AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಿಖೆಯ ಹಾದಿಯಲ್ಲೇ ಮಂಗಮಾಯವಾಗಿದ್ದ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಆರೋಪಗಳಿಗೆ ದಾಖಲೆಯ ನೀರೆರೆಯುತ್ತದಾ ಹಾಲಿ ಬಿಜೆಪಿ ಸರ್ಕಾರ!

ಸೋಮವಾರ ಮುಂದುವರಿಯಲಿರುವ ಅಧಿವೇಶನದ ಅವಧಿಯಲ್ಲಿ ಪೊಲೀಸ್ ಇಲಾಖೆಯ ಪಿಎಸ್ಐ ನೇಮಕಾತಿ ಹಗರಣವನ್ನು ವಿರೋಧ ಪಕ್ಷ ಕಾಂಗ್ರೆಸ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಆಗ ಬಹುಶಃ ಬಿಜೆಪಿ ಕಾಂಗ್ರೆಸ್ ಸರ್ಕಾರದ ಅವಧಿಯ ಆರೋಪಗಳ ಗುರಾಣಿ ಹಿಡಿದುಕೊಂಡು ಕಾಂಗ್ರೆಸ್ ಅನ್ನು ಸೆಣಸಬಹುದು.

ತನಿಖೆಯ ಹಾದಿಯಲ್ಲೇ ಮಂಗಮಾಯವಾಗಿದ್ದ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಆರೋಪಗಳಿಗೆ ದಾಖಲೆಯ ನೀರೆರೆಯುತ್ತದಾ ಹಾಲಿ ಬಿಜೆಪಿ ಸರ್ಕಾರ!
ತನಿಖೆಯ ಹಾದಿಯಲ್ಲೇ ಮಂಗಮಾಯವಾಗಿದ್ದ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಆರೋಪಗಳಿಗೆ ದಾಖಲೆಯ ನೀರೆರೆಯುತ್ತದಾ ಹಾಲಿ ಬಿಜೆಪಿ ಸರ್ಕಾರ!
TV9 Web
| Updated By: ಸಾಧು ಶ್ರೀನಾಥ್​|

Updated on: Sep 18, 2022 | 6:06 AM

Share

ಎದುರಾಳಿಯನ್ನು ಸೋಲಿಸಬೇಕು ಅಂದರೆ ಎದುರಾಳಿಯನ್ನು ಗೊಂದಲಕ್ಕೀಡು ಮಾಡಬೇಕು. ಸದ್ಯ ಬಿಜೆಪಿ ಪಕ್ಷ ಬಳಸುತ್ತಿರುವ ತಂತ್ರಗಾರಿಕೆಯೂ ಇದೇ ಮಾಡೆಲ್. ಕಾಂಗ್ರೆಸ್ ಪಕ್ಷವನ್ನು ಮಣಿಸುವುದೋ ಇಲ್ಲವೋ ಎಂಬುದನ್ನು ತಿಳಿಯಲು ಮುಂದಿನ ಚುನಾವಣೆವರೆಗೆ ಕಾಯಬೇಕು. ಆದರೆ ಸದ್ಯಕ್ಕೆ ಕಾಂಗ್ರೆಸ್ ಪಕ್ಷವನ್ನು ಗಾಬರಿಗೊಳಿಸುವ ಕೆಲಸವನ್ನಂತೂ ಬಿಜೆಪಿ ಮಾಡಲು ಹೊರಟಿದೆ.

ವಿಧಾನಸಭಾ ಅಧಿವೇಶನ ಪ್ರಾರಂಭವಾದಾಗ ಕಾಂಗ್ರೆಸ್ ಬಳಿ ಬಿಜೆಪಿಯನ್ನು ಕಟ್ಟಿಹಾಕಲು ಹತ್ತಾರು ಅಸ್ತ್ರಗಳಿತ್ತು. ಅದರಲ್ಲಿ ಭ್ರಷ್ಟಾಚಾರದ ಆರೋಪ ವಿಚಾರ ಕೂಡ ಪ್ರಮುಖವಾಗಿತ್ತು. 40 % ಕಮಿಷನ್ ಆರೋಪ, ವಿವಿಧ ನೇಮಕಾತಿಗಳಲ್ಲಿ ಅಕ್ರಮ ಆರೋಪ ಯಾವಾಗ ಕಾಂಗ್ರೆಸ್ ನ ಅಸ್ತ್ರವಾಯಿತೋ ಬಿಜೆಪಿ ಪ್ರತ್ಯಾಸ್ತ್ರವನ್ನು ಕಾಂಗ್ರೆಸ್ ಕಡೆಗೆ ಬಿಡಲಾರಂಬಿಸಿದೆ‌. ಅದರ ಒಂದೆರಡು ಸ್ಯಾಂಪಲ್ ಗಳೂ ಕೂಡ ಕಾಂಗ್ರೆಸ್ ಕಡೆ ಬಾಣದಂತೆ ಹೊರಟಿವೆ.‌

