Political Analysis: ಮತ್ತೆ ಹಲ್​ ಚಲ್ ಎಬ್ಬಿಸುತ್ತಿದೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಪ್ರತಿಷ್ಠೆಯ ಸಮರ!

| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2022 | 8:52 PM

ಡಿಕೆಶಿವಕುಮಾರ್ ಮಾತು ಕೆರಳಿಸಿದೆ ಎಂಬುದನ್ನು ಸಿದ್ದರಾಮಯ್ಯ ಎಲ್ಲಿಯೂ ತೋರ್ಪಡಿಸಿಲ್ಲ. ಆದರೆ ಇಬ್ಬರು ಘಟಾನುಘಟಿಗಳ ನಡುವಿನ ತಂತ್ರ ಪ್ರತಿತಂತ್ರ ಇಷ್ಟಕ್ಕೇ ನಿಲ್ಲುವ ಲಕ್ಷಣಗಳೂ ಇಲ್ಲ.

Political Analysis: ಮತ್ತೆ ಹಲ್​ ಚಲ್ ಎಬ್ಬಿಸುತ್ತಿದೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಪ್ರತಿಷ್ಠೆಯ ಸಮರ!
ಡಿಕೆ ಶಿವಕುಮಾರ, ಸಿದ್ಧರಾಮಯ್ಯ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಮಳೆ ನಿಂತರೂ ಮಳೆ ಹನಿ ನಿಲ್ಲುತ್ತಿಲ್ಲ. ಸುನಾಮಿ ಅಬ್ಬರಿಸಿ ಸೈಲೆಂಟ್ ಆದ್ರೂ ಅಬ್ಬರದ ಅಲೆಗಳು ತಣ್ಣಗಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಹೋಯ್ತು ಅನ್ನುವ ಹೊತ್ತಿಗೆ ಮತ್ತೊಂದು ಸುತ್ತಿನ ಸಮರಕ್ಕೆ ಕಹಳೆ ಮೊಳಗಿಸಿದಂತೆ ಕಾಣುತ್ತಿದೆ. ಅದು ಕಾಂಗ್ರೆಸ್ ಬಿಜೆಪಿ ನಡುವಿನ ವಾರ್ ಅಲ್ಲ, ಕಾಂಗ್ರೆಸ್ ಜೆಡಿಎಸ್ ಪಕ್ಷದ ನಡುವಿನ ವಾರ್ ಕೂಡ ಅಲ್ಲ. ಇದು ಸ್ವತಃ ಕಾಂಗ್ರೆಸ್ ಪಕ್ಷದಲ್ಲಿ ಒಳಗಿಂದ ಒಳಗೇ ನಡೆಯುತ್ತಿರುವ ವಾರ್ ಇದು. ತಣ್ಣಗಿದ್ದ ಪಕ್ಷದಲ್ಲಿ ಮತ್ತೆ ಹಲ್​ ಚಲ್ ಎಬ್ಬಿಸಿರುವುದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಪ್ರತಿಷ್ಟೆಯ ಸಮರ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯಿಂದ ಜಿಲ್ಲೆಗೆ ಓಡಾಡುತ್ತಿದ್ದಾರೆ. ಡಿಕೆಶಿವಕುಮಾರ್ ಎದುರಲ್ಲಿ ಇರುವ ಮೊಟ್ಟ ಮೊದಲ ಟಾಸ್ಕ್ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಾಯತ್ರೆಯನ್ನು ಯಶಸ್ವಿಗೊಳಿಸುವುದು. ಭಾರತ್ ಜೊಡೋ ಪಾದಯಾತ್ರೆ ಸಕ್ಸಸ್ ಆದ್ರೆ ಸಹಜವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್​ಗೆ ಮತ್ತಷ್ಟು ಬಲ ಸಿಗುತ್ತದೆ ಎಂಬ ಲೆಕ್ಕಾಚಾರ. ಆದ್ರೆ ಅದ್ಯಾಕೋ ಏನೋ ಡಿಕೆ ಶಿವಕುಮಾರ್​ಗೆ ಅವರ ಸ್ಪೀಡ್​ಗೆ ತಕ್ಕಂತೆ ಸಹಕಾರವೇ ಸಿಗ್ತಿಲ್ಲ. ಶಾಸಕರು ಪದಾಧಿಕಾರಿಗಳು ಉಪಾಧ್ಯಕ್ಷರು ನಿರೀಕ್ಷಿತ ಮಟ್ಟದಲ್ಲಿ ಸಹಕಾರವನ್ನೇ ಕೊಡ್ತಿಲ್ಲ. ಇದು ನಾವು ಹೇಳ್ತಿರೋ ಮಾತಲ್ಲ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುತ್ತಿರುವ ಮಾತು. ಹೀಗಾಗಿ ಕಾಂಗ್ರೆಸ್ ಪಕ್ಷದ ಒಳಗೇ ಕೇಳಿ ಬರುತ್ತಿರುವ ಮಾತು- ಭಾರತ್ ಜೋಡೋ ಜೊತೆಜೊತೆಗೆ ರಾಜ್ಯ ಕಾಂಗ್ರೆಸ್ ಜೋಡೋ ಸಮಯವೂ ಬಂದಿದೆ ಎನ್ನೋದು.

