ದೆಹಲಿ: ಬಿಜೆಪಿ, ಟಿಎಂಸಿ, ಡಿಎಂಕೆ ಸೇರಿದಂತೆ ಹಲವು ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆಗೆ ಏರಲು ನೆರವಾಗಿದ್ದ ಖ್ಯಾತ ರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೊಸ ಪಕ್ಷವನ್ನು ಘೋಷಿಸುವ ಮಹತ್ವ ನಿರ್ಧಾರ ಪ್ರಕಟಿಸಿದ್ದಾರೆ. ಹೊಸ ಪಕ್ಷದ ಹೆಸರನ್ನು ನೋಂದಣಿ ಮಾಡಿರುವ ಅವರು, ಬಿಹಾರದಿಂದಲೇ ಆರಂಭ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸುಧಾರಣೆಗೆ ಹಲವು ಸಲಹೆಗಳನ್ನು ನೀಡಿದ್ದ ಅವರಿಗೆ ಕಾಂಗ್ರೆಸ್ ನಾಯಕರಿಂದ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಅಸಾಧ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಅವರ ಮುಂದಿನ ನಡೆದ ಏನಿರಬಹುದು ಎಂಬ ಬಗ್ಗೆ ಕುತೂಹಲ ವ್ಯಕ್ತವಾಗಿತ್ತು. ಇದೀಗ ಎಲ್ಲ ಕುತೂಹಲಗಳಿಗೆ ತೆರೆ ಎಳೆದಿರುವ ಪ್ರಶಾಂತ್ ಕಿಶೋರ್ ಸ್ವಂತ ರಾಜಕೀಯ ಪಕ್ಷ ಘೋಷಿಸುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.
‘ಎಲ್ಲರನ್ನೂ ಒಳಗೊಳ್ಳುವ ಅರ್ಥಪೂರ್ಣ ಪ್ರಜಾಪ್ರಭುತ್ವ ಮತ್ತು ಜನಸ್ನೇಹಿ ನೀತಿ ರೂಪಿಸುವ ನನ್ನ ಪ್ರಯತ್ನದ ಫಲವಾಗಿ 10 ವರ್ಷಗಳ ತಡೆಯಿಲ್ಲದ ಆಡಳಿತಕ್ಕೆ ಅವಕಾಶಕ್ಕೆ ಮುನ್ನಡಿ ಬರೆಯಿತು. ಈಗ ನಾನು ಪುಟ ತಿರುವಿಹಾಕಿದಂತೆ ಪ್ರಜಾಪ್ರಭುತ್ವದ ನಿಜವಾದ ಮಾಲೀಕರಾದ ಜನರ ಬಳಿಗೆ ಹೋಗಬೇಕಿದೆ. ವಿಚಾರಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಜನ್ ಸುರಾಜ್ (ಜನರಿಂದ ಉತ್ತಮ ಆಡಳಿತ) ಸ್ಥಾಪಿಸಲು ಇದು ಸರಿಯಾದ ಸಮಯ ಎಂದುಕೊಂಡಿದ್ದೇನೆ. ಬಿಹಾರದಿಂದ ಈ ಪ್ರಯತ್ನ ಆರಂಭವಾಗಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
My quest to be a meaningful participant in democracy & help shape pro-people policy led to a 10yr rollercoaster ride!
As I turn the page, time to go to the Real Masters, THE PEOPLE,to better understand the issues & the path to “जन सुराज”-Peoples Good Governance
शुरुआत #बिहार से
— Prashant Kishor (@PrashantKishor) May 2, 2022
ಕಳೆದ ವರ್ಷ ಇದೇ ದಿನ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜಯಗಳಿಸಿತ್ತು. ಟಿಎಂಸಿ ಪರವಾಗಿ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್ ಮಮತಾರ ಮುಖ್ಯ ಎದುರಾಳಿಯಾಗಿದ್ದ ಬಿಜೆಪಿಯು 100 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಹೇಳಿದ್ದರು. ಒಂದು ವೇಳೆ ನನ್ನ ಮಾತು ಸುಳ್ಳಾದರೆ ರಾಜಕೀಯದಿಂದಲೇ ದೂರವಾಗುತ್ತೇನೆ ಎಂದು ಹೇಳಿದ್ದರು. ಆದರೆ ಅವರ ಹೇಳಿಕೆ ನಿಜವಾಗಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮರಳಿ ಅಧಿಕಾರ ಹಿಡಿಯಿತು.
ನಂತರದ ದಿನಗಳಲ್ಲಿ ಕಾಂಗ್ರೆಸ್ ಜೊತೆಗೆ ಕೆಲಸ ಮಾಡಲು ಪ್ರಶಾಂತ್ ಕಿಶೋರ್ ಮುಂದಾಗಿದ್ದರು. ಅವರ ಸಲಹೆಗಳಿಗೆ ಕಾಂಗ್ರೆಸ್ನಿಂದ ಪೂರಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇದೀಗ ಸ್ವಂತ ರಾಜಕೀಯ ಪಕ್ಷ ಘೋಷಿಸಲು ಪ್ರಶಾಂತ್ ನಿರ್ಧರಿಸಿದ್ದಾರೆ. ಬಿಹಾರದಲ್ಲಿ ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಪಕ್ಷಗಳೊಂದಿಗೆ ಚರ್ಚಿಸುವ ಮೂಲಕ ತಮ್ಮ ಪಕ್ಷದ ಮುಂದಿನ ನಡೆಯನ್ನು ಸೂಚಿಸಲಿದ್ದಾರೆ.
ಇದನ್ನೂ ಓದಿ: ನನಗಿಂತ ಹೆಚ್ಚಾಗಿ ಪಕ್ಷಕ್ಕೆ ನಾಯಕತ್ವ, ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ: ಪ್ರಶಾಂತ್ ಕಿಶೋರ್
Published On - 10:16 am, Mon, 2 May 22