ಸಿದ್ದರಾಮಯ್ಯ ಸಿಎಂ ಆಗಿದ್ದ 2013-18 ರ ಅವಧಿ ಭ್ರಷ್ಟಾಚಾರ ಮುಕ್ತ ಕಾಲವೇ‌ನೂ ಆಗಿರಲಿಲ್ಲ. ಸಿದ್ದರಾಮಯ್ಯ ಅದ್ಬುತ ಆಡಳಿತಗಾರ ಎಂಬುದು ಎಷ್ಟು ಸತ್ಯವೋ ಅವರ ಕಾಲದಲ್ಲೂ ಕಿಕ್ ಬ್ಯಾಕ್, ಹಗರಣ, ಅಕ್ರಮ ನೇಮಕಾತಿ, ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು ಕೇಳಿ ಬಂದಿದ್ದವು. ಅಂತಹ ಆರೋಪಗಳೇ ಇವತ್ತು ಬಿಜೆಪಿ ಪಾಲಿಗೆ ಡೈವರ್ಟ್ ಟ್ಯಾಕ್ಟಿಕ್ಸ್ ತಂತ್ರಗಾರಿಕೆಯ ಭಾಗವಾಗಿ ಸಿಕ್ಕಿದೆ.

ಸಿದ್ದರಾಮಯ್ಯ ಕಾಲದಲ್ಲಿ ಕೇಳಿ ಬಂದಿದ್ದ ಆರೋಪಗಳನ್ನು ಮರು ತನಿಖೆಗೆ ಒಳಪಡಿಸುವ ನಿರ್ಧಾರಗಳನ್ನು ಬಿಜೆಪಿ ಸರ್ಕಾರ ಮೂರೂವರೆ ವರ್ಷದ ಬಳಿಕ ಈಗ ಕೈಗೆತ್ತಿಕೊಂಡಿದೆ. ಅರ್ಕಾವತಿ ಬಡಾವಣೆ ರೀಡು ನೋಟಿಫಿಕೇಷನ್ ಹಗರಣ, ಸೋಲಾರ್ ಘಟಕ ನಿರ್ಮಾಣದಲ್ಲಿ ಹಗರಣ ಆರೋಪ, ಸೋಲಾರ್ ಘಟಕ ಟೆಂಡರ್ ಹಂಚಿಕೆಯಲ್ಲಿ ಆರೋಪ, ವಿದ್ಯುತ್ ಖರೀದಿಯಲ್ಲಿ ಅಕ್ರಮ ಆರೋಪ, ಹಾಸ್ಟೆಲ್ ಗಳ ಹಾಸಿಗೆ ದಿಂಬು ಖರೀದಿಯಲ್ಲಿ ಹಗರಣ ಆರೋಪ, ಅಕ್ರಮ ಮರಳು ಗಣಿಗಾರಿಕೆ, ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪಗಳು ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಆರೋಪಗಳಿಗೆ ಅವತ್ತಿನ ಸಿದ್ದರಾಮಯ್ಯ ಸರ್ಕಾರ ಕೂಡ ತುತ್ತಾಗಿತ್ತು. ಕೆಲವು ಹಗರಣಗಳ ಆರೋಪಗಳು ತನಿಖೆಯ ಹಾದಿಯಲ್ಲೇ ಮಂಗಮಾಯವಾಗಿದ್ದರೆ ಇನ್ನುಳಿದ ಆರೋಪಗಳಿಗೆ ದಾಖಲೆ ಬಿಡುಗಡೆ ಆಗಬೇಕಿದೆ.