ಸಿದ್ದರಾಮಯ್ಯ ಟೀಂ ನಿರೀಕ್ಷಿತ ಮಟ್ಟದಲ್ಲಿ ಡಿಕೆಶಿವಕುಮಾರ್​ಗೆ ಸಾಥ್ ಕೊಡ್ತಿಲ್ಲ ಅನ್ನೋದು ಅವರ ಮಾತಿನಿಂದಲೇ ವ್ಯಕ್ತವಾಗುತ್ತಿದೆ. ಸ್ವತಃ ಹಿರಿಯ ನಾಯಕ ಆರ್​ ವಿ ದೇಶಪಾಂಡೆಯವರನ್ನೇ ಗುರಿಯಾಗಿಟ್ಟುಕೊಂಡು ಡಿಕೆ ಶಿವಕುಮಾರ್ ಆರೋಪ ಮಾಡಿದರು. ಆರ್​ ವಿ ದೇಶಪಾಂಡೆಗೆ ಭಾರತ್​ ಜೋಡೋ ಯಾತ್ರೆಗೆ ಜನರನ್ನು ಕಳಿಹಿಸಲು ಸೂಚಿಸಿದ್ದೆ. ಆದರೆ ಅವರೇ ಜನರನ್ನು ಕಳುಹಿಸಿಲು ಸಾಧ್ಯವಿಲ್ಲ ಅಂತಿದ್ದಾರೆ. ರಾಹುಲ್​ ಗಾಂಧಿ ಕಾರ್ಯಕ್ರಮಕ್ಕೇ ಸಹಕಾರ ನೀಡದೇ ಹೋದರೆ ಏನು ಉಪಯೋಗ ಅನ್ನೋ ಮಾತು ಡಿಕೆ ಶಿ ಬಾಯಿಂದ ಬಂದಿತ್ತು. ಅದನ್ನೂ ಕೂಡ ಸ್ವಲ್ಪ ಗರಂ ಆಗಿಯೇ ಡಿಕೆಶಿವಕುಮಾರ್ ಹೇಳಿದ್ದರು.

