ಸಿಂದಗಿ ಉಪಚುನಾವಣೆ: ಬಿಜೆಪಿಗೆ ಮುಖ್ಯಮಂತ್ರಿಯ ಆಸರೆ, ಕಾಂಗ್ರೆಸ್​ಗೆ ಅನುಕಂಪದ ನಿರೀಕ್ಷೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ತಂತ್ರ

Sindagi By-Election; ಅಶೋಕ ಮನಗೂಳಿ ಅವರಿಗೆ ನಾಜಿಯಾ ಅಂಗಡಿ ಮೂಲಕ ಪರ್ಯಾಯ ಹುಡುಕಿದ ಜೆಡಿಎಸ್ ಪ್ರಯತ್ನ ಫಲ ನೀಡಿತೆ? ಮೂರೂ ರಾಜಕೀಯ ಪಕ್ಷಗಳ ಚಿಂತನೆ ಹೇಗಿದೆ?

ಸಿಂದಗಿ ಉಪಚುನಾವಣೆ: ಬಿಜೆಪಿಗೆ ಮುಖ್ಯಮಂತ್ರಿಯ ಆಸರೆ, ಕಾಂಗ್ರೆಸ್​ಗೆ ಅನುಕಂಪದ ನಿರೀಕ್ಷೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ತಂತ್ರ
ಸಿಂದಗಿ ವಿಧಾನಸಭಾ ಉಪಚುನಾವಣೆ

ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ನಂತರ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನದಿಂದ ತೆರವಾದ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆಯೇ ಅಂದರೆ, ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ವೇಳೆಯೇ ಮತದಾನ ನಡೆಯಬಹುದು ಎಂಬ ನಿರೀಕ್ಷೆಯಿತ್ತು. ಹೀಗಾಗಿ ಆಡಳಿತರೂಢ ಬಿಜೆಪಿ ಹಾಗೂ ವಿರೋಧಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಉಪಚುನಾವಣೆಗೆ ಪೂರ್ವ ತಯಾರಿ ಮಾಡಿದ್ದವು. ಆದರೆ, ಕೊನೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಲಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳೂ ತಾತ್ಕಾಲಿಕ ವಿರಾಮ ಪಡೆದಿದ್ದವು. ಇದೀಗ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಕಟವಾಗಿರುವ ಕಾರಣ ರಾಜಕೀಯ ಚಟುವಟಿಕೆಗಳು ಮತ್ತೆ ಬಿರುಸುಗೊಂಡಿವೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಸಚಿವ ಲಕ್ಷ್ಮಣ ಸವದಿ, ಮಾಜಿ ಶಾಸಕ ರಮೇಶ ಭೂಸನೂರ, ಶಂಭುಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ, ಚಂದ್ರಶೇಖರ ನಾಗೂರ, ಅಶೋಕ ಅಲ್ಲಾಪುರ ಮುಂತಾದವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದವು. ಕೊನೆಗೂ ರಮೇಶ ಭೂಸನೂರ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಸಿಂದಗಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಸಹೋದರ ಅಶೋಕ ಮನಗೂಳಿ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಲು ಮುಂದಾಗಿದ್ದಾರೆ. ಹೀಗಾಗಿ ಈಗ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಕಣಕ್ಕೆ ಇಳಿಸಿ ಭವಿಷ್ಯ ನೋಡಲು ಮುಂದಾಗಿರುವ ಜೆಡಿಎಸ್​ ಪಾಳಯದಲ್ಲಿ ಹೆಚ್ಚು ಆತ್ಮವಿಶ್ವಾಸ ಕಾಣಿಸುತ್ತಿಲ್ಲ. ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಪಕ್ಷ ಸೇರಿದ್ದು, ಕಾಂಗ್ರೆಸ್ ಬಿ ಫಾರಂನ ಪ್ರಬಲ ಆಕಾಂಕ್ಷಿಯಾಗಿದ್ದರು. ಹೀಗಾಗಿ ತನ್ನ ಸುಪರ್ದಿಯಲ್ಲಿದ್ದ ಕ್ಷೇತ್ರದಲ್ಲಿಯೇ ಹೊಸ ಅಭ್ಯರ್ಥಿಗೆ ಹುಡುಕಾಡುವ ಸ್ಥಿತಿ ಜೆಡಿಎಸ್ ಪಕ್ಷದ್ದಾಗಿತ್ತು.

ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ವಾಸ್ತವವಾಗಿ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ, ರವಿಕಾತ ಪಾಟೀಲರ ಪುತ್ರ ವಿರಾಟ ಪಾಟೀಲ, ವಿಠಲ ಕೊಳ್ಳೂರು, ಮಾಜಿ ಶಾಸಕ ಶರಣಪ್ಪ ಸುಣಗಾರ, ಕಳೆದ ಬಾರಿ ಸೋತಿದ್ದ ಮಲ್ಲಣ್ಣ ಸಾಲಿ, ಮಹಿಳಾ ಆಕಾಂಕ್ಷಿಗಳ ನಿಟ್ಟಿನಲ್ಲಿ ಮಾಜಿ ಸಚಿವ ಹುಲ್ಲಪ್ಪ ಮೇಟಿ ಪುತ್ರಿ ಬಾಯಕ್ಕ ಮೇಟಿ, ವಿಜಯಪುರ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮುಂತಾದವರ ಹೆಸರುಗಳೂ ಕಾಂಗ್ರೆಸ್ಸಿನಲ್ಲಿ ಪ್ರಮುಖವಾಗಿದ್ದವು. ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಅವರೂ ಟಿಕೆಟ್‍ಗಾಗಿ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದರು. ನನಗೆ ಸಿಗದಿದ್ದರೆ ಬೇಡ. ಕೊನೆಯ ಪಕ್ಷ ನನ್ನ ಪುತ್ರ ವಿರಾಟನಿಗಾದರೂ ಟಿಕೆಟ್ ನೀಡಬೇಕು ಎಂದು ರವಿಕಾಂತ ಪಾಟೀಲ ಪ್ರತಿಪಾದನೆ ಮಾಡುತ್ತಿದ್ದರೆಂದು ಬೆಂಗಳೂರಿನಲ್ಲಿ ಮಾತಿಗೆ ಸಿಕ್ಕ ಕೆಲ ಮುಖಂಡರು ಹೇಳಿದ್ದುಂಟು.

ಎಂ.ಸಿ.ಮನಗೂಳಿ ಅವರು 7 ಬಾರಿ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಜೆಡಿಎಸ್‍ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಎರಡೂ ಬಾರಿ ಸಚಿವರಾಗಿದ್ದು ವಿಶೇಷ. ಮನಗೂಳಿ ಅವರು ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದರು. ಅವರ ಪುತ್ರ ಅಶೋಕ ಮನಗೂಳಿಗೆ ಟಿಕೆಟ್ ನೀಡಿದರೆ ಅನುಕಂಪದ ಮತಗಳು ಬರುತ್ತವೆ. ಪಕ್ಷಕ್ಕೆ ಗೆಲುವು ಕಟ್ಟಿಟ್ಟಬುತ್ತಿ ಎಂಬುದು ಜೆಡಿಎಸ್ ಲೆಕ್ಕಾಚಾರವಾಗಿತ್ತು. ಆ ಕುರಿತು ಜೆಡಿಎಸ್ ಮುಖಂಡರು ಅಗತ್ಯ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅಶೋಕ ಮನಗೂಳಿ ಅವರು ಕಾಂಗ್ರೆಸ್ ಸೇರಿ, ಜೆಡಿಎಸ್‍ಗೆ ಆಘಾತ ನೀಡಿದ್ದರು.

