Gujarat Election 2022: ಅಹಮದಾಬಾದ್ನಲ್ಲಿ ಇಂದು ಬೃಹತ್ ರೋಡ್‌ಶೋ ನಡೆಸಲಿರುವ ಪ್ರಧಾನಿ ಮೋದಿ
ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಎರಡನೇ ಹಂತದ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಈ ಚುನಾವಣೆಗೆ ಇಂದು ಪ್ರಧಾನಿ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯ (Gujarat Election 2022) ಮೊದಲ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಎರಡನೇ ಹಂತದ ಚುನಾವಣೆಗೂ ಸಕಲ ಸಿದ್ಧತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಅಹಮದಾಬಾದ್ (Ahmedabad)ನಲ್ಲಿ ಕನಿಷ್ಠ 13 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಬೃಹತ್ ರೋಡ್‌ಶೋ (Road Show) ನಡೆಸಲಿದ್ದಾರೆ. ಬಿಜೆಪಿ (BJP) ಪ್ರಕಾರ, ಮೋದಿ ಅವರು ನರೋಡಾ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯ ನರೋದಾ ಗಾಮ್ ಮತ್ತು ನರೋಡಾ ಪಾಟಿಯಾದಿಂದ ತಮ್ಮ ರ್ಯಾಲಿಯನ್ನು ಪ್ರಾರಂಭಿಸುತ್ತಾರೆ.
ರಸ್ತೆ ಮಾರ್ಗವಾಗಿ ಪ್ರಧಾನಿ ಭೇಟಿ ನೀಡಲಿರುವ 35 ಸ್ಥಳಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದು ನರೋಡಾ ಗಾಮ್‌ನಿಂದ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಿ ಸಂಜೆ 6:25 ಕ್ಕೆ ಚಂದಖೇಡಾದಲ್ಲಿ ಕೊನೆಗೊಳ್ಳಲಿದೆ. ನರೋಡಾ, ಥಕ್ಕರ್‌ಬಾಪನಗರ, ಬಾಪುನಗರ, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬ್ಡಾ, ಜಮಾಲ್‌ಪುರ್ ಖಾಡಿಯಾ, ಎಲಿಸ್‌ಬ್ರಿಡ್ಜ್, ವೆಜಾಲ್‌ಪುರ, ಘಟ್ಲೋಡಿಯಾ, ನಾರಣಪುರ, ಸಬರಮತಿ ಮತ್ತು ಗಾಂಧಿನಗರ ದಕ್ಷಿಣದಲ್ಲಿ ರೋಡ್ ಶೋ ನಡೆಯಲಿದೆ.
ನರೋಡಾ ಗಾಮ್, ಥಕ್ಕರ್ಬಾಪನಗರ, ಪಂಡಿತ್ ದೀನದಯಾಳ್ ಉಪಾಧ್ಯಾಯ, ಸುಭಾಷ್ ಚಂದ್ರ ಬೋಸ್ ಮಾರ್ಗದ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪ್ರಧಾನಿಯವರು ಮಾಲಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿಯವರು ಪಂಚಮಹಲ್ ಜಿಲ್ಲೆಯ ಕಲೋಲ್, ಛೋಟಾ ಉದೇಪುರದ ಬೋಡೆಲಿ ಮತ್ತು ಸಬರ್ಕಾಂತ ಜಿಲ್ಲೆಯ ಹಿಮತ್‌ನಗರದಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗುಜರಾತ್ ವಿಧಾನಸಭೆಗೆ ಇಂದು(ಗುರುವಾರ) ಮೊದಲ ಹಂತದ ಮತದಾನ ನಡೆದಿದೆ.ಸೌರಾಷ್ಟ್ರ-ಕಚ್ ಪ್ರದೇಶದ 19 ಜಿಲ್ಲೆಗಳು ಮತ್ತು ರಾಜ್ಯದ ದಕ್ಷಿಣ ಭಾಗಗಳಲ್ಲಿ ಗುರುವಾರ ಒಟ್ಟು 182 ಸ್ಥಾನಗಳ ಪೈಕಿ 89 ಸ್ಥಾನಕ್ಕೆ ಮತದಾನ ನಡೆದಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Assembly Elections) ಮೊದಲ ಹಂತದ ಮತದಾನದಲ್ಲಿ ಸರಿಸುಮಾರು 60.20 ರಷ್ಟು ಮತದಾನವಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Fri, 2 December 22