ಆರ್​ ವಿ ದೇಶಪಾಂಡೆ ಸಿದ್ದರಾಮಯ್ಯನವರ ಪಾಳಯದಲ್ಲಿ ಗುರುತಿಸಿಕೊಂಡಿರುವ ನಾಯಕ. ಡಿಕೆ ಶಿವಕುಮಾರ್ ಕಾರ್ಯಾಧ್ಯಕ್ಷರಾಗಿದ್ದ ವೇಳೆಯಲ್ಲಿ ಆರ್ ವಿ ದೇಶಪಾಂಡೆ ಕರ್ನಾಟಕ ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದವರು. ಇದೀಗ ಆರ್ ವಿ ದೇಶಪಾಂಡೆ ಸಿದ್ದರಾಮೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷ ಕೂಡ ಆಗಿದ್ದು ಸಿದ್ದರಾಮೋತ್ಸವಕ್ಕೆ ಭರ್ಜರಿ ಜನರನ್ನು ಸೇರಿಸುವಲ್ಲಿ ಕೈ ಜೋಡಿಸಿದ್ದರು. ಇಂತಹ ಹಿರಿಯ ನಾಯಕರು ಸಿದ್ದರಾಮೋತ್ಸವದ ಮುಂದಾಳತ್ವದ ವಹಿಸಿದವರು ಇದೀಗ ಭಾರತ್ ಜೋಡೋ ವಿಚಾರದಲ್ಲಿ ಸುಮ್ಮನಾಗುತ್ತಿರುವುದು ಡಿಕೆ ಶಿವಕುಮಾರ್ ಕೆರಳುವಂತೆ ಮಾಡಿದೆ. ಡಿಕೆ ಶಿವಕುಮಾರ್ ಕೇವಲ ಆರ್ ವಿ ದೇಶಪಾಂಡೆಯವರನ್ನು ಮಾತ್ರ ಟಾರ್ಗೆಟ್ ಮಾಡಿಲ್ಲ. ಬದಲಿಗೆ ಸಿದ್ದರಾಮೋತ್ಸವ ಕಾರ್ಯಕ್ರಮದ ಮುಂಚೂಣೀಯಲ್ಲಿದ್ದ ಬಸವರಾಜ ರಾಯರೆಡ್ಡಿಗೂ ಡಿಕೆಶಿ ಕುಟುಕಿದ್ದಾರೆ. ಸಿದ್ದರಾಮೋತ್ಸವದಲ್ಲಿ ಲಕ್ಷಾಂತರ ಮಂದಿ ಸೇರಿದ್ದಾಗ ಟ್ರಾಪಿಕ್ ಮ್ಯಾನೇಜ್ಮೆಂಟ್ ಸರಿ ಆಗಲಿಲ್ಲ. ಅದನ್ನು ನೋಡಿ ಫ್ರೀಡಂ ಮಾರ್ಚ್ ಪಾದಯಾತ್ರೆಯಲ್ಲಿ ಅದ್ಭುತವಾಗಿ ಟ್ರಾಪಿಕ್ ಸಮಸ್ಯೆ ಬಗೆಹರಿಸಿದೆವು. ಮೇಕೇದಾಟು ಪಾದಾಯತ್ರೆ ಕೂಡ ಮಾದರಿ ಪಾದಯಾತ್ರೆಯಾಗಿತ್ತು ಅನ್ನೋ ಮೂಲಕ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಟೀಂಗೆ ಕುಟುಕಿದ್ದಾರೆ.