ಉಪಚುನಾವಣೆ ಘೋಷಣೆಯ ನಂತರ ಮೂರು ಪಕ್ಷಗಳೂ ಅಳೆದು ಸುರಿದು ಗೆಲುವು ತಂದುಕೊಡಬಲ್ಲ ಅಭ್ಯರ್ಥಿ ಆಯ್ಕೆಗೆ ಚಿಂತನೆ ನಡೆಸುತ್ತಿದ್ದವು. ಬಿಜೆಪಿಯೇ ಈ ಬಾರಿ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ. ಗೆಲುವು ನಮ್ಮದೇ ಎಂದು ಕಾಂಗ್ರೆಸ್‍ನ ಈಶ್ವರ ಖಂಡ್ರೆ ಅವರೂ ಧೈರ್ಯದ ಮಾತನಾಡಿದ್ದಾರೆ. ಆದರೆ ಇಂಥ ಆತ್ಮವಿಶ್ವಾಸದ ಮಾತುಗಳು ಜೆಡಿಎಸ್ ಪಾಳಯದಲ್ಲಿ ಕೇಳಿಬರುತ್ತಿಲ್ಲ. ‘ನಮ್ಮ ಅಭ್ಯರ್ಥಿಯನ್ನು ಅಪಹರಿಸಿದ್ದಾರೆ’ ಎಂದು ಹಲವು ಬಾರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಶೋಕ ಮನಗೂಳಿ ಅವರಿಗೆ ನಾಜಿಯಾ ಅಂಗಡಿ ಮೂಲಕ ಪರ್ಯಾಯ ಹುಡುಕಿದ ಜೆಡಿಎಸ್ ಪ್ರಯತ್ನ ಫಲ ನೀಡಿತೆ? ನಂಜನಗೂಡಿನಲ್ಲಿ ದೇವಾಲಯ ತೆರವಿನ ಬಳಿಕ ಹಿಂದೂ ಸಂಘಟನೆಗಳ ವಿಶ್ವಾಸದ ಬಗ್ಗೆ ಅಪನಂಬಿಕೆ ಮೂಡಿರುವ ಬಿಜೆಪಿ ಎಂಥ ಕಾರ್ಯತಂತ್ರ ರೂಪಿಸಲಿದೆ? ಉಪಚುನಾವಣೆಯ ಗೆಲುವಿನ ಮೂಲಕ ಮುಂದಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಉಪಚುನಾವಣೆಗಳಿಗೆ ಸಿದ್ಧತೆ ಚುರುಕು ಮಾಡಿಕೊಳ್ಳಬೇಕು ಎಂದಿರುವ ಕಾಂಗ್ರೆಸ್​ನ ಆಸೆ ಈಡೇರಲಿದೆಯೇ? ಉತ್ತರ ಸಿಗಲು ಫಲಿತಾಂಶಕ್ಕಾಗಿ ಕಾಯಬೇಕಿದೆ.

Sindagi By election candidates

ಅಶೋಕ್ ಮನಗೂಳಿ, ನಾಜಿಯಾ ಅಂಗಡಿ, ರಮೇಶ್ ಭೂಸನೂರ

ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯು ರಮೇಶ ಭೂಸನೂರ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಪಕ್ಷವು ಅಶೋಕ್ ಮನಗೂಳಿ ಅವರನ್ನು ಹಾಗೂ ಜೆಡಿಎಸ್ ಪಕ್ಷವು ನಾಜಿಯಾ ಅಂಗಡಿ ಅವರನ್ನು ಕಣಕ್ಕಿಳಿಸಿದೆ.

ಮತದಾರರ ವಿವರ
ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,309 ಮತದಾರರಿದ್ದಾರೆ. ಈ ಪೈಕಿ 1,20,949 ಪುರುಷರು, 1,13,327 ಮಹಿಳಾ ಮತದಾರರು ಹಾಗೂ 33 ಇತರೆ ಮತದಾರರು ಮತ ಚಲಾವಣೆಯ ಹಕ್ಕು ಪಡೆದಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದೆ.

ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ ಅಖಾಡಲ್ಲಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ
ಇದನ್ನೂ ಓದಿ: Karnataka Byelection: ಸಿಂದಗಿ, ಹಾನಗಲ್ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ

Click on your DTH Provider to Add TV9 Kannada