ಸುಮಾರು 5000 ಮಂದಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೃತ್ತಿಪರ ತರಬೇತಿ ಸಿಗಲಿದೆ. ಯೋಗಿ ಆದಿತ್ಯನಾಥ್ ಅಧಿಕಾರ ಅವಧಿಯಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಮೋದಿ ನುಡಿದರು.

ಇದನ್ನೂ ಓದಿ: ಚುನಾವಣೆ ಬಿಸಿಯಲ್ಲಿ ಉತ್ತರ ಪ್ರದೇಶ: ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ, ಮೋದಿ ಪ್ರವಾಸ
ಇದನ್ನೂ ಓದಿ: Mann ki Baat: ರಾಷ್ಟ್ರೀಯ ಏಕತಾ ದಿನ ಸಮೀಪಿಸುತ್ತಿದೆ ಎಂದು ನೆನಪಿಸಿದ ಪ್ರಧಾನಿ ಮೋದಿ; ಸರ್ದಾರ್ ವಲ್ಲಭಭಾಯಿ​ ಪಟೇಲ್​​ರಿಗೆ ನಮನ

Published On - 11:30 am, Mon, 25 October 21