ಸಿದ್ದರಾಮೋತ್ಸವಕ್ಕಿಂತ ತಾನು ಆಯೋಜಿಸಿದ ಮೇಕೇದಾಟು ಹಾಗೂ ಪ್ರೀಡಂ ಮಾರ್ಚ್ ಅತ್ಯುತ್ತಮವಾಗಿತ್ತು ಅನ್ನೋ ಮೆಸೇಜ್ ಡಿಕೆಶಿವಕುಮಾರ್ ಮಾತುಗಳಲ್ಲಿದೆ. ಸಿದ್ದರಾಮೋತ್ಸವ ಹಾಗೂ ಸಿದ್ದರಾಮಯ್ಯ ಟೀಂ ಗುರಿಯಾಗಿಸಿಕೊಂಡೇ ಡಿಕೆಶಿ ಹೀಗೆ ಮಾತನಾಡಿದ್ದರೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕೆಲವರು ತಮಗೆ ಸಹಕಾರ ಕೊಡ್ತಿಲ್ಲ ಅನ್ನುವ ಮಾತನ್ನೂ ಡಿಕೆಶಿ ಹೇಳಿದ್ದಾರೆ. ಕೆಲವರು ಸಹಕಾರ ಕೊಟ್ಟರೆ ಕೆಲವರು ಸಹಕಾರ ನೀಡ್ತಿಲ್ಲ. ಯಾರು ಕೆಲಸ ಮಾಡ್ತಿಲ್ಲ ಅವರ ಮಾಹಿತಿ ಎಲ್ಲ ನಮ್ಮ ಬಳಿ ಇದೆ ಎಂಬ ಡಿಕೆಶಿ ವಾರ್ನಿಂಗ್ ಇಡೀಗ ಕಾಂಗ್ರೆಸ್ ಪಾಳಯದಲ್ಲಿ ಅಕ್ಷರಶಃ ಕಿಡಿ ಹೊತ್ತಿಸಿದೆ. ಹೀಗೆ ಡಿಕೆ ಶಿವಕುಮಾರ್ ಹೇಳುವುದಕ್ಕೆ ಕಾರಣವಾದ ಘಟನೆ ಕಳೆದ ವಾರವೂ ನಡೆದಿದೆ.

ಸೆ.13 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಆಯೋಜನೆಯಾಗಿದ್ದ ಹೊಟೇಲ್​ನಲ್ಲಿಯೇ ಭಾರತ್ ಜೋಡೋ ಸಭೆ ಕೂಡ ಆಯೋಜನೆಯಾಗಿತ್ತು. ಸಿದ್ದರಾಮಯ್ಯ ಶಾಸಕಾಂಗ ಸಭೆಗೆ ಬರುವ ಮೊದಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ 22 ಮಂದಿ ಮಾಜಿ ಸಚಿವ, ಮಾಜಿ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದರು. ಈ ಭಾರತ್ ಜೋಡೋ ಸಭೆಗೆ ತೆರಳಲು ಸಿದ್ದರಾಮಯ್ಯ ಮೊದಲು ನಿರಾಕರಿಸಿದ್ದಾರೆ. ಭಾರತ್ ಜೋಡೋ ಸಭೆಗೆ ತಮಗೆ ಕರೆದೇ ಇಲ್ಲ ತಾನ್ಯಾಕೆ ಬರಲಿ ಅಂತ ಕ್ವಶ್ಚನ್ ಮಾಡಿ ಗರಂ ಆಗಿದ್ದಾರೆ. ಕೊನೆಗೆ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಗೂ ಅಜಯ್ ಸಿಂಗ್ ಸಮಜಾಯಿಷಿ ಕೊಟ್ಟ ಬಳಿಕವಷ್ಟೇ ಸಿದ್ದರಾಮಯ್ಯ ಭಾರತ್ ಜೋಡೋ ಮೀಟಿಂಗ್ ಅಟೆಂಡ್ ಮಾಡಿದ್ದಾರೆ.
ಇಲ್ಲಿಂದ ಶುರುವಾದ ಭಾರತ್ ಜೋಡೋ ಕಿರಿಕ್ ಕಾಂಗ್ರೆಸ್ ಪಾಳಯದಲ್ಲಿ ಎರಡನೇ ಅಧ್ಯಾಯ ಶುರುವಾಗುವಂತೆ ಮಾಡಿದೆ.

