ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳನ್ನು ಆಹ್ವಾನಿಸಿದ ಡಿಕೆಶಿ: ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ನಿಯೋಜಿತ ಮುಖ್ಯಮಂತ್ರಿ
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಖುದ್ದಾಗಿ ಭೇಟಿಯಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ರಾಜಕೀಯ ವೈರತ್ವ ಮರೆತು ದೇವೇಗೌಡರ ಕಾಲಿಗೆ ನಮಸ್ಕರಿಸಿ ಡಿಕೆಶಿ ಅಶೀರ್ವಾದ ಪಡೆದಿರುವುದು ಗಮನ ಸೆಳೆದಿದೆ.

ಬೆಂಗಳೂರು, ಜೂನ್, 03: ಕರ್ನಾಟಕದ ನೂತನ ಸಿಎಂ ಆಗಿ ಇಂದು ಸಂಜೆ ಪ್ರಮಾಣವಚನ ಹಿನ್ನೆಲೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮನೆಗಳಿಗೆ ಖುದ್ದಾಗಿ ತೆರಳಿ ಡಿ.ಕೆ. ಶಿವಕುಮಾರ್ (DK Shivakumar) ಆಹ್ವಾನ ನೀಡಿದ್ದಾರೆ. ಸಂಜೆ 4 ಗಂಟೆ 05 ನಿಮಿಷಕ್ಕೆ ನಡೆಯಲಿರುವ ಪದಗ್ರಹಣಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಡಿಕೆಶಿ ಆಮಂತ್ರಿಸಿದ್ದಾರೆ. ಮೊದಲು ಸಿದ್ದರಾಮಯ್ಯ ನಿವಾಸಕ್ಕೆ ನಿಯೋಜಿತ ಸಿಎಂ ತೆರಳಿದ್ದು, ಈ ವೇಳೆ ಪರಮೇಶ್ವರ್ ಅವರ ಜೊತೆ ಉಪಸ್ಥಿತರಿದ್ದರು.
ಮುಖ್ಯಾಂಶಗಳು
- ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳಿಗೆ ಡಿಕೆಶಿ ಆಹ್ವಾನ
- ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ದೇವೇಗೌಡರಿಗೆ ಆಹ್ವಾನ
- ನಿಯೋಜಿತ ಸಿಎಂರನ್ನು ಈ ವೇಳೆ ಅಭಿನಂದಿಸಿರುವ ನಾಯಕರು
ಬಿಎಸ್ವೈ ಆಶೀರ್ವಾದ ಪಡೆದ ಡಿಕೆಶಿ
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೂ ಡಿಕೆಶಿ ತೆರಳಿದ್ದು, ಈ ವೇಳೆ ಮನೆಯಿಂದ ಹೊರಬಂದು ನಿಯೋಜಿತ ಸಿಎಂರನ್ನು ಬಿಎಸ್ವೈ ಆಲಂಗಿಸಿ ಸ್ವಾಗತಿಸಿದ್ದಾರೆ. ಬಳಿಕ ಮನೆಯ ದೇವರ ಕೋಣೆಗೆ ತೆರಳಿ ಡಿಕೆಶಿ ನಮಸ್ಕರಿಸಿದ್ದು, ಈ ವೇಳೆ ಶಾಲು ಹೊದಿಸಿ ಶಿವಕುಮಾರ್ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ನಾಯಕನಿಂದ ಸಿಎಂ ಗದ್ದುಗೆಯವರೆಗೆ; ಕನಕಪುರ ಬಂಡೆ ಡಿಕೆ ಶಿವಕುಮಾರ್ ರಾಜಕೀಯ ಪಯಣದ ಹಿನ್ನೋಟ
ದೇವೇಗೌಡರ ಕಾಲಿಗೆ ನಮಸ್ಕರಿಸಿದ ಶಿವಕುಮಾರ್
ಇನ್ನು ರಾಜಕೀಯ ವೈರತ್ವ ಮರೆತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸಕ್ಕೂ ತೆರಳಿ ಅವರನ್ನು ಕಾರ್ಯಕ್ರಮಕ್ಕೆ ಡಿಕೆಶಿ ಆಹ್ವಾನಿಸಿದ್ದಾರೆ. ಈ ವೇಳೆ ದೇವೇಗೌಡರ ಕಾಲಿಗೆ ಶಿವಕುಮಾರ್ ನಮಿಸಿದ್ದು, ನಿಯೋಜಿತ ಸಿಎಂರನ್ನು ಹೆಚ್ಡಿಡಿ ಈ ವೇಳೆ ಅಭಿನಂದಿಸಿದ್ದಾರೆ.
ಬಳಿಕ ಮಾತನಾಡಿದ ಡಿಕೆಶಿ, ದೇವೇಗೌಡರು ಮತ್ತು ಯಡಿಯೂರಪ್ಪ ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಸೇವೆ ಸಲ್ಲಿಸಿರುವ ಬೇರೆ ಮುಖ್ಯಮಂತ್ರಿಗಳನ್ನೂ ಸಹ ಭೇಟಿ ಮಾಡುತ್ತೇನೆ. ಹೆಚ್.ಡಿ.ದೇವೇಗೌಡರು ನನಗೆ ಹಲವು ಸಲಹೆ ನೀಡಿದ್ದಾರೆ. ನನ್ನ ತಾಳ್ಮೆಯನ್ನೂ ಸಹ ಮೆಚ್ಚಿಕೊಂಡಿದ್ದಾರೆ. ರಾಜ್ಯಕ್ಕೆ ಒಳ್ಳೆಯದು ಮಾಡುತ್ತೇನೆ ಎಂದು ಅವರಿಗೆ ನಂಬಿಕೆ. ಮುಂದೆಯೂ ಸಹ ಬಂದು ಅವರ ಮಾರ್ಗದರ್ಶನ ಪಡೆಯುವೆ. ಬೆಳಗ್ಗೆ ಸೋನಿಯಾ ಗಾಂಧಿ ಕೂಡ ಕರೆ ಮಾಡಿ ವಿಶ್ ಮಾಡಿದ್ದಾರೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದು ಹೇಳಿರೋದಾಗಿ ಈ ವೇಳೆ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:58 pm, Wed, 3 June 26