ಸದ್ಯ ಬಿಜೆಪಿ ಪಕ್ಷ ಕಾಂಗ್ರೆಸ್ ವಿರುದ್ದ ಗುರಾಣಿಯಾಗಿ ಇದೇ ಆರೋಪಗಳ ಪಟ್ಟಿಯನ್ನು ಹಿಡಿದಿಟ್ಟುಕೊಂಡಿದೆ.‌ ಸಿದ್ದರಾಮಯ್ಯ ನವರ ದುಬಾರಿ ವಾಚು ಮತ್ತೆ ಮುನ್ನೆಲೆಗೆ ಬರುತ್ತಿದೆ. ಸಿದ್ದರಾಮಯ್ಯ ಬಳಿ ಕಿಕ್ ಬ್ಯಾಕ್ ರೂಪದಲ್ಲಿ ಪಡೆದುಕೊಂಡ ಲಕ್ಷಾಂತರ ಮೌಲ್ಯದ ಎಂಟು ರೋಲೆಕ್ಸ್ ವಾಚ್ ಗಳಿವೆ ಅಂತ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ. ಅಂದರೆ ಸಿದ್ದರಾಮಯ್ಯ ಹಿಂದೆ ಕಟ್ಟಿದ್ದ ಹೂಬ್ಲೆಟ್ ವಾಚ್ ಕಿಕ್ ಬ್ಯಾಕ್ ರೂಪದಲ್ಲಿ ಪಡೆದುಕೊಂಡಿದ್ದು ಎಂಬ ಗಂಭೀರ ಆರೋಪ ಕೇಳಿ ಬಂದು ಸಿದ್ದರಾಮಯ್ಯ ತೀವ್ರ ಮುಜುಗರ ಅನುಭವಿಸಿದ್ದರು. ಅದೇ ಮಾದರಿಯ ರಾಜಕೀಯ ಆರೋಪ ವಾಚ್ ವಿಷಯದಲ್ಲಿ ಮತ್ತೆ ಕೇಳಿಬರುತ್ತಿದೆ.

ಅರ್ಕಾವತಿ ಬಡಾವಣೆ ನಿರ್ಮಾಣದ ವೇಳೆ ಅಕ್ರಮವಾಗಿ ಡೀನೋಟಿಫಿಕೇಷನ್ ಮಾಡಲಾಗಿದೆ ಎಂಬುದು ಮತ್ತೊಂದು ಅಸ್ತ್ರ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅರ್ಕಾವತಿ ಬಡಾವಣೆಯ ಕೆಲವು ಭಾಗಗಳನ್ನು ಡಿನೋಟಿಫೈ ಮಾಡಿದ್ದರು. ಇದರಲ್ಲಿ ಉದ್ಯಮಿಗಳಿಗೆ ನೆರವಾಗುವ ರೀತಿಯಲ್ಲಿ ಡಿನೋಟಿಫೈ ಆಗಿದ್ದು ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಕೊನೆಗೆ ಸಿದ್ದರಾಮಯ್ಯ ಸರ್ಕಾರ ನ್ಯಾ. ಕೆಂಪಣ್ಣ ನೇತೃತ್ವದಲ್ಲಿ ತನಿಖೆಯನ್ನು ಮಾಡಿಸಿದ್ದು ಸತ್ಯವಾದರೂ, ತನಿಖಾ ವರದಿ ಇನ್ನೂ ಕಣ್ಣಿಗೆ ಕಾಣದೆ ಕೊಳೆಯುತ್ತಿದೆ. ನ್ಯಾ. ಕೆಂಪಣ್ಣ ತನಿಖಾ ವರದಿಯನ್ನು ಹೊರಗೆ ಎಳೆದು ಸಿದ್ದರಾಮಯ್ಯ ಸುತ್ತ ಹೆಣೆಯಲು ಬಿಜೆಪಿ ಸಜ್ಜಾಗಿದೆ.