ಕಾಂಗ್ರೆಸ್ ಪಾಳಯದಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವಿನ ಸಮರ ಇವತ್ತು ನಿನ್ನೆಯದಲ್ಲ. ಹಾಗಂತ ಅದು ತಕ್ಷಣಕ್ಕೆ ಮುಗಿಯುವ ಲಕ್ಷಣಗಳೂ ಇಲ್ಲ. ಸಿದ್ದರಾಮಯ್ಯ ಒಂದು ತೂಕವಾದರೆ ಡಿಕೆಶಿವಕುಮಾರ್ ಇನ್ನೊಂದು ತೂಕ ಎಂಬಂತೆ ಪ್ರತಿಷ್ಟೆಯ ಸಮರ ಶುರುವಾಗಿಯೇ ಇದೆ. ಇದರ ಮತ್ತೊಂದು ಸ್ಟೆಪ್ ಟಿಕೆಟ್ ಹಂಚಿಕೆ ವಿಚಾರ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ಗೆ ಪಕ್ಷದಲ್ಲಿ ತಾವೇ ಪ್ರಬಲ ಎಂಬ ಭಾವನೆ ಇದೆ. ಸಿದ್ದರಾಮಯ್ಯ ಸುತ್ತ ಶಾಸಕರು ಪಂಗಡವೇ ಪಹರೆ ಇದ್ದರೆ ಸಿದ್ದರಾಮಯ್ಯಗೆ ತಾನು ಮಾಜಿ ಸಿಎಂ ಹೀಗಾಗಿ ಮುಂಬರುವ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೇಟ್ ಕೊಡಿಸುವ ಮಹತ್ವದ ಹೊಣೆಗಾರಿಕೆ ತಂತ್ರಗಾರಿಕೆ ಎದುರಾಗಿದೆ.

ಆದರೆ ಇದಕ್ಕೇ ಹೊಡೆತ ಕೊಟ್ಟಿರುವ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಬಣದ ಹಾಲಿ ಶಾಸಕರು ಸಿದ್ದರಾಮಯ್ಯ ಸುತ್ತಮುತ್ತ ತಿರುಗುವ ಮಾಜಿ ಶಾಸಕರಿಗೇ ಗುನ್ನಾ ಇಡುವ ಎಚ್ಚರಿಕೆ ನೀಡಿದ್ದಾರೆ. ಯಾರು ಕೆಲಸ ಮಾಡೋದಿಲ್ಲ ಅಂತಹ ಶಾಸಕರಿಗೆ ಯಾಕ್ರಿ ಟಿಕೇಟ್ ಕೊಡಬೇಕು ಅಂತ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದು ಕೇವಲ ಮದುವೆ ಕಾರ್ಯಕ್ರಮ ಸರ್ಕಾರಿ ಟೇಪ್ ಕಟ್ಟಿಮಾಡಿಕೊಂಡು ಕೂತರೆ ಆಗೋದಿಲ್ಲ, ನಂಬರ್ ಬೇಕು ತನಗೆ ಅನ್ನೋ ಖಡಕ್ ಮಾತುಗಳನ್ನಾಡಿದ್ದಾರೆ. ಡಿಕೆ ಶಿವಕುಮಾರ್ ಹೀಗೆ ಹೇಳುವ ಮೂಲಕ ಹಲವು ಮಂದಿ ಹಾಲಿ ಶಾಸಕರ ಕಣ್ಣು ಗಿರಗಿಟ್ಟಲೆ ಆಡುವಂತೆ ಮಾಡಿದ್ದಾರೆ. ಜೊತೆಗೆ ಪಕ್ಷದ ವಲಯದಲ್ಲಿ ಮುಚ್ಚಿದ ಲಕೋಟೆ ವಿಚಾರ ಕೂಡ ಸಂಚಲನ ಮೂಡಿಸುತ್ತಿದೆ.

ಯಾರು ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ ಕೆಲಸ ಯಾರು ಮಾಡ್ತಿಲ್ಲ ಅನ್ನೋ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಟ್ಟು ಎಐಸಿಸಿಗೆ ನೀಡಿ. ಅದನ್ನು ನಾನೂ ನೋಡುವುದಿಲ್ಲ, ವಿರೋಧ ಪಕ್ಷದ ನಾಯಕರೂ ನೋಡೋದಿಲ್ಲ ಯಾರಿಗೆ ಟಿಕೇಟ್ ನೀಡಬೇಕು ನೀಡಬಾರದು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಹೇಳಿದವರಿಗೆಲ್ಲ ಕೇಳಿದವರಿಗೆ ಟಿಕೇಟ್ ನೀಡಲು ಸಾಧ್ಯವಿಲ್ಲ. ಟಿಕೇಟ್ ನೀಡುವ ವಿಚಾರಕ್ಕೆ ತನ್ನದೂ ಮರ್ಜಿ ಕಾಯಲೇಬೇಕು ಅನ್ನೋ ಗಟ್ಟಿ ಮೆಸೇಜ್ ಇದರಲ್ಲಿದೆ.

