ಬೆಳಗಾವಿ: ಒಂದು ಕಡೆ ಷರತ್ತು ವಿಧಿಸಿ 200 ಯುನಿಟ್ ವಿದ್ಯುತ್ ಉಚಿತ, ಇನ್ನೊಂದೆಡೆ ವಿದ್ಯುತ್ ದರ ಏರಿಕೆ (Power tariff hike). ಒಟ್ಟಾರೆಯಾಗಿ ವಿದ್ಯುತ್ ವಿಚಾರದಲ್ಲಿ ಜನರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದ ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಕಾಂಗ್ರೆಸ್ನವರು ಹೆಸ್ಕಾಂ ಮೇಲೆ ದೊಡ್ಡ ಹೊರೆ ಹಾಕಿದ್ದರು. ಒಟ್ಟು ಬಿಲ್ನಲ್ಲಿ 50 ಪರ್ಸೆಮಟ್ ಬಿಲ್ ಸರ್ಕಾರದಿಂದ ಬರುತ್ತದೆ. ಹಳೇ ಬಾಕಿ ಅಂತಾ ಪುಕ್ಕಟೆ ಹೊರಯನ್ನು ಜನರ ಮೇಲೆ ಹಾಕಿದ್ದರು ಎಂದರು.
200 ಯುನಿಟ್ ವರೆಗೆ ವಿದ್ಯುತ್ ಉಚಿತ ಅಂತ ಭರವಸೆಕೊಟ್ಟು ಅಧಿಕಾರಕ್ಕೇರಿದ ನಂತರ ಷರತ್ತುಗಳನ್ನು ವಿಧಿಸಿದ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿದ ಬೊಮ್ಮಾಯಿ, ಕಾಂಗ್ರೆಸ್ನವರು ರಾಜ್ಯದ ಜನರನ್ನು ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದಾರೆ. ಎಷ್ಟು ವಿದ್ಯುತ್ ಬಳಕೆ ಮಾಡಬೇಕೆಂಬ ಅಧಿಕಾರ ಪ್ರತಿ ಪ್ರಜೆಗಿದೆ. ಇವರು ಸರಾಸರಿ ಲೆಕ್ಕದಲ್ಲಿ ಗ್ರಾಹಕರು ಬಳಸುವ ವಿದ್ಯುತ್ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ ಎಂದು ಹೇಳಿದರು.
ನಾನು ಸಿಎಂ ಆಗಿದ್ದಾಗ ದೊಡ್ಡ ಪ್ರಮಾಣದ ಅನುದಾನ ನೀಡಿದ್ದೆ. 13 ಸಾವಿರ ಕೋಟಿ ರೂಪಾಯಿ ನೀಡಿ ಅದಕ್ಕೆ ಪುನಶ್ಚೇತನ ನೀಡಿದ್ದೆವು. ಕಾಂಗ್ರೆಸ್ ಪಕ್ಷಕ್ಕೆ ಇದು ಗೊತ್ತಿಲ್ಲಾ ಅಂತೇನಿಲ್ಲಾ ಎಂದು ಹೇಳಿದ ಬೊಮ್ಮಾಯಿ, ಇದು ಜನರಿಗೆ ಮಾಡಿರುವ ಒಂದು ದೋಖಾ. ಕಾಂಗ್ರೆಸ್ ಸರ್ಕಾರ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದನ್ನ ಮಾಡುತ್ತಿದೆ ಎಂದರು.
ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡುವುದಾಗಿ ಹೇಳಿದ ಸಚಿವರ ಬಗ್ಗೆ ಮಾತನಾಡಿದ ಬೊಮ್ಮಾಯಿ, ಸಚಿವರು ಯಾವ ಉದ್ದೇಶ ಇಟ್ಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಗೋ ಹತ್ಯೆ ನಿಷೇಧ ಕಾನೂನು ತಂದಿರುವ ಉದ್ದೇಶ ಗೋ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಅಂತ. ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿದರೆ ಕಾಂಗ್ರೆಸ್ಗೆ ಆಪತ್ತು ಕಾದಿದೆ. ಈ ಸರ್ಕಾರಕ್ಕೆ ಅಧಿಕಾರದ ಅಮಲು ಬಂದಿದೆ. ಪ್ರತಿಯೊಬ್ಬ ವ್ಯಕ್ತಿಯ ವಾಕ್ ಸ್ವಾತಂತ್ರ್ಯ ಮೊಟಕು ಗೊಳಿಸುತ್ತಿದ್ದಾರೆ. ಅತೀ ಶೀಘ್ರದಲ್ಲಿ ಕರ್ನಾಟಕದಲ್ಲಿ ಎಮರ್ಜೆನ್ಸಿ ಬರುತ್ತದೆ. ನಾವು ವಿರೋಧ ಪಕ್ಷವಾಗಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಯಾರನ್ನ ಜೈಲಿಗೆ ಹಾಕುತ್ತೀರೋ ಹಾಕಿ ನಿಮಗೆ ಜೈಲುಗಳು ಸಾಕಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಚುನಾವಣೆ ವೇಳೆ ತಡವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೆವು. ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದು ಸಂಯೋಜನೆ ಆಗಲಿಲ್ಲ. ಸ್ಥಳೀಯವಾಗಿಯೂ ಸಹ ಕೆಲವು ತೊಂದರೆ ಆಗಿದೆ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಬೆಳಗಾವಿಯಲ್ಲೂ ಬಿಜೆಪಿ ಸೋಲಿಗೆ ನಾನೇ ಹೊಣೆ ಹೊರುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂಬ ವಿನಯ್ ಕುಲಕರ್ಣಿ ಹೇಳಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೆ ಅತ್ಯಂತ ಹೆಚ್ಚು ಲಿಂಗಾಯತ ಶಾಸಕರು ಆರಿಸಿ ಬಂದಿದ್ದರು. ಅವರುಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಒಬ್ಬ ಸಾಮಾನ್ಯ ಲಿಂಗಾಯತಾನಾಗಿ ನಾನು ಹೇಳಬಲ್ಲೆ ಎಂದರು.
ಐದು ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರ್ತಿವಿ ಅಂತ ಎಲ್ಲೂ ಸಹ ಸಿದ್ದರಾಮಯ್ಯ ಮಾತಾಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೇಗೆ ಹೊಂದಿಸ್ತಾರೆ ಅಂತ ಎಲ್ಲೂ ಮಾತಾಡಿಲ್ಲ. ಸರ್ಕಾರದ ಮೇಲೆ ಜನರು ಸಂಶಯ ಪಡುವಂತಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಅಭಿವೃದ್ಧಿ ಕೆಲಸ ಸ್ಥಗಿತಗೊಳ್ಳಬಾರದು. ಹೀಗಾಗಿಯೆ ನಾನು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ನಿವೇದನೆ ಮಾಡಿಕೊಂಡಿದ್ದೇನೆ ಎಂದರು.
ವಿವೇಕ ಯೋಜನೆ ನಿಲ್ಲಿಸಬಾರದು ಅದು ಬಿಜೆಪಿಯ ಯೋಜನೆ ಅಲ್ಲ. ಇದಕ್ಕಾಗಿ ಈಗಾಗಲೇ ಎಂಟು ಸಾವಿರ ಕೊಠಡಿ ನಿರ್ಮಾಣಕ್ಕೆ ಮುಂದಾಗಿದೆ. ಸಿದ್ದರಾಮಯ್ಯ ಏನೂ ನಿರ್ಣಯ ಮಾಡುತ್ತಾರೋ ನೋಡೋಣ ಅದರ ಮೇಲೆ ನಮ್ಮ ಹೋರಾಟ ನಿಶ್ಚಯ ಆಗಲಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Mon, 5 June 23