ಪಾವಗಡ ಸೋಲಾರ್ ಘಟಕ ನಿರ್ಮಾಣದ ಅಕ್ರಮ ಆರೋಪ ಸುತ್ತಿಕೊಳ್ಳುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಗಲಿಗೆ. ಅದೇ ರೀತಿ ದುಬಾರಿ ಹಣ ನೀಡಿ ಕಲ್ಲಿದ್ದಲ್ಲು ಹಾಗೂ ವಿದ್ಯುತ್ ಖರೀದಿ ಆರೋಪಕ್ಕೂ ಮತ್ತೆ ಜೀವ ಬರುವ ಸಾಧ್ಯತೆ ಇದೆ.

ಇನ್ನು ಶಿಕ್ಷಕರ ನೇಮಕಾತಿ ಅಕ್ರಮ ಆರೋಪದ ಮರು ತನಿಖೆಗೆ ಈಗಾಗಲೇ ಸಿಐಡಿಗೆ ಸರ್ಕಾರ ವಹಿಸಿದ್ದು ಸಿದ್ದರಾಮಯ್ಯ ಅವಧಿಯಲ್ಲಿ 14 ಮಂದಿ ಶಿಕ್ಷಕರು ನಕಲಿ ದಾಖಲೆ ಸೃಷ್ಟಿಸಿ ನೇಮಕಗೊಂಡಿರುವುದು ಬಯಲಾಗಿದೆ.

ಇನ್ನುಳಿದಂತೆ ಹಾಸ್ಟೆಲ್ ಗಳ ಹಾಸಿಗೆ ದಿಂಬು ಖರೀದಿ ವಿಚಾರವೂ ಕೂಡ ಬಿಜೆಪಿ ಪಾಲಿಗೆ ಸರ್ಪಾಸ್ತ್ರದ ರೀತಿ ಕಾಣುತ್ತಿದೆ. ಬಹುತೇಕ ಸೋಮವಾರ ಮುಂದುವರಿಯಲಿರುವ ಅಧಿವೇಶನದ ಅವಧಿಯಲ್ಲಿ ಪೊಲೀಸ್ ಇಲಾಖೆಯ ಪಿಎಸ್ಐ ನೇಮಕಾತಿ ಹಗರಣವನ್ನು ವಿರೋಧ ಪಕ್ಷ ಕಾಂಗ್ರೆಸ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಆಗ ಬಹುಶಃ ಬಿಜೆಪಿ ಕಾಂಗ್ರೆಸ್ ಸರ್ಕಾರದ ಅವಧಿಯ ಆರೋಪಗಳ ಗುರಾಣಿ ಹಿಡಿದುಕೊಂಡು ಕಾಂಗ್ರೆಸ್ ಅನ್ನು ಸೆಣಸಬಹುದು.

ಬಿಜೆಪಿ ಹೀಗೆ ಹಳೆಯ ಆರೋಪಗಳನ್ನು ಪೋಸ್ಟ್ ಮಾರ್ಟಂ ಮಾಡುತ್ತಿರುವುದು ಕೇವಲ ಅಧಿವೇಶನದಲ್ಲಿ ಕೇಳಿ ಬರುವ ಆರೋಪಗಳಿಗೆ ಹೆದರಿಕೊಂಡಲ್ಲ. ಮುಂದಿನ ಚುನಾವಣೆ ತನಕವೂ ಬಿಜೆಪಿಯ ವಿರುದ್ದ ಕಾಂಗ್ರೆಸ್ ಅಕ್ರಮ ಭ್ರಷ್ಟಾಚಾರ ಆರೋಪಗಳ ಸುರಿಮಳೆ ಸುರಿಸುತ್ತಲೇ ಇರುತ್ತದೆ ಎಂಬುದು ಖಚಿತ. ಹಾಗೆ ಕಾಂಗ್ರೆಸ್ ಅಟ್ಯಾಕ್ ಮಾಡಿದಾಗೆಲ್ಲ ಕಾಂಗ್ರೆಸ್ ಅನ್ನು ಹಿಮ್ಮೆಟ್ಟಿಸುವುದಕ್ಕೆ ಬಿಜೆಪಿಗೆ ಇದೊಂದನ್ನು ಬಿಟ್ಟು ಬೇರೆ ದಾರಿ ಇಲ್ಲ -ಪ್ರಸನ್ನ ಗಾಂವ್ಕರ್, ಟಿವಿ9, ಬೆಂಗಳೂರು