ಎಲ್ಲವೂ ತಣ್ಣಗಾಯಿತು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಅನ್ನುವಷ್ಟರಲ್ಲಿ ಡಿಕೆ ಹೇಳಿದ ಅಸಹಕಾರದ‌ ಮಾತುಗಳು ನೆಲಬಾಂಬ್​ನಂತೆ ಕಾಣಿಸುತ್ತಿದೆ. ಅಷ್ಟಕ್ಕೂ ಸಿದ್ದರಾಮಯ್ಯ ಜೊತೆಗೆ ಸಂಧಾನಕ್ಕೆ ಹೋದಂತೆ ಕಾಣುತ್ತಿದ್ದ ಡಿಕೆಶಿವಕುಮಾರ್ ಹೀಗೆ ದಿಡೀರನೇ ಮತ್ತೆ ವರಸೆ ಬದಲಿದ್ಯಾಕೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವಿನ ಸಮರವನ್ನು ನೋಡಿದವರು ಯಾರೂ ಸಮಾಧಾನವಾಗಿ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್​ಗೆ ಪೂರಕವಾದ ವಾತಾ ವರಣ ಕಂಡು ಬರುತ್ತಿದೆ. ಎಲ್ಲವೂ ತಮ್ಮ ಪರವಾಗಿಯೇ ಇರುವಾಗ ಮತ್ತೆ ಡಿಕೆಶಿ ಸಿದ್ದರಾಮಯ್ಯ ಟೀಂ ವಿರುದ್ದ ಯಾಕೆ ಸೆಣಸಾಡುತ್ತಿದ್ದಾರೆ ಎನ್ನೋ ಪ್ರಶ್ನೆ ಮೂಡುತ್ತಿದೆ.

ಸಿದ್ದರಾಮಯ್ಯರನ್ನು ಹಾಗೂ ಡಿಕೆಶಿವಕುಮಾರ್​ರನ್ನು ಒಂದುಗೂಡಿಸುವ ಪ್ರಯತ್ನ ಕೆಲ ದಿನಗಳ ಹಿಂದೆ ನಡೆದಿತ್ತು. ಸಿದ್ದರಾಮಯ್ಯ ಆಪ್ತರು ಬೆಂಬಲಿಗರು ಡಿಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯರನ್ನು ಒಂದೇ ಕಡೆ ಕೂರಿಸಿ ಗೊಂದಲಗಳಿಗೆಲ್ಲ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. ಸಿದ್ದರಾಮೋತ್ಸವದ ಬಳಿಕ ಕೊಂಚ ಡಿಕೆ ಶಿವಕುಮಾರ್ ತಾವೇ ತಣ್ಣಗಾದಂತೆ ಕಾಣಿಸುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಡಿಕೆಶಿ ಮತ್ತೆ ತಮ್ಮ ಕೈಗೆ ಆಯುಧ ಎತ್ತಿಕೊಂಡು ಝಳಪಿಸಿದ್ದಾರೆ.

ಡಿಕೆಶಿಯ ಇಂಥ ಅಗ್ರೆಸ್ಸಿವ್ ಆಟಕ್ಕೆ ಕಾರಣ ಏನು..?

ಸಿದ್ದರಾಮಯ್ಯ ಟೀಂನ್ನು ಸುಮ್ಮನೆ ಬಿಟ್ಟರೆ ತಮ್ಮ ಮಹದಾಸೆಗೆ ಕೊಡಲಿ ಪೆಟ್ಟು ಗ್ಯಾರಂಟಿ. ಸಿದ್ದರಾಮಯ್ಯ ಎಲ್ಲವನ್ನೂ ಆಪೋಶನ ತೆಗೆದುಕೊಂಡಂತೆ ಪಕ್ಷದಲ್ಲಿ ಪ್ರಬಲರಾಗುತ್ತಿದ್ದಾರೆ. ಹೀಗೆ ಮುಂದುವರಿದರೆ ಸಿದ್ದರಾಮಯ್ಯ ಟಿಂ ತಮ್ಮ ಹಿಡಿತದಿಂದ ಕೈ ತಪ್ಪಿಹೋಗಬಹುದು. ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಕೇವಲ ಸಿದ್ದರಾಮಯ್ಯ ಟೀಂಗೆ ಮಾತ್ರ ಅವಕಾಶ ನೀಡಬಾರದು. ಸಿದ್ದರಾಮಯ್ಯ ಮುಂದುವರಿಯಲು ಬಿಟ್ಟರೆ ತಮ್ಮ ಸಿಎಂ ಸ್ಥಾನದ ಆಸೆಯನ್ನು ಬದಿಗಿಡಬೇಕು. ಪಕ್ಷಕ್ಕೆ ದುಡಿಯುವುದು ತಾನು ಸಿಎಂ ಆಗುವುದು ಇನ್ಯಾರೋ ಎಂಬುದನ್ನು ಅರಗಿಸಿಕೊಳ್ಳಲು ಅಸಾಧ್ಯ. ಚುನಾವಣೆ ಟಿಕೇಟ್ ಹಂಚಿಕೆಯಲ್ಲಿ ಸಡಿಲತನ ತೋರಿಸಿದರೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗೌರವ ಇರೋದಿಲ್ಲ.

ಎಲ್ಲವನ್ನೂ ಸಿದ್ದರಾಮಯ್ಯ ಹೇಳಿದಂತೆ ಕೇಳಿದರೆ ತಮ್ಮ ಬೆಂಬಲಿಗರಿಗೆ ಟಿಕೇಟ್ ಕೊಡಿಸಲು ಸಾಧ್ಯವಿಲ್ಲ. ಟಿಕೇಟ್ ಹಂಚಿಕೆ ವಿಚಾರವನ್ನು ಈಗಿನಿಂದಲೇ ಹಿಡಿತದಲ್ಲಿ ಇಟ್ಟುಕೊಂಡರೆ ಸಿದ್ದರಾಮುಯ್ಯರನ್ನು ಕಟ್ಟಿ ಹಾಕಬಹುದು. ಹೀಗೆ ಇಷ್ಟೆಲ್ಲ ಲೆಕ್ಕಾಚಾರಗಳೊಂದಿಗೆ ಡಿಕೆಶಿವಕುಮಾರ್ ಸಿದ್ದರಾಮಯ್ಯ ವಿರುದ್ದ ಸಮರ ಸಾರಿದ್ದಾರೆ. ಆದರೆ ಸದ್ಯಕ್ಕೆ ಸಿದ್ದರಾಮಯ್ಯ ಇದ್ಯಾವುದಕ್ಕೂ ರಿಯಾಕ್ಟ್ ಮಾಡ್ತಿಲ್ಲ. ತನಗೂ ಡಿಕೆಶಿವಕುಮಾರ್ ಮಾತು ಕೆರಳಿಸಿದೆ ಎಂಬುದನ್ನು ಸಿದ್ದರಾಮಯ್ಯ ಎಲ್ಲಿಯೂ ತೋರ್ಪಡಿಸಿಲ್ಲ. ಆದರೆ ಇಬ್ಬರು ಘಟಾನುಘಟಿಗಳ ನಡುವಿನ ತಂತ್ರ ಪ್ರತಿತಂತ್ರ ಇಷ್ಟಕ್ಕೇ ನಿಲ್ಲುವ ಲಕ್ಷಣಗಳೂ ಇಲ್ಲ.

ವರದಿ: ಪ್ರಸನ್ನ ಗಾಂವ್ಕರ್ ಟಿವಿ9 ಬೆಂಗಳೂರು